ಐಪಿಎಲ್ ಚಾಲೆಂಜ್ ಗೆದ್ದ ಬಿಸಿಸಿಐ

By Kannadaprabha NewsFirst Published Nov 11, 2020, 9:42 AM IST
Highlights

ಕೊರೋನಾ ಆತಂಕದ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಅಯೋಜಿಸಿ ಬಿಸಿಸಿಐ ಸೈ ಎನಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ನ.11): 8 ತಿಂಗಳ ಹಿಂದೆ ಪೂರ್ವ ನಿಗದಿಯಂತೆ ಮಾ.29ರಿಂದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ನಡೆಸಲು ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೊರೋನಾ ಸೋಂಕು ವಕ್ಕರಿಸಿದ ಕಾರಣ, ಬಿಸಿಸಿಐ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು. ಈ ವರ್ಷ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲ, ಆತಂಕ ಎಲ್ಲರಲ್ಲೂ ಇತ್ತು. ಆದರೆ ಸಂಕಷ್ಟದ ಸಮಯದಲ್ಲೂ ಬಿಸಿಸಿಐ ಅತ್ಯಂತ ಯಶಸ್ವಿಯಾಗಿ ಈ ಆವೃತ್ತಿಯನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ.

ರೋಚಕ ಫೈನಲ್‌ನೊಂದಿಗೆ ಈ ಆವೃತ್ತಿಗೆ ತೆರೆ ಬಿದ್ದಿದೆ. ಆದರೆ ಈ ಆವೃತ್ತಿ ಯಶಸ್ಸು ಕಾಣಲು ಬಿಸಿಸಿಐ ಕೈಗೊಂಡ ನಿರ್ಧಾರಗಳು ಪ್ರಮುಖ ಕಾರಣ. ಮೊದಲು ಸೂಕ್ತ ಸಮಯಕ್ಕಾಗಿ ಕಾಯ್ದ ಭಾರತೀಯ ಕ್ರಿಕೆಟ್‌ ಮಂಡಳಿ, ಆಸ್ಪ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಮುಂದೂಡಿಕೆಯಾಗುತ್ತಿದ್ದಂತೆ ಆ ಅವಧಿಯಲ್ಲಿ ಐಪಿಎಲ್‌ ಆಯೋಜಿಸಲು ನಿರ್ಧರಿಸಿತು. ಬಳಿಕ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿದ್ದಲ್ಲದೆ ಐಪಿಎಲ್‌ ವೇಳೆ ಯಾವುದೇ ಪ್ರಮುಖ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳು ನಡೆಸದಂತೆ ಇತರ ಕ್ರಿಕೆಟ್‌ ಮಂಡಳಿಗಳ ಜೊತೆ ಅನಧಿಕೃತ ಒಪ್ಪಂದ ಮಾಡಿಕೊಂಡಿತು.

5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್!

ಕೊರೋನಾ ತಡೆ: ಇಂಗ್ಲೆಂಡ್‌ ಮೂಲದ ಕಂಪನಿಯೊಂದರ ಸಹಾಯದೊಂದಿಗೆ ಬಯೋ-ಬಬಲ್‌ ನಿರ್ಮಿಸಿ, ಆಟಗಾರರು, ಸಹಾಯಕ ಸಿಬ್ಬಂದಿ, ವೀಕ್ಷಕ ವಿವರಣೆಗಾರರು, ಪ್ರಸಾರ ಸಿಬ್ಬಂದಿ, ಅಧಿಕಾರಿಗಳು ಎಲ್ಲರ ಸುರಕ್ಷತೆಗೆ ಅಚ್ಚುಕಟ್ಟಾದ ಕ್ರಮಗಳನ್ನು ಕೈಗೊಂಡಿತು. ಟೂರ್ನಿ ಆರಂಭಕ್ಕೆ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ನ ಇಬ್ಬರು ಆಟಗಾರರು, ಕೆಲ ಸಹಾಯಕ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು ಬಿಟ್ಟರೆ ಟೂರ್ನಿ ಆರಂಭಗೊಂಡ ಬಳಿಕ ಒಂದೇ ಒಂದು ಪಾಸಿಟಿವ್‌ ಪ್ರಕರಣ ದಾಖಲಾಗಲಿಲ್ಲ. ಪ್ರತಿ 5 ದಿನಕ್ಕೊಮ್ಮೆ ಎಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸಲಾಯಿತು. ಸೋಂಕು ತಡೆಗೆ ಎಲ್ಲ ಅಗತ್ಯ ಕ್ರಮಗಳನ್ನು ಬಿಸಿಸಿಐ ಕೈಗೊಂಡಿತು. ಬಿಸಿಸಿಐ ಸಿದ್ಧಪಡಿಸಿದ್ದ ಕಠಿಣ ಮಾರ್ಗಸೂಚಿಯನ್ನು ಎಲ್ಲಾ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಿದವು. ಬಯೋ-ಬಬಲ್‌ ನಿಯಮ ಉಲ್ಲಂಘಿಸಿ ಯಾವ ತಂಡವೂ ದುಬಾರಿ ದಂಡ ಪಾವತಿಸಿದ ಪ್ರಸಂಗ ನಡೆಯಲಿಲ್ಲ.

ಆರ್ಥಿಕ ಸಮಸ್ಯೆಗೆ ಟಾನಿಕ್‌!

ಚೀನಾ ಜೊತೆಗಿನ ರಾಜತಾಂತ್ರಿಕ ವಿವಾದದಿಂದಾಗಿ ಟೈಟಲ್‌ ಪ್ರಾಯೋಜತ್ವದಿಂದ ವಿವೋ ಮೊಬೈಲ್‌ ಸಂಸ್ಥೆ ಹಿಂದೆ ಸರಿಯಿತು. ದಿಢೀರನೆ ಬಿಸಿಸಿಐಗೆ ಆರ್ಥಿಕ ಸಂಕಷ್ಟ ಎದುರಾಯಿತು. ಹೊಸದಾಗಿ ಬಿಡ್ಡಿಂಗ್‌ ನಡೆಸಲು ಬಿಸಿಸಿಐ ನಿರ್ಧರಿಸಿತು. ಬಿಡ್ಡಿಂಗ್‌ನಲ್ಲಿ 225 ಕೋಟಿ ರು.ಗೆ ಫ್ಯಾಂಟಸಿ ಗೇಮ್‌ ಸಂಸ್ಥೆ ಡ್ರೀಮ್‌ ಇಲೆವೆನ್‌ ಟೈಟಲ್‌ ಪ್ರಾಯೋಜಕತ್ವ ಖರೀದಿಸಿತು. ಹೆಚ್ಚುವರಿ ಪ್ರಾಯೋಜಕರನ್ನು ಹುಡುಕುವಲ್ಲಿಯೂ ಬಿಸಿಸಿಐ ಯಶಸ್ವಿಯಾಯಿತು.

ಬಿಸಿಸಿಐನಿಂದ ಬರುತ್ತಿದ್ದ ಮೊತ್ತ ಅರ್ಧದಷ್ಟು ಕಡಿತಗೊಂಡರೂ, ಬಹುತೇಕ ಎಲ್ಲಾ ಫ್ರಾಂಚೈಸಿಗಳು ಈ ಹಿಂದಿನ ಆವೃತ್ತಿಗಳಲ್ಲಿ ಹೊಂದಿದ್ದ ಪ್ರಾಯೋಜಕತ್ವಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಿಕೊಂಡಿವೆ. ಈ ವರ್ಷ ಟೂರ್ನಿ ನಡೆಯದೇ ಹೋಗಿದ್ದರೆ ಎಲ್ಲಾ ತಂಡಗಳು ದೊಡ್ಡ ನಷ್ಟ ಅನುಭವಿಸುತ್ತಿದ್ದವು.

5 ತಿಂಗಳಲ್ಲಿ ಮತ್ತೆ ಐಪಿಎಲ್‌

ಹಲವು ಪ್ರಮುಖ ಸಮಸ್ಯೆಗಳು ಎದುರಾದರೂ ಬಿಸಿಸಿಐ ಎಲ್ಲದಕ್ಕೂ ಪರಿಹಾರ ಕಂಡುಕೊಂಡು ಯಶಸ್ವಿ ಆವೃತ್ತಿಯನ್ನು ಆಯೋಜಿಸಿ ಸೈ ಎನಿಸಿಕೊಂಡಿತು. 14ನೇ ಆವೃತ್ತಿಯನ್ನು ಭಾರತದಲ್ಲೇ ನಡೆಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಅದೂ ಏಪ್ರಿಲ್‌ ತಿಂಗಳಲ್ಲೇ ಟೂರ್ನಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಮುಂದಿನ ಐಪಿಎಲ್‌ಗೆ ಕೇವಲ 5 ತಿಂಗಳು ಬಾಕಿ ಇದೆ. 2021ರ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಈ ವರ್ಷದ ಟೂರ್ನಿ ವಿಳಂಬಗೊಂಡ ಕಾರಣ, ಮೆಗಾ ಹರಾಜು ಪ್ರಕ್ರಿಯೆಯನ್ನು 2022ಕ್ಕೆ ಮುಂದೂಡುವ ಸಾಧ್ಯತೆ ಇದೆ. 2021ರ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಕಿರು ಹರಾಜು ಪ್ರಕ್ರಿಯೆ ನಡೆಸುವ ನಿರೀಕ್ಷೆ ಇದೆ.
 

click me!