ಸರ್ಕಾರಿ ನೌಕರರಿಗೆ ಕಹಿಸುದ್ದಿ, ಎಂಟನೇ ವೇತನ ಆಯೋಗ ರಚನೆ ಸದ್ಯಕ್ಕಿಲ್ಲ

By Sharath Sharma  |  First Published Aug 9, 2022, 1:09 PM IST

8th Pay Commission Updates: ಕೇಂದ್ರ ಸರ್ಕಾರದ ನೌಕರರಿಗೆ ಕಹಿ ಸುದ್ದಿ ಕೇಳಿ ಬಂದಿದ್ದು, ಸದ್ಯ ಎಂಟನೇ ವೇತನ ಆಯೋಗವನ್ನು ರಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ಸಚಿವಾಲಯದ ತಿಳಿಸಿದೆ. 


ನವದೆಹಲಿ: ಎಂಟನೇ ವೇತನ ಆಯೋಗದ ರಚನೆ ಸದ್ಯಕ್ಕಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ಸಂಬಳ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಬೇಸರ ಮೂಡಿಸಿದೆ. ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಪಂಕಜ್‌ ಚೌಧರಿ, "ಎಂಟನೇ ವೇತನ ಆಯೋಗವನ್ನು ರಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದೆ ಸಧ್ಯ ಇಲ್ಲ," ಎಂದಿದ್ದಾರೆ. "ಕೇಂದ್ರ ಸರ್ಕಾರಿ ನೌಕರರ ಸಂಬಳ ರಿವೈಸ್‌ ಮಾಡಲು ಎಂಟನೇ ವೇತನ ಆಯೋಗ ರಚನೆ ಕುರಿತಾದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ," ಎಂದು ಅವರು ಉತ್ತರಿಸಿದ್ದಾರೆ. 

ಎಂಟನೇ ವೇತನ ಆಯೋಗ ಸರಿಯಾದ ಸಮಯಕ್ಕೆ ರಚನೆಯಾದರೆ, 2026ರ ಜನವರಿ 1ರಂದು ಕೇಂದ್ರ ಸರ್ಕಾರಿ ನೌಕರರ ಸಂಬಳ ಪರಿಷ್ಕರಣೆ ಮಾಡಬಹುದು. "ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಕಾಲಕಾಲಕ್ಕೆ ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡುತ್ತದೆ. ಜತೆಗೆ ಪ್ರತಿ ಆರು ತಿಂಗಳಿಗೆ ತುಟ್ಟಿ ಭತ್ಯೆ ಮತ್ತು ಇತರೆ ಭತ್ಯೆಗಳನ್ನು ಸಹ ಸರ್ಕಾರ ಹೆಚ್ಚಿಸುತ್ತದೆ. ಹಣದುಬ್ಬರದ ಆಧಾರದ ಮೇಲೆ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲಾಗುತ್ತದೆ. ಇಂಡಸ್ಟ್ರಿಯಲ್‌ ಉದ್ಯೋಗಿಗಳ ಭತ್ಯೆಗಳನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪರಿಷ್ಕರಿಸುತ್ತದೆ, ಎಂದು ಸಚಿವ ಚೌಧರಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 

Tap to resize

Latest Videos

undefined

ಇದನ್ನೂ ಓದಿ: 7th Pay Commission:ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 26,000ರೂ.ಗೆ ಏರಿಕೆ; ವರದಿಗಳು ಏನ್ ಹೇಳುತ್ತವೆ?

ಹಣಕಾಸು ವರ್ಷಾಂತ್ಯಕ್ಕೆ ತುಟ್ಟಿ ಭತ್ಯೆ ಹೆಚ್ಚಳ:

ಈಗಾಗಲೇ ಪರಿಷ್ಕರಿಸಲಾಗಿರುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಈ ಹಣಕಾಸು ವರ್ಷಾಂತ್ಯ ಅಂದರೆ 2023ರ ಮಾರ್ಚ್‌ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ನೌಕರರು ಹಲವು ತಿಂಗಳುಗಳಿಂದ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ದೇಶದಲ್ಲಿ ಹಣದುಬ್ಬರ ಶೇಕಡ 7ಕ್ಕಿಂದ ಏರಿಕೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಕೇಂದ್ರ ಸರ್ಕಾರದ ಮಂತ್ರಿ ಮಂಡಲದ ಮುಂದೆ ತುಟ್ಟಿ ಭತ್ಯೆ ಹೆಚ್ಚಳದ ಪ್ರಸ್ತಾವನೆಯಿದ್ದು, ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ದೊರೆಯುವ ಸಾಧ್ಯತೆಯಿದೆ. ಮೂಲಗಳ ಮಾಹಿತಿ ಪ್ರಕಾರ ಶೇಕಡ 3ರಿಂದ ಶೇ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ: ಜುಲೈನಲ್ಲಿ ಹೆಚ್ಚಾಗಲಿದೆ ಡಿಎ? ಕೇಂದ್ರ ಸರ್ಕಾರಿ ನೌಕರರ ಸಂಬಳ ಮತ್ತೆ ಏರಿಕೆ..

2021ರ ಜುಲೈ ತಿಂಗಳಲ್ಲಿ 17% ಇದ್ದ ತುಟ್ಟಿ ಭತ್ಯೆಯನ್ನು 28%ಗೆ ಕೇಂದ್ರ ಸರ್ಕಾರ ಏರಿಸಿತ್ತು. ಏಳನೇ ವೇತನ ಆಯೋಗದ ಶಿಫಾರಸ್ಸಿನ ನಂತರ ಸರ್ಕಾರ ಈ ನಿರ್ಧಾರ ತಳೆದಿತ್ತು. ನಂತರ ಮಂತ್ರಿ ಮಂಡಲ ಅಕ್ಟೋಬರ್‌ ತಿಂಗಳಲ್ಲಿ ಮತ್ತೆ ಶೇಕಡ 3ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿತ್ತು. 2022ರಲ್ಲೂ ಶೇಕಡ 3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಸದ್ಯ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ಒಟ್ಟೂ 34% ತುಟ್ಟಿ ಭತ್ಯೆ ಪಡೆಯುತ್ತಿದ್ದಾರೆ. 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಈ ಸೌಲಭ್ಯ ಪಡೆಯುತ್ತಿದ್ದಾರೆ. 
2014ರ ಫೆಬ್ರವರಿಯಲ್ಲಿ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿತ್ತು. ಪ್ರತಿ ಹತ್ತು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗವನ್ನು ಕೇಂದ್ರ ಸರ್ಕಾರ ರಚಿಸುತ್ತದೆ. ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಯನ್ನು ಜಾರಿಗೆ ತರುತ್ತದೆ.

click me!