
ಕಳೆದ ವರ್ಷ 14 ಗಂಟೆಗಳ ಕೆಲಸದ ದಿನವನ್ನು ಸಮರ್ಥಿಸಿದ್ದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದ್ದ ಭಾರತೀಯ ಮೂಲದ ಅಮೆರಿಕಾದ ಉದ್ಯಮಿ ಮತ್ತು AI ಸ್ಟಾರ್ಟ್‌ಅಪ್ ಗ್ರೆಪ್ಟೈಲ್ (Grephtile) ಸಂಸ್ಥಾಪಕ ದಕ್ಷ ಗುಪ್ತಾ, ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ದೀರ್ಘ ಸಮಯದ ಕೆಲಸ ಮತ್ತು ಕಟ್ಟುನಿಟ್ಟಿನ ಕೆಲಸದ ಸಂಸ್ಕೃತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಗತ್ಯ ಎಂದು ಅವರು ಇನ್ನೂ ವಿಶ್ವಾಸ ಹೊಂದಿದ್ದಾರೆ. ದಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್ ಪ್ರಕಟಿಸಿದ ಇತ್ತೀಚಿನ ಲೇಖನದಲ್ಲಿ, ಗುಪ್ತಾವರನ್ನು AI ಬೂಮ್‌ನ ಗ್ರಿಂಡ್‌ಕೋರ್ ಸಂಸ್ಕೃತಿಯ ಪೋಸ್ಟರ್ ಬಾಯ್ ಎಂದು ಕರೆಯಲಾಗಿದೆ. ಲೇಖನದಲ್ಲಿ ಸಿಲಿಕಾನ್ ವ್ಯಾಲಿಯ ಬಹುತೇಕ ತಂತ್ರಜ್ಞರು ಇನ್ನೂ ದಿನಕ್ಕೆ 12 ಗಂಟೆಗಳು, ವಾರದಲ್ಲಿ ಆರು ದಿನಗಳು ದುಡಿಯಲು ಆಸಕ್ತರಾಗಿದ್ದಾರೆ ಎಂಬ ಗುಪ್ತಾ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಗುಪ್ತಾ ಅವರ ಪ್ರಕಾರ, ಇಂದಿನ ಯುವ ತಂತ್ರಜ್ಞರ ಪೀಳಿಗೆಯ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ಇವರ ಪ್ರಪಂಚವೆಂದರೆ ಮದ್ಯಪಾನ ಬೇಡ, ಮಾದಕ ದ್ರವ್ಯ ಬೇಡ, ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ವಾರಕ್ಕೆ ಆರು ದಿನ ಕೆಲಸ (9-9-6), ಜಿಮ್‌ನಲ್ಲಿ ಭಾರ ಎತ್ತುವುದು, ದೂರ ಓಡುವುದು, ಬೇಗ ಮದುವೆಯಾಗುವುದು, ನಿದ್ರೆಯನ್ನು ಟ್ರ್ಯಾಕ್ ಮಾಡುವುದು, ಸ್ಟೀಕ್ ಮತ್ತು ಮೊಟ್ಟೆ ತಿನ್ನುವುದು ಎಂದು ಅವರು ವಿವರಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ, ಬರ್ನಿಂಗ್ ಮ್ಯಾನ್ ಉತ್ಸವದಂತಹ ಕಾರ್ಯಕ್ರಮಗಳು ಈಗ ಯುವ ಪೀಳಿಗೆಯ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಬದಲಿಗೆ, ಕೆಲಸ, ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನ ಶೈಲಿಯೇ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ಕಳೆದ ವಾರ ಗುಪ್ತಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿನ ಹಲವಾರು ಹುದ್ದೆಗಳ ನೇಮಕಾತಿ ಪ್ರಕಟಿಸಿದರು. ಆದರೆ, ಈ ಹುದ್ದೆಗಳಿಗೆ ಆಯ್ಕೆಯಾದವರು ದಿನಕ್ಕೆ 12 ರಿಂದ 14 ಗಂಟೆಗಳವರೆಗೆ ಕಚೇರಿಯಿಂದಲೇ ಕೆಲಸ ಮಾಡಬೇಕಾಗುತ್ತದೆ. ರಿಮೋಟ್ ಕೆಲಸಕ್ಕೆ ಅವಕಾಶವಿಲ್ಲ.
ಕಳೆದ ವರ್ಷ, ದಕ್ಷ ಗುಪ್ತಾ ತಮ್ಮ ಕೆಲಸದ ಸಂಸ್ಕೃತಿಯನ್ನು “ರಾಕೆಟ್ ಉಡಾವಣೆ”ಗೆ ಹೋಲಿಸಿ, “14 ಗಂಟೆಗಳ ದುಡಿಮೆ ನಮ್ಮ ಗುರಿಯನ್ನು ಸಾಧಿಸಲು ಅವಶ್ಯಕ” ಎಂದು ಹೇಳಿದ್ದರು.
“ನೀವು ಕೆಲಸ-ಜೀವನ ಸಮತೋಲನವನ್ನು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರೆ, ಅದು ಒಳ್ಳೆಯದೇ. ಅಂತಹ ಕೆಲಸದ ಪರಿಸರವನ್ನು ನೀಡುವ ಹಲವಾರು ಕಂಪನಿಗಳು ಇವೆ ಮತ್ತು ಅವು ಬಹಳ ಯಶಸ್ವಿಯಾಗಿವೆ. ಆದರೆ ನಮ್ಮ ಕಂಪನಿ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ.”
ಟೀಕೆಗಳ ನಡುವೆಯೂ ದಕ್ಷ ಗುಪ್ತಾ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ತರಿಲ್ಲ. “ಹೆಚ್ಚಿನ ಪರಿಶ್ರಮವೇ ಯಶಸ್ಸಿನ ಮಾರ್ಗ” ಎಂಬುದೇ ಅವರ ಸಂದೇಶ. ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವವರು, ಸಾಮಾನ್ಯ ಸಮಯದ ಕೆಲಸದಿಂದ ಅದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದಾರೆ.
ದಕ್ಷ ಗುಪ್ತಾ – ಭಾರತೀಯ ಮೂಲದ ಅಮೆರಿಕನ್ ಸಿಇಒ.
ದಿನಕ್ಕೆ 12–14 ಗಂಟೆಗಳ ದುಡಿಮೆ – ವಾರಕ್ಕೆ 6 ದಿನ ಕಡ್ಡಾಯ.
ರಿಮೋಟ್ ಕೆಲಸಕ್ಕೆ ಅವಕಾಶವಿಲ್ಲ.
ಉನ್ನತ ವೇತನ + ಈಕ್ವಿಟಿ + ಸೌಲಭ್ಯಗಳು.
ಕೆಲಸದ ಸಂಸ್ಕೃತಿಯನ್ನು “ರಾಕೆಟ್ ಉಡಾವಣೆ”ಗೆ ಹೋಲಿಕೆ.