13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿಂದು ಬಲಿಷ್ಠ ಕೋಲ್ಕತ ನೈಟ್ ರೈಡರ್ಸ್ ತಂಡವು ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಬುಧಾಬಿ(ಅ.10): ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಇಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿದೆ.
ಮಧ್ಯಾಹ್ನ ನಡೆಯಲಿರುವ ಟೂರ್ನಿಯ 3ನೇ ಮಧ್ಯಾಹ್ನದ ಪಂದ್ಯ ಇದಾಗಿದೆ. ಅನುಭವಿ ಹಾಗೂ ಯುವ ಆಟಗಾರರಿಂದ ಸಮತೋಲನದಿಂದ ಕೂಡಿರುವ ಕೆಕೆಆರ್ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಫಾರ್ಮ್‌ಗೆ ಮರಳಿರುವುದು ಕೆಕೆಆರ್ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಇನ್ನುಳಿದಂತೆ ಶುಭಮನ್ ಗಿಲ್, ಇಯಾನ್ ಮಾರ್ಗನ್, ನಿತೀಶ್ ರಾಣಾ ಉತ್ತಮ ಫಾರ್ಮ್‌ನಲ್ಲಿದ್ದು, ರಸೆಲ್, ನಾಯಕ ದಿನೇಶ್ ಕಾರ್ತಿಕ್ ಹಾಗೂ ಸುನಿಲ್ ನರೈನ್ ಕೂಡಾ ಅಬ್ಬರಿಸಿದರೆ ತಂಡ ಬೃಹತ್ ಮೊತ್ತ ಕಲೆ ಹಾಕಬಹುದಾಗಿದೆ. ಇನ್ನು ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಜತೆಗೆ ಶಿವಂ ಮಾವಿ, ಕಮಲೇಶ್ ನಾಗರಕೋಟಿ ವೇಗದ ಬೌಲಿಂಗ್ ಸಂಘಟಿಸಿದರೆ, ಮಿಸ್ಟ್ರಿ ಸ್ಪಿನ್ನರ್ ಎನಿಸಿಕೊಂಡಿರುವ ವರುಣ್ ಚಕ್ರವರ್ತಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ಡೆಲ್ಲಿ ಎದುರು ರಾಯಲ್ಸ್‌ಗೆ ಹೀನಾಯ ಸೋಲು..!
ಇನ್ನು ಪಂಜಾಬ್ 5 ಸೋತಿದ್ದು, 2 ಅಂಕಗಳಿಂದ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಪಂಜಾಬ್ ಜಯದ ಲಯಕ್ಕೆ ಮರಳಲು ಹಾತೊರೆಯುತ್ತಿದೆ. ಪಂಜಾಬ್ ತಂಡದಲ್ಲಿಂದು ಒಂದು ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ವಿಶ್ರಾಂತಿ ನೀಡಿ ಕ್ರಿಸ್ ಗೇಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಬಲಿಷ್ಠ ಕೆಕೆಆರ್ ವಿರುದ್ಧ ಗೆಲುವು ಸಾಧಿಸಬೇಕಾದರೆ ರಾಹುಲ್, ಮಯಾಂಕ್ ಅಗರ್‌ವಾಲ್, ನಿಕೋಲಸ್ ಪೂರನ್ ಸೇರಿದಂತೆ ಎಲ್ಲಾ ಆಟಗಾರರು ಸಂಘಟಿತ ಪ್ರದರ್ಶನ ತೋರಿದರೆ ಮಾತ್ರ ದಿಟ್ಟ ತಿರುಗೇಟು ನೀಡಬಹುದಾಗಿದೆ.
ಸ್ಥಳ: ಅಬುಧಾಬಿ
ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್