ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ 2,925 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ಇರುತ್ತದೆ. ಕೆಪಿಟಿಸಿಎಲ್ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ಮಂಡಳಿಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಬೆಂಗಳೂರು (ಅ.15): ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವತಿಯಿಂದ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ಭರ್ಜರಿ 2,925 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ, ನೇಮಕಾತಿ ಪ್ರಕ್ರಿಯೆಯ ಅರ್ಜಿ ಸಲ್ಲಿಕೆಯು ಇದೇ ಅ.21ರಿಂದ ಆರಂಭವಾಗಲಿದೆ. ಕೆಪಿಟಿಸಿಎಲ್ ಸೇರಿದಂತೆ ವಿದ್ಯುತ್ ಇಲಾಖೆಯ ಎಲ್ಲ ಮಂಡಳಿಗಳಲ್ಲಿಯೂ ಹುದ್ದೆಗಳ ಭರ್ತಿಗೆ ಮುಂದಾಗಿದೆ.
ಈ ಬಗ್ಗೆ ಸರ್ಕಾರದಿಂದ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅ.21 ರಿಂದ ನ.20ರ ಒಳಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಕಲ್ಯಾಣ ಕರ್ನಾಟಕ ಮತ್ತು ಇತರ ಜಿಲ್ಲೆಗಳಲ್ಲಿಯೂ ನೇಮಕಾತಿ ನಡೆಸಲಾಗುತ್ತಿದೆ. ಅಂದರೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
undefined
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: 945 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ 411 (380 + 31 ಬ್ಯಾಕ್‌ಲಾಗ್) ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 (75 + 6 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಉಳಿದಂತೆ, ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಚೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಸೇರಿ ಎಲ್ಲ ವಿಭಾಗಗಳಲ್ಲಿ ಸೇರಿ 2,268 (1,818 + 450 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೇತನ ವಿವರ: ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಅನ್ವಯ 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಕ್ರೋಢೀಕೃತ ಸಂಭಾವನೆ ನೀಡಲಾಗುತ್ತದೆ. ಆದರೆ, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಕ್ರೋಢೀಕೃತ ಸಂಭಾವನೆ (ಮೊದಲ 3 ವರ್ಷಗಳು) 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಹಾಗೂ 3ನೇ ವರ್ಷ 21,000 ಮಾಸಿಕ ವೇತನ ಸಿಗಲಿದೆ. ಮೂರು ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 28,550- 600(5)-31550-750(5)-35300-950(5)-40050-1200(5)-46050-1450(6)-54750-1650(5)-63000 ರಲ್ಲಿ ಎರಡು 2 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿಯಲ್ಲಿ ಇರಿಸಲಾಗುವುದು.
ಇದನ್ನೂ ಓದಿ: ಕೆಲಸ ಹುಡುಕ್ತಾ ಇರೋರಿಗೆ ಗುಡ್ ನ್ಯೂಸ್, ರಾಜ್ಯದಲ್ಲಿ ಖಾಲಿ ಇರುವ 34,863 ಹುದ್ದೆ ಭರ್ತಿಗೆ ಸಿಎಂ ಸೂಚನೆ!
ವಯೋಮಿತಿಯ ವಿವರ: ಕವಿಪ್ರನಿನಿ ವತಿಯಿಂದ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕನಿಷ್ಠ 18 ವರ್ಷಗಳ ವಯೋಮಿತಿ ಹೊಂದಿರಬೇಕು. ಜೊತೆಗೆ, ಸಾಮಾನ್ಯ ವರ್ಗ 35 ಹಾಗೂ ಆಯಾ ವರ್ಗದವರಿಗೆ ಸಡಿಲಿಕೆಯನ್ನು ಒಳಗೊಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಹತೆ ಮತ್ತು ವಿದ್ಯಾರ್ಹತೆ:
ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಮೇಲೆ ತಿಳಿಸಲಾದ ವಿದ್ಯಾರ್ಹತೆ ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆಯನ್ನು (Equivalent Qualification) ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.