ಪಿಯು ಶಿಕ್ಷಕರಿಗೆ 3 ವರ್ಷದಿಂದ ವರ್ಗಾವಣೆ ಭಾಗ್ಯ ಇಲ್ಲ

By Kannadaprabha News  |  First Published Sep 20, 2021, 8:20 AM IST
  • ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಪ್ರತ್ಯೇಕ ತಿದ್ದುಪಡಿ ಕಾಯ್ದೆ 
  • ಕಾಯ್ದೆ ರೂಪಿಸುವಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ಇಲ್ಲ

ವರದಿ :  ಲಿಂಗರಾಜು ಕೋರಾ

 ಬೆಂಗಳೂರು (ಸೆ.20):  ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಪ್ರತ್ಯೇಕ ತಿದ್ದುಪಡಿ ಕಾಯ್ದೆ ರೂಪಿಸುವಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ಪಿಯು ಉಪನ್ಯಾಸಕರು ಪರಿತಪಿಸುವಂತಾಗಿದೆ.

Tap to resize

Latest Videos

undefined

ಶಾಲಾ ಶಿಕ್ಷಕರ ವರ್ಗಾವಣೆ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವರ್ಗಾವಣೆ ಈ ಹಿಂದೆ ಒಂದೇ ಕಾಯ್ದೆಯಡಿ ನಡೆಯುತ್ತಿತ್ತು. ಅದನ್ನು ತಿದ್ದುಪಡಿ ಮಾಡಿದ ಸರ್ಕಾರ ಶಾಲಾ ಶಿಕ್ಷಕರ ವರ್ಗಾವಣೆಗಾಗಿಯೇ ಪ್ರತ್ಯೇಕ ಕಾಯ್ದೆ ರೂಪಿಸಿದೆ. ಆದೇ ರೀತಿ ಪಿಯು ಉಪನ್ಯಾಸಕರ ವರ್ಗಾವಣೆಗೂ ಪ್ರತ್ಯೇಕ ಕಾಯ್ದೆ ರೂಪಿಸಬೇಕಿದೆ.

ಆದರೆ, 2019ರಿಂದ ಪ್ರತ್ಯೇಕ ಕಾಯ್ದೆ ರೂಪಿಸುವ ಕಾರ್ಯದಲ್ಲಿ ತೊಡಗಿರುವ ಸರ್ಕಾರ ಇದುವರೆಗೂ ಅದನ್ನು ಪೂರ್ಣಗೊಳಿಸಿಲ್ಲ. ಇದರಿಂದ ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಿ ವರ್ಗಾವಣೆಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಪಿಯು ಉಪನ್ಯಾಸಕರ ಪಾಲಿಗೆ ನಿರಾಸೆಯುಂಟಾಗಿದೆ. ಈ ಮಧ್ಯೆ ಕಾಯ್ದೆ ತಿದ್ದುಪಡಿ ಕಾರ್ಯ ತಡವಾಗಲಿದೆ ಎಂಬ ಕಾರಣಕ್ಕೆ ಶಾಲಾ ಶಿಕ್ಷಕರ ವರ್ಗಾವಣೆಗೆ ಮಾಡಿದಂತೆ ಪಿಯು ಉಪನ್ಯಾಸಕರ ವರ್ಗಾವಣೆಗೂ ಸುಗ್ರೀವಾಜ್ಞೆ ತರುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ ಅದೂ ಕೂಡ ಇದುವರೆಗೆ ಕಾರ್ಯಸಾಧುವಾಗಿಲ್ಲ. ಹಾಗಾಗಿ ಸರ್ಕಾರದ ಈ ವಿಳಂಬ ನಡೆಯಿಂದ ಅಸಮಾಧಾನಗೊಂಡಿರುವ ಉಪನ್ಯಾಸಕರು ಪ್ರತಿಭಟನೆಯ ಹಾದಿ ಹಿಡಿಯಲು ಮುಂದಾಗಿದ್ದಾರೆ.

ಟಿಇಟಿಯಲ್ಲಿ 45000 ಶಿಕ್ಷಕರು ಪಾಸ್‌

ರಾಜ್ಯದ 1253 ಪದವಿ ಪೂರ್ವ ಕಾಲೇಜುಗಳಲ್ಲಿ 12,853 ಮಂಜೂರಾದ ಉಪನ್ಯಾಸಕ ಹುದ್ದೆಗಳಿದ್ದು ಈ ಪೈಕಿ ಸುಮಾರು 11500ಕ್ಕೂ ಹೆಚ್ಚು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಕಾರಣದಿಂದ ಕೆಲವು ಹುದ್ದೆಗಳು ಖಾಲಿಯಿವೆ. ಆದರೆ, ಕಳೆದ ಮೂರು ವರ್ಷದಿಂದ ಎದುರಾಗಿರುವ ಕಾನೂನು ತೊಡಕಿನಿಂದ ಸೇವೆಯಲ್ಲಿರುವ ಉಪನ್ಯಾಸಕರಿಗೆ ವರ್ಗಾವಣೆ ಪಡೆಯಲು ಸಾದ್ಯವಾಗುತ್ತಿಲ್ಲ. 2019ರಲ್ಲಿ ಶೇ.5ರಷ್ಟುಉಪನ್ಯಾಸಕರನ್ನು ಮಾತ್ರ ವರ್ಗಾವಣೆ ನಡೆದಿತ್ತು. ಇದರಲ್ಲಿ ದಂಪತಿ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಇತರ ಗಂಭೀರ ಕಾರಣಗಳಿಗೆ ಮಾತ್ರ ಆದ್ಯತೆ ಮೇಲಿನ ವರ್ಗಾವಣೆ ನಡೆದಿದೆ ಎನ್ನುತ್ತಾರೆ ಉಪನ್ಯಾಸಕರು.

‘ಸರ್ಕಾರ ಪಿಯು ಉಪನ್ಯಾಸಕರ ವರ್ಗಾವಣೆಗೆ ತಿದ್ದಪಡಿ ಕಾಯ್ದೆ ಅಥವಾ ಸುಗ್ರೀವಾಜ್ಞೆ ಮೂಲಕ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮಗೆ ಹೋರಾಟದ ಹಾದಿ ಅನಿವಾರ್ಯವಾಗಿದೆ. ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಮಾಣ ಶೇ.15ರಷ್ಟಿದ್ದು ಶಾಲಾ ಶಿಕ್ಷಕರ ವರ್ಗಾವಣೆ ಪ್ರಮಾಣವೂ ಅಷ್ಟೇ ಇದೆ. ಹೀಗಾಗಿ ಪದವಿ ಪೂರ್ವ ಉಪನ್ಯಾಸಕರ ವರ್ಗಾವಣೆ ಪ್ರಮಾಣವನ್ನು ಶೇ.15ಕ್ಕೇರಿಸಬೇಕು. ಆದ್ಯತಾ ವಲಯ ಹೊರತುಪಡಿಸಿ ಸಾಮಾನ್ಯ ವರ್ಗಾವಣೆಗೆ ಶೇ.15ರಷ್ಟುಮೀಸಲಿಡಬೇಕು’ ಎಂದು ರಾಜ್ಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಒತ್ತಾಯಿಸಿದ್ದಾರೆ.

ಇಂದು ಪಿಯು ಬೋರ್ಡ್‌ ಮುಂದೆ ಪ್ರತಿಭಟನೆ

ವರ್ಗಾವಣೆ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೋಮವಾರ ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲೇ ವರ್ಗಾವಣೆಗೆ ಸೂಕ್ತ ತಿದ್ದುಪಡಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದು ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಅನುವು ಮಾಡಿಕೊಡಬೇಕೆಂಬುದು ಉಪನ್ಯಾಸಕರ ಸಂಘ ಆಗ್ರಹಿಸಿದೆ. ಸರ್ಕಾರ ಇದಕ್ಕೆ ಕ್ರಮವಹಿಸದಿದ್ದರೆ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕಾರ, ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳನ್ನೂ ಬಹಿಷ್ಕರಿಸುವ ಬಗ್ಗೆ ಚರ್ಚಿಸಿ ನಿರ್ಧರಿಸುವ ಚಿಂತನೆಯನ್ನೂ ಉಪನ್ಯಾಸಕರು ನಡೆಸಿದ್ದಾರೆ.

click me!