IPL 2020: ಇಂದಿನಿಂದ ಆರ್‌ಸಿಬಿ ಕಪ್‌ ಹುಡುಕಾಟ!

By Kannadaprabha NewsFirst Published Sep 21, 2020, 8:54 AM IST
Highlights

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಚೊಚ್ಚಲ ಐಪಿಎಲ್ ಕಪ್ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ

ದುಬೈ(ಸೆ.21): ಕಳೆದ 3 ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ತೋರಿ ಪ್ಲೇ-ಆಫ್‌ಗೂ ಪ್ರವೇಶ ಪಡೆಯದ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ತಂಡ, 2020ರ ಐಪಿಎಲ್‌ನಲ್ಲಿ ಸೋಮವಾರ ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸ​ರ್‍ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

"

ಆಸ್ಪ್ರೇಲಿಯಾದ ನಾಯಕ ಆರೋನ್‌ ಫಿಂಚ್‌, ದ.ಆಫ್ರಿಕಾದ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಸೇರ್ಪಡೆಯಿಂದ ಆರ್‌ಸಿಬಿ ತನ್ನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡಿದೆ. ಆದರೆ ಈ ಇಬ್ಬರು ನಿರೀಕ್ಷೆ ಉಳಿಸಿ ಕೊಳ್ಳುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅಲ್ಲದೇ ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯ​ರ್‍ಸ್ ಮೇಲಿನ ಜವಾಬ್ದಾರಿ ಕಡಿಮೆ ಏನೂ ಆಗಿಲ್ಲ. ಈ ಇಬ್ಬರೇ ಆರ್‌ಸಿಬಿಯ ಟ್ರಂಪ್‌ ಕಾರ್ಡ್ಸ್. ಎಬಿಡಿ, ಈ ವರ್ಷ ವಿಕೆಟ್‌ ಕೀಪಿಂಗ್‌ ಸಹ ಮಾಡಿದರೂ ಅಚ್ಚರಿಯಿಲ್ಲ.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣ ವೇಳಾಪಟ್ಟಿ!

ಪಡಿಕ್ಕಲ್‌ ಮೇಲೆ ಕಣ್ಣು:

ಕಳೆದ ವರ್ಷ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಅಬ್ಬರಿಸಿದ್ದ ಕರ್ನಾಟಕದ ಯುವ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್‌ ಪಡಿಕ್ಕಲ್‌ ಆಸೀಸ್‌ ನಾಯಕ ಫಿಂಚ್‌ ಜೊತೆ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಮೋಯಿನ್‌ ಅಲಿ, ಶಿವಂ ದುಬೆಗೆ ತಂಡ ಫಿನಿಶರ್‌ಗಳ ಪಾತ್ರ ನೀಡಬಹುದು. ಯುಜುವೇಂದ್ರ ಚಹಲ್‌ ಸ್ಪಿನ್‌ ಪಡೆಯನ್ನು ಮುನ್ನಡೆಸಲಿದ್ದು, ವಾಷಿಂಗ್ಟನ್‌ ಸುಂದರ್‌ ಸಾಥ್‌ ನೀಡಲಿದ್ದಾರೆ. ನವ್‌ದೀಪ್‌ ಸೈನಿ, ಉಮೇಶ್‌ ಯಾದವ್‌ ವೇಗದ ಬೌಲಿಂಗ್‌ ಹೊಣೆ ಹೊರಲಿದ್ದಾರೆ. ಈ ಹಿಂದಿನ ಆವೃತ್ತಿಗಳಿಗಿಂತ ಆರ್‌ಸಿಬಿ ಹೆಚ್ಚು ಸಮತೋಲನದಿಂದ ಕೂಡಿರುವುದರಲ್ಲಿ ಅನುಮಾನಲ್ಲ.

ವಾರ್ನರ್‌ ಭಯ!:

3 ಬಾರಿ ಕಿತ್ತಳೆ ಕ್ಯಾಪ್‌ ವಿಜೇತ ಡೇವಿಡ್‌ ವಾರ್ನರ್‌, ಸನ್‌ರೈಸ​ರ್‍ಸ್ ತಂಡವನ್ನು ಮುನ್ನಡೆಸಲಿದ್ದು ಇಂಗ್ಲೆಂಡ್‌ನ ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೋವ್‌, ಆರಂಭಿಕನಾಗಿ ವಾರ್ನರ್‌ಗೆ ಸಾಥ್‌ ನೀಡಲಿದ್ದಾರೆ. ಈ ಜೋಡಿ ಕಳೆದ ವರ್ಷ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಕನ್ನಡಿಗ ಮನೀಶ್‌ ಪಾಂಡೆ ಮಧ್ಯಮ ಕ್ರಮಾಂಕದಲ್ಲಿರುವ ಏಕೈಕ ಅನುಭ ಆಟಗಾರ. ಸನ್‌ರೈಸ​ರ್‍ಸ್ ಈ ಬಾರಿಯೂ ತನ್ನ ಬೌಲರ್‌ಗಳ ಮೇಲೆಯೇ ಹೆಚ್ಚು ಅವಲಂಬಿತಗೊಳ್ಳಲಿದೆ.

ಒಟ್ಟು ಮುಖಾಮುಖಿ: 14

ಆರ್‌ಸಿಬಿ: 06

ಸನ್‌ರೈಸ​ರ್‍ಸ್: 08

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಆರೋನ್‌ ಫಿಂಚ್‌, ದೇವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿ ವಿಲಿಯ​ರ್‍ಸ್, ಶಿವಂ ದುಬೆ, ಮೋಯಿನ್‌ ಅಲಿ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್‌ ಸುಂದರ್‌, ನವ್‌ದೀಪ್‌ ಸೈನಿ, ಉಮೇಶ್‌ ಯಾದವ್‌, ಯುಜುವೇಂದ್ರ ಚಹಲ್‌.

ಸನ್‌ರೈಸ​ರ್‍ಸ್: ಡೇವಿಡ್‌ ವಾರ್ನರ್‌(ನಾಯಕ), ಜಾನಿ ಬೇರ್‌ಸ್ಟೋವ್‌, ಮನೀಶ್‌ ಪಾಂಡೆ, ಪ್ರಿಯಂ/ವಿರಾಟ್‌ ಸಿಂಗ್‌, ಜಯ್‌ ಶಂಕರ್‌, ಮೊಹಮದ್‌ ನಬಿ, ರಶೀದ್‌ ಖಾನ್‌, ಅಭಿಷೇಕ್‌ ಶರ್ಮಾ, ಭುವನೇಶ್ವರ್‌, ಸಂದೀಪ್‌ ಶರ್ಮಾ, ಖಲೀಲ್‌ ಅಹ್ಮದ್‌.

ಪಿಚ್‌ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ತಕ್ಕಮಟ್ಟಿಗಿನ ನೆರವು ನೀಡಲಿದ್ದು, ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಸಂಜೆ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದ್ದು, 2ನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ಹಾಗೂ ಬೌಲಿಂಗ್‌ ಕಷ್ಟವಾಗಲಿದೆ. 160-170 ರನ್‌ ಸುರಕ್ಷಿತ ಮೊತ್ತ ಎಂದು ವಿಶ್ಲೇಶಿಸಲಾಗಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!