13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿ ನಡೆಯುವುದು ಬಹುತೇಕ ಪಕ್ಕಾ ಎನಿಸಿದೆ, ಆದಾಗಿಯೂ ಬಿಸಿಸಿಐ ಅಧಿಕೃತ ಹೇಳಿಕೆಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಕಾಯುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಜು.23): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸುವುದರ ಬಗ್ಗೆ ಬಿಸಿಸಿಐನ ಅಧಿಕೃತ ಹೇಳಿಕೆಗಾಗಿ ಕಾಯುತ್ತಿದ್ದೇವೆ ಎಂದು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿದೆ.
ವಿದೇಶದಲ್ಲಿ ಐಪಿಎಲ್ ನಡೆಸಲು ಭಾರತ ಸರ್ಕಾರದ ಒಪ್ಪಿಗೆಗೆ ಬಿಸಿಸಿಐ ಕಾಯುತ್ತಿದೆ. ಆ ಬಳಿಕ ಇಸಿಬಿಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆ ರವಾನಿಸಲಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದೆ ಎನ್ನಲಾಗಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದರು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಕೊರೋನಾ ಭೀತಿಯಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ ಬಿಸಿಸಿಐ ಐಪಿಎಲ್ ಆಯೋಜಿಸುವ ಹಾದಿ ಮತ್ತಷ್ಟು ಸುಗಮವಾದಂತೆ ಆಗಿದೆ. ಆದರೆ ಐಪಿಎಲ್ ಎಲ್ಲಿ ಜರುಗಲಿದೆ ಎನ್ನುವುದನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸದಿದ್ದರೂ, ಬಹುತೇಕ ದುಬೈನಲ್ಲೇ ಟೂರ್ನಿ ನಡೆಯುವುದು ಪಕ್ಕಾ ಎನ್ನುತ್ತಿವೆ ಹಲವು ಕ್ರೀಡಾ ವರದಿಗಳು.
ಸೆ.26 ರಿಂದ ನ.8ರ ವರೆಗೆ IPL ಟೂರ್ನಿ; BCCI ವೇಳಾಪಟ್ಟಿಗೆ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ!
ಈ ಹಿಂದೆ 2014ರಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದರಿಂದ ಅರ್ಧ ಐಪಿಎಲ್ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿತ್ತು. ಅಲ್ಲದೇ ಯುಎಇನಲ್ಲಿನ ಮೂರು ಮೈದಾನಗಳ ಅಕ್ಕಪಕ್ಕದಲ್ಲೇ ಹೋಟೆಲ್‌ಗಳು ಇರುವುದರಿಂದ ಬಯೋ ಸೆಕ್ಯೂರ್ ಝೋನ್ ನಿರ್ಮಿಸಿ ಟೂರ್ನಿ ಆಯೋಜಿಸುವುದು ಬಿಸಿಸಿಐಗೆ ಕಷ್ಟವಾಗುವುದಿಲ್ಲ. ಆದರೆ ಪ್ರೇಕ್ಷಕರ ಪ್ರವೇಶಕ್ಕೆ ಅನುವು ಮಾಡಿಕೊಡುವ ವಿಚಾರ ಆ ದೇಶದ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.