Shubhanshu Shukla: ಅಂತರಿಕ್ಷಕ್ಕೇರಿದ ಶುಕ್ಲಾ ಜತೆ ಮೋದಿ ಮಾತು | ಇದು ನವಯುಗದ ಆರಂಭ । ನೀವು ಶುಭಾರಂಭ ಮಾಡಿರುವಿರಿ: ಮೋದಿ

Kannadaprabha News, Ravi Janekal |   | Kannada Prabha
Published : Jun 29, 2025, 09:26 AM ISTUpdated : Jun 29, 2025, 09:30 AM IST
Shubhanshu Shukla To PM Modi

ಸಾರಾಂಶ

ಆಕ್ಸಿಯೋಂ-4 ಮಿಷನ್‌ನ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ಬಾಹ್ಯಾಕಾಶದ ಅನುಭವ, ಯೋಗ, ಪ್ರಯೋಗಗಳ ಕುರಿತು ಚರ್ಚಿಸಿದರು. ಶುಕ್ಲಾ, ಭಾರತದ ಬೆಳವಣಿಗೆ ಮತ್ತು ಐಕ್ಯತೆಯ ಭಾವನೆಯನ್ನು ವ್ಯಕ್ತಪಡಿಸಿದರು.

ಆಕ್ಸಿಯೋಂ-4 ಮಿಷನ್‌ ಭಾಗವಾಗಿ ಗುರುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿ, 4 ದಶಕಗಳ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಎಂಬ ದಾಖಲೆ ಪಾತ್ರರಾದ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. 18 ನಿಮಿಷಗಳ ಕಾಲ ನಡೆದ ಮಾತುಕತೆ ವೇಳೆ ಬಾಹ್ಯಾಕಾಶದಲ್ಲಿನ ತಮ್ಮ ಅನುಭವಗಳನ್ನು ಶುಕ್ಲಾ ಹಂಚಿಕೊಂಡಿದ್ದರೆ, ಶುಕ್ಲಾ ಬಳಿ ಆಗಸದ ವಾತಾವರಣ, ಅನುಭವ, ಯೋಗದ ಲಾಭ, ಪ್ರಯೋಗದ ಮೊದಲಾದ ವಿಷಯಗಳ ಕುರಿತು ಮೋದಿ ಸಂವಾದ ನಡೆಸಿದ್ದಾರೆ

ಮೋದಿ: ನಿಮಗೆ ಭೂಮಿ ತಾಯಿಗೆ ಪ್ರದಕ್ಷಿಣೆ ಹಾಕುವ ಭಾಗ್ಯ ಒದಗಿದೆ. ನೀವೀಗ ಭೂಮಿಯ ಯಾವ ಭಾಗದಲ್ಲಿದ್ದೀರ?

ಶುಕ್ಲಾ: ನಿಖರವಾಗಿ ಪೃಥ್ವಿಯ ಯಾವ ಭಾಗದಲ್ಲಿದ್ದೇವೆ ಎಂದು ತಿಳಿಯುತ್ತಿಲ್ಲ. ನಾವು ಅನುದಿನ ಭೂಮಿಗೆ 16 ಪ್ರದಕ್ಷಿಣೆ ಹಾಕುತ್ತಿದ್ದೇವೆ. ನಾವು ಕಕ್ಷೆಯನ್ನು ತಲುಪುತ್ತಿದ್ದಂತೆ ಮೊದಲು ಭೂಮಿಯನ್ನು ನೋಡಿದೆವು. ಇಲ್ಲಿಂದ ಯಾವುದೇ ಗಡಿಗಳು ಕಾಣುವುದಿಲ್ಲ. ಬದಲಿಗೆ ಇಡೀ ಪೃಥ್ವಿ ಒಂದೇ ಕಾಣುತ್ತದೆ. ಇದರಿಂದ ಅನೇಕತೆಯಲ್ಲಿ ಏಕತೆಯ ಭಾವ ಅರಿವಿಗೆ ಬರುತ್ತದೆ. ನಾವೆಲ್ಲರೂ ಮಾನವೀಯತೆಯ ಭಾಗ ಮತ್ತು ಭೂಮಿ ನಮ್ಮ ಮನೆ ಎಂದ ಅನುಭವವಾಗುತ್ತದೆ. ಭಾರತವು ನಕ್ಷೆಯಲ್ಲಿ ಕಾಣುವುದಕ್ಕಿಂತ ಬೃಹತ್‌ ಮತ್ತು ಭವ್ಯವಾಗಿ ಕಾಣುತ್ತದೆ. ಐಎಸ್‌ಎಸ್‌ ತಲುಪಿರುವ ನಾನು ಇಲ್ಲಿ ಚಲಿಸುತ್ತಿರುವ ವೇಗವನ್ನು ನೋಡಿದರೆ, ನಮ್ಮ ದೇಶ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂಬುದು ತಿಳಿಯುತ್ತದೆ.

ಮೋದಿ: ನಿಮ್ಮೊಂದಿಗೆ ಒಯ್ದ ಕ್ಯಾರೆಟ್‌ ಹಲ್ವಾವನ್ನು ಸಂಗಡಿಗರಿಗೆ ತಿನ್ನಿಸಿದ್ರಾ?

ಶುಕ್ಲಾ: ಕ್ಯಾರೆಟ್‌ ಹಲ್ವಾ, ಹೆಸರುಬೇಳೆ ಹಲ್ವಾ, ಮಾವಿನರಸವನ್ನು ನನ್ನ ಜತೆಗಿರುವವರೂ ಸವಿಯಲಿ ಎಂಬುದು ನನ್ನ ಉದ್ದೇಶವಾಗಿತ್ತು. ನಾವೆಲ್ಲಾ ಒಟ್ಟಿಗೆ ಕುಳಿತು ಅದರ ಸ್ವಾದವನ್ನು ಆಸ್ವಾದಿಸಿದೆವು.

ಮೋದಿ: ಐಎಸ್‌ಎಸ್‌ನ ಪರಿಸರಕ್ಕೆ ನೀವು ಹೇಗೆ ಹೊಂದಿಕೊಳ್ಳುತ್ತಿದ್ದೀರ?

ಶುಕ್ಲಾ: ಕಳೆದೊಂದು ವರ್ಷದ ತರಬೇತಿಯಲ್ಲಿ ನನಗೆ ಎಲ್ಲಾ ವ್ಯವಸ್ಥೆ, ಪ್ರಕ್ರಿಯೆ, ಪ್ರಯೋಗಗಳ ಬಗ್ಗೆ ತಿಳಿದಿತ್ತು. ಆದರೆ ಇಲ್ಲಿ ಎಲ್ಲವೂ ಭಿನ್ನವಾಗಿದೆ. ಗುರುತ್ವಾಕರ್ಷಣ ಬಲವಿರುವ ಭೂಮಿಗೆ ದೇಹ ಒಗ್ಗಿಕೊಂಡಿರುತ್ತದೆ. ಆದರೆ ಈ ನಿರ್ವಾತ ಪ್ರದೇಶದಲ್ಲಿ ಸಣ್ಣಸಣ್ಣ ಕೆಲಸವೂ ಕಷ್ಟಕರವಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಒಂದೆರಡು ದಿನ ಬೇಕು.

ಮೋದಿ: ಆ ವಾತಾವರಣದಲ್ಲಿ ಧ್ಯಾನದ ಲಾಭ ಆಗುತ್ತಿದೆಯಾ?

ಶುಕ್ಲಾ: ಹೌದು. ಈ ಮಿಷನ್‌ ಭಾರತದ ಯಶಸ್ಸಿನ ಮೊದಲ ಹೆಜ್ಜೆಯಾಗಿದೆ. ತರಬೇತಿ ಹಾಗೂ ಉಡಾವಣೆಯ ಸಮಯದಲ್ಲಿ ತುಂಬಾ ಒತ್ತಡವಿರುತ್ತದೆ. ಆದರೆ ಧ್ಯಾನದಿಂದ ನಾವು ಅಂತಹ ಸಂದರ್ಭಗಳಲ್ಲಿ ಶಾಂತವಾಗಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಂತಹ ಸವಾಲಿನ ವಾತಾವರಣದಲ್ಲಿ ಧ್ಯಾನ ಅತ್ಯವಶ್ಯಕ.

ಮೋದಿ: ಕೃಷಿ, ಆರೋಗ್ಯ ಕ್ಷೇತ್ರಕ್ಕೆ ಲಾಭವಾಗುವ ಪ್ರಯೋಗ ಮಾಡುತ್ತಿದ್ದೀರಾ?

ಶುಕ್ಲಾ: ನಾನು 7 ಪ್ರಯೋಗಗಳನ್ನು ಮಾಡಲಿದ್ದೇನೆ. ನಿರ್ವಾತ ಪ್ರದೇಶಕ್ಕೆ ಬರುತ್ತಿದ್ದಂತೆ ದೇಹದ ಸ್ನಾಯು ಶಕ್ತಿ ಕುಂಠಿತವಾಗುತ್ತದೆ. ನಾನು ಮಾಡುವ ಮೊದಲ ಪ್ರಯೋಗ, ಇದನ್ನು ತಡೆಯಲು ಏನಾದರೂ ಮಾರ್ಗವಿದೆಯೇ ಎಂಬುದರ ಬಗ್ಗೆ ಆಗಿರಲಿದೆ. ಇದನ್ನು ಭೂಮಿ ಮೇಲೆಯೂ ಬಳಸಬಹುದು. ಜತೆಗೆ, ಪೌಷ್ಟಿಕಾಂಶಯುಕ್ತ ಪಾಚಿ ಬೆಳವಣಿಯ ಬಗ್ಗೆಯೂ ಸಂಶೋಧನೆ ನಡೆಸಲಿದ್ದೇವೆ. ಈ ವಾತಾವರಣದಲ್ಲಿ ಅವು ಬೇಗನೆ ಬೆಳೆಯುತ್ತವೆ. ಇದು ದೇಶದ ಆಹಾರ ಭದ್ರತೆಗೆ ಸಹಕಾರಿ.

ಮೋದಿ: ಇಂದು ಆಕಾಶ ನೋಡಿ ನಾವು ಅಲ್ಲಿಗೆ ತಲುಪಬೇಕು ಎಂದುಕೊಳ್ಳುವ ಮಕ್ಕಳಿಗೆ ನಿಮ್ಮ ಸಂದೇಶ?

ಶುಕ್ಲಾ: ಭಾರತವು ದೊಡ್ಡದೊಡ್ಡ ಕನಸುಗಳನ್ನು ಕಂಡಿದೆ. ಯಶಸ್ಸಿಗೆ ಇರುವುದು ಒಂದೇ ದಾರಿಯಲ್ಲ. ಆದರೆ ಯಾವ ದಾರಿಯಲ್ಲಿ ಸಾಗಿದರೂ ನಿಮ್ಮ ಪ್ರಯತ್ನವನ್ನು ಬಿಡಬೇಡಿ. ಈ ಮಂತ್ರವನ್ನು ನಿಮ್ಮದಾಗಿಸಿಕೊಂಡರೆ ಯಶ ನಿಶ್ಚಿತ.

ಮೋದಿ: ಗಗನಯಾನ, ಸ್ವಂತ ಬಾಹ್ಯಾಕಾಶ ಕೇಂದ್ರ ನಿರ್ಮಾಣ, ಚಂದ್ರನ ಮೇಲೆ ಇಳಿಯುವ ಯೋಜನೆಗಳಿಗೆ ನಿಮ್ಮ ಅನುಭವ ಅವಶ್ಯಕ.

ಶುಕ್ಲಾ: ನಾನು ಇಲ್ಲಿ ಕಲಿಯುತ್ತಿರುವ ಪಾಠಗಳನ್ನು ಕೂಡಿಟ್ಟುಕೊಳ್ಳುತ್ತಿದ್ದೇನೆ. ಭೂಮಿಗೆ ಮರಳುತ್ತಿದ್ದಂತೆ ನನ್ನ ಅನುಭವಗಳನ್ನೆಲ್ಲಾ ನಮ್ಮ ಮಿಷನ್‌ಗಳಲ್ಲಿ ಬಳಸಬಹುದು. ನನ್ನ ಜತೆ ಬಂದಿರುವವರು ಸಹ ಗಗನಯಾನದ ಬಗ್ಗೆ ಉತ್ಸುಕರಾಗಿದ್ದಾರೆ.

ಮೋದಿ: ನಿಮ್ಮ ಈ ಐತಿಹಾಸಿಕ ಯಾತ್ರೆ ನಮ್ಮ ವಿಕಸಿತ ಭಾರತದ ಪಯಣಕ್ಕೆ ವೇಗ ಕೊಡಲಿದೆ. ಏನು ಹೇಳಲು ಬಯಸುತ್ತೀರ?

ಶುಕ್ಲಾ: ನೀವು ಸತತ ಪರಿಶ್ರಮದಿಂದ ಭವಿಷ್ಯವನ್ನು ರೂಪಿಸಿಕೊಂಡರೆ, ದೇಶದ ಭವಿಷ್ಯವೂ ಬೆಳಗಲಿದೆ ಎಂದು ಈ ಕಾರ್ಯಕ್ರಮವನ್ನು ನೋಡುತ್ತಿರುವವರಿಗೆ ಹೇಳಲು ಬಯಸುತ್ತೇನೆ. ಆಕಾಶ ಎಂದು ಮಿತಿಯಲ್ಲ. ನಾನೀಗ ಭಾವುಕ ಮತ್ತು ಸಂತುಷ್ಟನಾಗಿದ್ದೇನೆ. ನನ್ನ ಹಿಂದಿರುವ ತ್ರಿವರ್ಣ ಧ್ವಜ ನೋಡಿದಾಗ, ಭಾರತ ಐಎಸ್‌ಎಸ್‌ಗೆ ತಲುಪಿರುವುದನ್ನು ಕಂಡು ಖುಷಿಯಾಗುತ್ತಿದೆ. ಭಾರತ ಮಾತೆಗೆ ಜಯವಾಗಲಿ.

1984ರಲ್ಲಿ ಇಂದಿರಾ ಜತೆ ರಾಕೇಶ್ ಶರ್ಮಾ ಸಂವಾದ ಬಾಹ್ಯಾಕಾಶದಿಂದ ‘ಸಾರೆ ಜಹಾ ಸೆ ಅಚ್ಚಾ’ ಎಂದಿದ್ದ ಶರ್ಮಾ

ಭಾರತೀಯ ವಾಯುಪಡೆಯ ಮಾಜಿ ಪೈಲಟ್ ರಾಕೇಶ್ ಶರ್ಮಾ 1984ರ ಏ.3ರಂದು ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ (ಸೂಯೆಜ್ ಟಿ -11) ಬಾಹ್ಯಾಕಾಶಕ್ಕೆ ತೆರಳಿ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಶರ್ಮಾರೊಂದಿಗೆ ಸಂವಹನ ನಡೆಸಿದ್ದರು. ‘ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ?’ ಎಂದು ಇಂದಿರಾ ಕೇಳಿದ ಪ್ರಶ್ನೆಗೆ ಶರ್ಮಾ, ‘ಸಾರೆ ಜಹಾ ಸೆ ಅಚ್ಚಾ’ (ವಿಶ್ವದ ಎಲ್ಲ ಜಾಗಗಳಿಗಿಂತಲೂ ಸುಂದರ) ಎಂದು ಉತ್ತರಿಸಿದ್ದರು. ಇದು ಕವಿ ಇಕ್ಬಾಲ್ ಅವರ ಪ್ರಸಿದ್ಧ ದೇಶಭಕ್ತಿಗೀತೆಯ ಸಾಲೂ ಹೌದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!