IPL ಆರಂಭಕ್ಕೆ ಡೇಟ್ ಫೈನಲ್: ಹೊಡಿಬಡಿಯಾಟಕ್ಕೆ ದಿನಗಣನೆ ಆರಂಭ..!

By Kannadaprabha News  |  First Published Jul 24, 2020, 7:51 AM IST

ಈ ವರ್ಷ ಐಪಿಎಲ್ ಯಾವಾಗ ನಡೆಯುತ್ತೆ ಎಂದು ಚಾತಕ ಪಕ್ಷಿಗಳಂತೆ ಕಾದುಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಮೂಲಗಳಿಂದ ಕೊನೆಗೂ ಗುಡ್‌ ನ್ಯೂಸ್ ಸಿಕ್ಕಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ದಿನಾಂಕ ಪ್ರಕಟಗೊಂಡಿದ್ದು, ಫೈನಲ್ ಪಂದ್ಯದ ದಿನಾಂಕ ಕೂಡಾ ಅಂತಿಮಗೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಜು.24): ಬಹುನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಯುಎಇನಲ್ಲಿ ನಡೆಯುವುದು ಬಹುತೇಕ ಖಚಿತವಾದ ಬೆನ್ನಲ್ಲೇ, ಪಂದ್ಯಾವಳಿಯ ದಿನಾಂಕವೂ ಹೊರಬಿದ್ದಿದೆ. ಸೆ.19ರಿಂದ ಯುಎಇನಲ್ಲಿ ಪಂದ್ಯಾವಳಿಗಳು ಆರಂಭವಾಗಲಿದ್ದು, ನ.8ಕ್ಕೆ ಫೈನಲ್‌ ಪಂದ್ಯಾವಳಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

51 ದಿನಗಳ ಕಾಲ ನಡೆಯಲಿರುವ ಟೂರ್ನಿಗಾಗಿ, ಆಗಸ್ಟ್‌ 20ರಂದೇ ಎಲ್ಲಾ 8 ತಂಡಗಳು ಯುಎಇಗೆ ಪ್ರಯಾಣಿಸಲಿದ್ದು, ಒಂದು ತಿಂಗಳುಗಳ ಕಾಲ ತರಬೇತಿಯಲ್ಲಿ ನಿರತವಾಗಲಿವೆ ಎನ್ನಲಾಗಿದೆ. ಐಪಿಎಲ್‌ ಆಡಳಿತ ಮಂಡಳಿ ಮುಂದಿನ ವಾರ ಸಭೆ ನಡೆಸಲಿದ್ದು, ಬಳಿಕ ಪಂದ್ಯಾವಳಿ ಕುರಿತು ವಿಸ್ತೃತ ಮಾಹಿತಿಯನ್ನು ಪ್ರಕಟಿಸಲಿವೆ ಎನ್ನಲಾಗಿದೆ.

Latest Videos

undefined

ಐಪಿಎಲ್‌ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಗೆ ಕಾಯ್ತಿದ್ದೇವೆ: ಇಸಿಬಿ

ಈ ಮೊದಲು ಸೆಪ್ಟೆಂಬರ್‌ 26 ರಿಂದ ನವೆಂಬರ್‌ 7ರವರೆಗೂ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿತ್ತು. ಆದರೆ ಆಸ್ಪ್ರೇಲಿಯಾ ಸರಣಿಗೆ ತೆರಳಲಿರುವ ಭಾರತ ತಂಡ, ಆಸೀಸ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ ದಿನಾಂಕ ಹಿಂದೂಡಿಕೆ ಮಾಡಿ ಟೀಂ ಇಂಡಿಯಾಕ್ಕೆ ಹೆಚ್ಚಿನ ಕಾಲಾವಕಾಶ ಕಲ್ಪಿಸಲಾಗಿದೆ.

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಕೆಲವೇ ದಿನಗಳ ಹಿಂದಷ್ಟೇ ಮುಂದೂಡಿತ್ತು. ಇದರ ಬೆನ್ನಲ್ಲೇ ಐಪಿಎಲ್ ಆಯೋಜನೆ ವಿಚಾರ ಚುರುಕು ಪಡೆದುಕೊಂಡಿತ್ತು. ಈ ಹಿಂದೆ ಸೌರವ್ ಗಂಗೂಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಿಯೇ ಸಿದ್ಧ ಎನ್ನುವ ಮಾತುಗಳನ್ನು ಆಡಿದ್ದರು. ಈ ಮೂಲಕ ದಾದ ಕೊಟ್ಟ ಮಾತನ್ನು ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ

 

click me!