ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳ: ನಿರಾಣಿ

By Suvarna NewsFirst Published Oct 21, 2021, 10:20 PM IST
Highlights

* ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಹಾಗೂ ಉದ್ಯೋಗಗಳ ಸೃಷ್ಟಿ
* ರಾಜ್ಯದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಬಂಡವಾಳ ಹೂಡಿಕೆಗೆ ವಿಶೇಷ ಒಲವು
* ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳ 
*  ಬೃಹತ್ ಮತ್ತು ಮಧ್ಯಮ ಕೈಗಾರಿಕಾ  ಸಚಿವ ಮುರುಗೇಶ್ ನಿರಾಣಿ ವಿಶ್ವಾಸ

ಬೆಂಗಳೂರು,(ಅ.21): ದುಬೈ ಎಕ್ಸ್ ಪೋ 2020' (Dubai Expo 2020) ಭೇಟಿಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ರಾಜ್ಯದಲ್ಲಿ ಅನೇಕ ಪ್ರತಿಷ್ಠಿತ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಉದ್ಯೋಗ ಅವಕಾಶಗಳು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್  ಆರ್‌.  ನಿರಾಣಿ (Murugesh Nirani) ವಿಶ್ವಾಸ ವ್ಯಕ್ತಪಡಿಸಿದರು. 

ಗುರುವಾರ  ಸುದ್ದಿಗೋಷ್ಠಿ ನಡೆಸಿದ ಅವರು, ಮೂರು ದಿನಗಳಲ್ಲಿ ಕಾಲ ನಡೆದ ದುಬೈ ಎಕ್ಸ್ ಪೋ ದಲ್ಲಿ ಐಟಿಬಿಟಿ ಸಚಿವ ಡಾ. ಅಶ್ವಥ್ ನಾರಾಯಣ (Dr Ashwath Narayan), ದುಬೈ-ಭಾರತೀಯ ಕೌನ್ಸಿಲರ್  ಡಾ. ಅಮನ್ ಪುರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಇ.ವಿ.ರಮಣರೆಡ್ಡಿ, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಐಟಿಬಿಟಿ ನಿರ್ದೇಶಕ ಮೀನಾ ನಾಗರಾಜ್,  ಕೆ ಐಎಡಿಬಿ ಸಿಇಒ ಡಾ.ಎನ್.ಶಿವಶಂಕರ ಅಧಿಕಾರಿಗಳ  ನೇತೃತ್ವದ ನಿಯೋಗವು ಉದ್ಯಮಿಗಳನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಮನವರಿಕೆ ಮಾಡಿದೆವು. ಬಹುತೇಕ ಉದ್ಯಮಿಗಳು  ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು  ಆಸಕ್ತಿ ತೋರಿದ್ದಾರೆ ಎಂದು ಹೇಳಿದರು. 

ದುಬೈ ಪ್ರವಾಸದ ಪ್ರತಿಫಲ: ಯುಎಇ ಉದ್ಯಮಿಗಳಿಂದ ಕರ್ನಾಟಕದಲ್ಲಿ ಭಾರೀ ಹೂಡಿಕೆ

ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಲುಲು ಗ್ರೂಪ್, ಮುಬದಾಲ , ಕೆಇಎಪ್ ಹೋಲ್ಡಿಂಗ್ಸ್  ದುಕಬ್, ಎಲೆಕ್ಟ್ರಿಕ್ ವೇ ಡಿಪಿ ವಲ್ಡ್ ,ಅಸ್ಟರ್ ಹೆಲ್ತ್  ಕೇರ್, ಎ.1 ಶಂಶಿ ಟ್ರಾವೆಲರ್ಸ್‌‌ , ಬಿಎಲ್‍ಎಸ್ ಇಂಟರ್ನ್ಯಾಷನಲ್, ಯುನೈಟೆಡ್ ಪಾರ್ಕ್ ಅಂಡ್ ಸರ್ವೀಸ್, ಎಕ್ಸ್ ಪೋರ್ಟ್ ಬಹ್ರೇನ್ ‌, ಎಐಎಂಎಲ, ತಗ್ಲೀಪ್  ಇಂಡಸ್ಟ್ರೀಸ್ ಸೇರಿದಂತೆ ಅನೇಕ ಕಂಪನಿಗಳು ಬಂಡವಾಳ ಹೂಡಿಕೆಗೆ ಸಮ್ಮತಿಸಿದೆ ಎಂದು ತಿಳಿಸಿದರು. 

ಯುನೆಟೆಡ್ ಅರಬ್ ಎಮಿರೈಟ್ ಮೂಲದ ಪ್ರತಿಷ್ಠಿತ ಗಲ್ಫ್ ಇಸ್ಲಾಮಿಕ್ ಇನ್ವೆಸ್ಟಮೆಂಟ್ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ತೆರೆಯಲು ಸಮ್ಮತಿಸಿದೆ. ಮುಂದಿನ ದಿನಗಳಲ್ಲಿ ಸುಮಾರು ₹3500 ಕೋಟಿ ಮುಂದಿನ ವರ್ಷಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಮಾಹಿತಿ ನೀಡಿದರು ‌

ಇತರೆ  ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉದ್ಯೋಗ ಸೃಷ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಮ್ಮಲ್ಲಿರುವ ವಿಶ್ವದರ್ಜೆ ಮೂಲಭೂತ ಸೌಕರ್ಯಗಳ ಕಾರಣಕ್ಕಾಗಿ ಉದ್ಯಮಿಗಳು ಬಂಡವಾಳ ಹೂಡಲು ಆಸಕ್ತಿ ತೋರುತ್ತಿದ್ದಾರೆ. ನೀರು, ವಿದ್ಯುತ್, ಭೂಮಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ವಿವರಿಸಿದರು. 

ಮುಂದಿನ 2022ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 'ಜಾಗತಿಕ ಹೂಡಿಕೆದಾರರ ಸಮಾವೇಶ 'ನಡೆಸಲಿದ್ದೇವೆ. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಉದ್ಯಮಿಗಳು ರಾಜ್ಯಕ್ಕೆ ಆಗಮಿಸುವ ಸಂಭವವಿದೆ. ಜೊತೆಗೆ  ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಲಭಿಸಲಿದೆ ಎಂದು ಮಾಹಿತಿ ನೀಡಿದರು. 

ಬಾಹ್ಯಾಕಾಶ ಕ್ಷೇತ್ರದ ಹೂಡಿಕೆಗೆ ವಿಪುಲ ಅವಕಾಶ*:
ಅಕ್ಟೋಬರ್‌ 15-21ರವರೆ ನಡೆದ ಒಂದು ವಾರದ "ಬಾಹ್ಯಾಕಾಶ ಸಪ್ತಾಹ"ಕ್ಕೆ ಕರ್ನಾಟಕ ಸಾಕ್ಷಿಯಾಯಿತು. ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಪ್ರಾಮುಖ್ಯತೆ ಮತ್ತು ಸಾಮರ್ಥ್ಯವನ್ನು ಪ್ರತಿಪಾದಿಸುವುದರ ಜತೆಗೆ, ರಾಜ್ಯದಲ್ಲಿ ಹೂಡಿಕೆಗೆ ಇರುವ ವಿಸ್ತೃತ ಅವಕಾಶಗಳ ಮೇಲೆ ಬೆಳಕು ಚೆಲ್ಲಿತು. 

ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ಇಂಡಿಯಾ ಪೆವಿಲಿಯನ್‌ನಲ್ಲಿ ನಡೆದ ಸಮಾವೇಶದಲ್ಲಿ ಇಸ್ರೋ ಸೇರಿದಂತೆ ಬಾಹ್ಯಾಕಾಶ ವಲಯದ ಸ್ಟಾರ್ಟ್‌ಅಪ್‌ಗಳು  ಭಾಗವಹಿಸಿದ್ದವು ಎಂದು ಹೇಳಿದರು.

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ‌ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ  ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2ನೇ ಅತಿದೊಡ್ಡ ಉತ್ಪಾದನಾ ‌ರಾಜ್ಯವಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ ಮಾಡುವಂತೆ ಸಚಿವ ಮುರುಗೇಶ್‌ ನಿರಾಣಿ ಮನವಿ ಮಾಡಿದರು.

ಅಂತರಿಕ್ಷ, ಬಾಹ್ಯಾಕಾಶ, ರಕ್ಷಣೆ, ಆರೋಗ್ಯ, ಕೈಮಗ್ಗ, ಆಹಾರ ಸಂಸ್ಕರಣೆ ಸೇರಿದಂತೆ ವಿವಿಧ  ವಲಯಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಮನವರಿಕೆ ಮಾಡಿದ್ದೇವೆ. ಕೆಐಎಡಿಬಿಯಿಂದ ಪಡೆದಿರುವ ಜಮೀನನ್ನು ಕೈಗಾರಿಕೆಗಳ ಉದ್ದೇಶಕ್ಕೆ  ಬಳಸಬೇಕು. ಒಂದು ವೇಳೆ ಯಾರಾದರೂ ಬಳಸಿದ್ದರೆ ಜಮೀನನ್ನು ಹಿಂಪಡೆಯಲಾಗುವುದು. ಈಗಾಗಲೇ ಕೆಲವರಿಗೆ ನೋಟಿಸ್ ಕೂಡ  ನೀಡಲಾಗಿದೆ. ಯಾವುದೇ ಕಾರಣಕ್ಕೂ ಜಮೀನು ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.  

ಇತ್ತೀಚೆಗೆ ಬೆಂಗಳೂರಿನ ಅರಮನೆಯಲ್ಲಿ ನಡೆದ ಉದ್ಯಮಿಯಾಗು, ಉದ್ಯೋಗ ನೀಡು ಕೈಗಾರಿಕಾ ಅದಾಲತ್ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಆಗಮಿಸಿದ್ದರು. ಸ್ಥಳದಲ್ಲಿಯೇ ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನವೆಂಬರ್ 11 ಮತ್ತು  12ರಂದು ಕಲ್ಬುರ್ಗಿಯಲ್ಲಿ ನಡೆದಿದೆ. ಬೆಳಗಾವಿ, ಮೈಸೂರು, ಮಂಗಳೂರು ಮತ್ತು ತುಮಕೂರು ಸೇರಿದಂತೆ ಐದು ಕಂದಾಯ ವಿಭಾಗಗಳಲ್ಲಿ ನಡೆಸಲಿದ್ದೇವೆ ಎಂದರು. 

 ಮನಸೂರೆಗೊಂಡ ಭಾರತದ ಸಂಸ್ಕೃತಿ 
ಇ‌ನ್ನು ಮೂರು ದಿನಗಳ ‌ದುಬೈ ಎಕ್ಸ್ ಪೋ 2020 ನಲ್ಲಿ ಭಾರತದ ಸಂಸ್ಕೃತಿ ಆನಾವರಣಗೊಂಡಿತು. ಬರೋಬ್ಬರಿ 192 ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದ ದುಬೈ ಎಕ್ಸ್‌ಪೋ 2020ರಲ್ಲಿ ಒಂದು ವಾರ ಪಾಲ್ಗೊಂಡಿದ್ದ ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಉದ್ಯಮ ಮತ್ತು ಹೂಡಿಕೆ ಸಾಮರ್ಥ್ಯ ಪ್ರದರ್ಶಿಸಿತು.

'ಕರ್ನಾಟಕ- ನೌ & ಬಿಯಾಂಡ್': 
'ಕರ್ನಾಟಕ- ನೌ & ಬಿಯಾಂಡ್' ವಿಶಿಷ್ಟ ಕಾರ್ಯಕ್ರಮದ ಮೂಲಕ ಗಲ್ಫ್‌ ಸೇರಿದಂತೆ ವಿಶ್ವದ 200ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳಿಗೆ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂದು ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾಗಿದೆ. ಎಕ್ಸ್‌ಪೋದಲ್ಲಿ ಏರೋಸ್ಪೇಸ್‌, ಡಿಫೆನ್ಸ್‌, ಸ್ಟಾರ್ಟ್‌ಅಪ್‌ ಸಮಾವೇಶಗಳನ್ನು ಆಯೋಜಿಸುವ ಮೂಲಕ ಈ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಮಾಹಿತಿಯನ್ನು ಅಲ್ಲಿ ಸೇರಿದ್ದ ಉದ್ಯಮಿಗಳ ಮುಂದಿಟ್ಟಿದೆ. ಇದಲ್ಲದೇ, ಸ್ಟಾರ್ಟ್‌ಅಪ್‌ಗಳ ಜತೆಗೆ ಪ್ರತ್ಯೇಕ ಸಭೆ ನಡೆಸುವ ಜತೆಗೆ ಉದ್ಯಮ ಲೋಕದ ದಿಗ್ಗಜರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಲಾಯಿತು.  ಮುಖ್ಯವಾಗಿ, ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ಬಂಡವಾಳ ಹೂಡುವವರಿಗೆ ನೀಡುತ್ತಿರುವ ಸವಲತ್ತು ಸೇರಿದಂತೆ ಹಲವು ಸುಧಾರಣಾ ಕ್ರಮಗಳಿಂದ  ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವುದನ್ನು ಈ ಎಕ್ಸ್‌ಪೋದಲ್ಲಿ ರುಜುವಾತು ಪಡಿಸಿತು.  

ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ರಮಣರೆಡ್ಡಿಘಿ, ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

click me!