IPL 2020: RCB ವರ್ಸಸ್ ಕಿಂಗ್ಸ್ ಇಲೆವನ್ ಕನ್ನಡಿಗರ ನಡುವಿಂದು ಪೈಪೋಟಿ..!

By Kannadaprabha NewsFirst Published Sep 24, 2020, 8:48 AM IST
Highlights

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕನ್ನಡಿಗರಿಂದಲೇ ತುಂಬಿರುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಸೆ.24): 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ರಾಯಲ್‌ ಚಾಲೆಂಜಸ್‌ ಬೆಂಗಳೂರು ತಂಡ ಶುಭಾರಂಭದೊಂದಿಗೆ ಅಭಿಯಾನ ಆರಂಭಿಸಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಗುರು​ವಾರ ಇಲ್ಲಿನ ಗುರುವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಕಿಂಗ್ಸ್‌ ಇಲೆ​ವೆನ್‌ ಪಂಜಾ​ಬ್‌ ತಂಡ​ವನ್ನು ಎದು​ರಿ​ಸಲು ಸಜ್ಜಾ​ಗಿದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ವಿವಾದಿತ ‘ಶಾರ್ಟ್‌ ರನ್‌’ನಿಂದಾಗಿ ಸೂಪರ್‌ ಓವರ್‌ನಲ್ಲಿ ಸೋಲು ಕಂಡ ಪಂಜಾಬ್‌ ತಂಡ, ಮೊದಲ ಗೆಲು​ವಿ​ಗಾಗಿ ಹಾತೊರೆಯುತ್ತಿದೆ. ಹೊಸ ನಾಯಕ ಕೆ.ಎಲ್‌.ರಾ​ಹುಲ್‌ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ, ಆರ್‌ಸಿಬಿ ವಿರುದ್ಧ ಯಾವ ರಣತಂತ್ರ ಹೂಡ​ಲಿ​ದ್ದಾರೆ ಎನ್ನು​ವುದು ಕುತೂ​ಹ​ಲಕ್ಕೆ ಕಾರ​ಣ​ವಾ​ಗಿದೆ. ಕರ್ನಾ​ಟ​ಕದ ಆಟ​ಗಾ​ರರೇ ಹೆಚ್ಚಿರುವ ಕಿಂಗ್ಸ್‌ ಇಲೆ​ವೆನ್‌ ಹಾಗೂ ಆರ್‌ಸಿಬಿ ನಡು​ವಿನ ಪಂದ್ಯ ಸಹ​ಜ​ವಾ​ಗಿಯೇ ಕರ್ನಾ​ಟ​ಕದ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಬಲಿ​ಷ್ಠ​ವಾ​ಗಿದೆ ಆರ್‌ಸಿಬಿ: ದೇವ​ದತ್‌ ಪಡಿ​ಕ್ಕಲ್‌, ಆ್ಯರೋನ್‌ ಫಿಂಚ್‌, ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿ​ಯ​ರ್‍ಸ್ ಅವ​ರ​ನ್ನೊ​ಳ​ಗೊಂಡ ಆರ್‌ಸಿಬಿಯ ಅಗ್ರ ಕ್ರಮಾಂಕ ಅತ್ಯಂತ ಬಲಿ​ಷ್ಠ​ವಾ​ಗಿ​ದೆ. ಪಡಿ​ಕ್ಕಲ್‌, ಎಬಿಡಿ ಮೊದಲ ಪಂದ್ಯ​ದಲ್ಲೇ ಅರ್ಧ​ಶ​ತ​ಕ ಸಿಡಿ​ಸಿ​ದರೆ, ಕೊಹ್ಲಿ ಹಾಗೂ ಫಿಂಚ್‌ ತಮ್ಮ ಅಸಲಿ ಆಟ ಪ್ರದ​ರ್ಶಿ​ಸಲು ಕಾತ​ರಿ​ಸು​ತ್ತಿ​ದ್ದಾರೆ. ಜೋಶ್ವಾ ಫಿಲಿಪಿ ತಮ್ಮ ಸಾಮ​ರ್ಥ್ಯ ಸಾಬೀ​ತು ಪಡಿ​ಸಲು ಕಾಯು​ತ್ತಿದ್ದಾರೆ. ಆರ್‌ಸಿಬಿಯ ಕೆಳ ಮಧ್ಯಮ ಕ್ರಮಾಂಕದ ನಿರೀಕ್ಷೆ ಉಳಿ​ಸಿ​ಕೊ​ಳ್ಳ​ಬೇ​ಕಿದೆ.

IPL 2020: ಫಿಫ್ಟಿ ಬಾರಿಸಿ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡ ದೇವದತ್ ಪಡಿಕ್ಕಲ್..!

ಯಜು​ವೇಂದ್ರ ಚಹಲ್‌ ತಂಡದ ಬೌಲಿಂಗ್‌ ಟ್ರಂಪ್‌ಕಾರ್ಡ್‌, ನವ್‌ದೀಪ್‌ ಸೈನಿ ಹಾಗೂ ಡೇಲ್‌ ಸ್ಟೈಲ್‌ ನಾಯ​ಕನ ನಂಬಿಕೆ ಉಳಿ​ಸಿ​ಕೊ​ಳ್ಳು​ವಲ್ಲಿ ತಕ್ಕ​ಮ​ಟ್ಟಿಗೆ ಯಶಸ್ಸು ಕಂಡಿ​ದ್ದಾರೆ. ಆದರೆ ಉಮೇಶ್‌ ಯಾದವ್‌ ದುಬಾ​ರಿ​ಯಾ​ಗಿದ್ದು, ಈ ಸಮಸ್ಯೆಗೆ ಕೊಹ್ಲಿ ಉತ್ತಮ ಹುಡು​ಕಿ​ಕೊ​ಳ್ಳ​ದಿ​ದ್ದರೆ ಗೆಲುವು ಕೈಜಾ​ರಿ​ದರೆ ಅಚ್ಚ​ರಿ​ಯಿ​ಲ್ಲ.

ಗೊಂದ​ಲ​ದಲ್ಲಿ ಕಿಂಗ್ಸ್‌: ಇನ್ನು ಪಂಜಾಬ್‌ ತಂಡ ಆರಂಭಿಕ ಮಯಾಂಕ್‌ ಅಗರ್‌ವಾಲ್‌ ಫಾಮ್‌ರ್‍ನಲ್ಲಿದ್ದಾರೆ. ನಾಯಕ ರಾಹುಲ್‌, ಕರುಣ್‌ ನಾಯರ್‌, ನಿಕೋಲಸ್‌ ಪೂರನ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟ್‌ನಿಂದ ರನ್‌ ಹರಿದುಬರಲಿಲ್ಲ. ಈ ನಾಲ್ವರು ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದರೆ, ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಬಹುದಾಗಿದೆ. ಧೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ರನ್ನು ಹೊರಗಿಟ್ಟರೂ, ಪಂಜಾಬ್‌ ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಆಟಗಾರರನ್ನು ಹೊಂದಿದೆ. ಆದರೆ ನಾಯಕ ರಾಹುಲ್‌ಗೆ ಆಯ್ಕೆ ಗೊಂದಲ ಶುರು​ವಾ​ಗಿದ್ದು, ಪರಿ​ಹಾರ ಸಿಕ್ಕಂತೆ ಕಾಣು​ತ್ತಿಲ್ಲ. ವೇಗಿ ಶಮಿ ಬೌಲಿಂಗ್‌ ಮುಂದಾಳತ್ವ ವಹಿಸಿದ್ದು, ಕರಾರುವಕ್‌ ಬೌಲಿಂಗ್‌ನಿಂದ ಗಮನಸೆಳೆದಿದ್ದಾರೆ. ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ, ಡೆಲ್ಲಿ ವಿರುದ್ಧ ಅತ್ಯದ್ಭುತ ಪ್ರದರ್ಶನದ ಮೂಲಕ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ:

ಆರ್‌ಸಿಬಿ: ಆರೋನ್‌ ಫಿಂಚ್‌, ದೇವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌, ಶಿವಂ ದುಬೆ, ಜೋಶ್‌ ಫಿಲಿಪ್ಪೆ, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಸೈನಿ, ಉಮೇಶ್‌ ಯಾದವ್‌, ಡೇಲ್‌ ಸ್ಟೇನ್‌, ಯಜುವೇಂದ್ರ ಚಹಲ್‌.

ಪಂಜಾಬ್‌: ಕೆ.ಎಲ್‌. ರಾಹುಲ್‌ (ನಾಯಕ), ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ನಿಕೋಲಸ್‌ ಪೂರನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸರ್ಫರಾಜ್‌ ಖಾನ್‌, ಕೆ.ಗೌತಮ್‌, ಕ್ರಿಸ್‌ ಜೋರ್ಡನ್‌, ಮೊಹಮದ್‌ ಶಮಿ, ಶೆಲ್ಡನ್‌ ಕಾರ್ಟೆಲ್‌, ರವಿ ಬಿಷ್ಣೋಯಿ.

ಪಿಚ್‌ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ನಲ್ಲಿ ಈಗಾಗಲೇ 2 ಪಂದ್ಯಗಳು ನಡೆದಿದ್ದು, ಸ್ಪರ್ಧಾತ್ಮಕ ಪಿಚ್‌ ಆಗಿದೆ. ಸ್ವಿಂಗ್‌ ಬೌಲರ್‌ಗಳು ತಕ್ಕಮಟ್ಟಿಗಿನ ಲಾಭ ಪಡೆಯಲಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಯಶಸ್ಸು ದೊರಕಲಿದೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ದೊರಕಲಿದೆ. ಹೀಗಾಗಿ ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!