ವರ್ಗಾವಣೆಗೆ 71000 ಶಿಕ್ಷಕರಿಂದ ಅರ್ಜಿ: ಕೌನ್ಸೆಲಿಂಗ್‌ ಎಂದಿನಿಂದ..?

By Kannadaprabha NewsFirst Published Dec 2, 2020, 8:04 AM IST
Highlights

ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ.  ಶಿಕ್ಷಕರ ವರ್ಗಾವಣೆಗೆ ಶೀಘ್ರವೇ ಕೌನ್ಸಿಲಿಂಗ್ ಕೂಡ ಶುರುವಾಗಲಿದೆ 

ಬೆಂಗಳೂರು (ಡಿ.02):  ಶಾಲಾ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿ ನ.30ಕ್ಕೆ ಪೂರ್ಣಗೊಂಡಿದ್ದು, ವಿವಿಧ ವಿಭಾಗದಲ್ಲಿ ವರ್ಗಾವಣೆ ಕೋರಿ ಒಟ್ಟು 71,558 ಅರ್ಜಿ ಸ್ವೀಕೃತಗೊಂಡಿದ್ದು, ಡಿ. 16ರಿಂದ ಕೌನ್ಸೆಲಿಂಗ್‌ ನಡೆಯಲಿದೆ.

ಕೋರಿಕೆ ವರ್ಗಾವಣೆಯಡಿ 63952, ಪರಸ್ಪರ ವರ್ಗಾವಣೆಯಡಿ 3458, ನಿರ್ದಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆಗೆ 10920, ಕಳೆದ ಸಾಲಿನ ಕಡ್ಡಾಯ ಅಥವಾ ಹೆಚ್ಚುವರಿ ವರ್ಗಾವಣೆಯಲ್ಲಿ ಅನಾನುಕೂಲವಾದ ಶಿಕ್ಷಕರ ವರ್ಗಾವಣೆಗೆ 3058 ಅರ್ಜಿ ಸೇರಿ ಒಟ್ಟಾರೆಯಾಗಿ 71558 ಅರ್ಜಿಗಳು ಸ್ವೀಕೃತಗೊಂಡಿವೆ. ಡಿ.11ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಈ ಎಲ್ಲ ಅರ್ಜಿಗಳ ಪರಿಶೀಲಿಸಿ, ಅನುಮೋದನೆ ಮಾಡಲಿದ್ದಾರೆ. ಡಿ.15ಕ್ಕೆ ವರ್ಗಾವಣೆಗೆ ಅರ್ಹ, ಅನರ್ಹ ಶಿಕ್ಷಕರ ಪಟ್ಟಿಸಿದ್ಧವಾಗಲಿದೆ. ಆ ಪಟ್ಟಿಗೆ ಶಿಕ್ಷಕರಿಂದ ಆಕ್ಷೇಪಣೆ ಆಹ್ವಾನ, ಪರಿಶೀಲನೆ ಎಲ್ಲ ಮುಗಿಸಿ, ಡಿ.31ರಂದು ಅಂತಿಮ ಆದ್ಯತಾ ಪಟ್ಟಿಪ್ರಕಟಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಸರ್ಕಾರಿ ನೇಮಕಾತಿ: ಹೆಚ್ಚು ಅಂಕ ಇದ್ದರೆ GMನಲ್ಲೇ ಹುದ್ದೆ ..

ಕೌನ್ಸೆಲಿಂಗ್‌ ವಿವರ: ಕಳೆದ ಸಾಲಿನ ಕಡ್ಡಾಯ ಅಥವಾ ಹೆಚ್ಚುವರಿ ವರ್ಗಾವಣೆಯಲ್ಲಿ ಅನಾನುಕೂಲವಾದ ಶಿಕ್ಷಕರ (ಪ್ರಾಥಮಿಕ, ಪ್ರೌಢ) ಕೌನ್ಸೆಲಿಂಗ್‌ ಡಿ.16ರಿಂದ ಡಿ.19ರವರೆಗೆ ನಡೆಯಲಿದೆ. 

ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಐದು ವರ್ಷಗಳ ಅವಧಿ ಪೂರೈಸಿದ ಶಿಕ್ಷಕರ ಕೌನ್ಸೆಲಿಂಗ್‌ ಡಿ.21ರಿಂದ 23ರವರೆಗೆ ನಡೆಯಲಿದೆ. ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ಕೌನ್ಸೆಲಿಂಗ್‌ ನಡೆಯಲಿದ್ದು, ಜ.4ರಿಂದ ಜ.20ರವರೆಗೂ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯಲಿದೆ. ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ಕೌನ್ಸೆಲಿಂಗ್‌ ನಡೆಯಲಿದ್ದು, ಜ.13ರಿಂದ ಜ.30ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆಯನ್ನು ನಿರ್ದಿಷ್ಟತಂತ್ರಾಂಶದ ಮೂಲಕವೇ ನಡೆಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಸೂಚನೆ ನೀಡಿದ್ದಾರೆ.

click me!