ಐಸಿಸ್‌ನ ಭಾರತದ ಮಾಜಿ ಮುಖ್ಯಸ್ಥ, ಉಗ್ರ ಸಾಕೀಬ್ ನಾಚನ್ ಸಾವು

Published : Jun 29, 2025, 05:51 AM IST
Saqib

ಸಾರಾಂಶ

ನಿಷೇಧಿತ ಉಗ್ರ ಸಂಘಟನೆ ಸಿಮಿಯ ಕಾರ್ಯಕರ್ತ, ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದ ಆರೋಪಿ ಸಾಕೀಬ್‌ ನಾಚನ್ (67) ಶನಿವಾರ ದೆಹಲಿಯ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಮುಂಬೈ: ನಿಷೇಧಿತ ಉಗ್ರ ಸಂಘಟನೆ ಸಿಮಿಯ ಕಾರ್ಯಕರ್ತ, ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದ ಆರೋಪಿ ಸಾಕೀಬ್‌ ನಾಚನ್ (67) ಶನಿವಾರ ದೆಹಲಿಯ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಡ್ಘಾ ನಿವಾಸಿಯಾಗಿದ್ದ ನಾಚನ್ ನಿಷೇಧಿತ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ)ದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. 2002-03ರಲ್ಲಿ ಮುಂಬೈನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಿಮಿ ಕೈವಾಡವಿದ್ದು, ಇದೇ ಪ್ರಕರಣದಲ್ಲಿ ಸಾಕಿಬ್‌ ಸೇರಿದಂತೆ ಹಲವರನ್ನು ದೋಷಿಗಳೆಂದು 2016ರಲ್ಲಿ ಘೋಷಿಸಿದ್ದ ನ್ಯಾಯಾಲಯ ಅವರಿಗೆ ಶಿಕ್ಷೆಯನ್ನೂ ವಿಧಿಸಿತ್ತು.

ಈ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸಿ ಆತ ಜೈಲಿನಿಂದ ಬಿಡುಗಡೆಯಾಗಿದ್ದ.ಬಳಿಕ 2023ರಲ್ಲಿ ರಾಷ್ಟ್ರೀಯ ತನಿಖಾ ದಳವು ಐಸಿಸ್‌ ಕಾರ್ಯಕರ್ತರ ಮೇಲೆ ದೇಶವ್ಯಾಪಿ ದಾಳಿ ನಡೆಸಿತ್ತು. ಈ ವೇಳೆ ಸಾಕೀಬ್‌ನ ಹುಟ್ಟೂರು ಪಡ್ಭಾದ ಮೇಲೂ ದಾಳಿ ನಡೆಸಿ ಈ ಪ್ರಕರಣದಲ್ಲೂ ಆತನನ್ನು ಬಂಧಿಸಿತ್ತು. ತನಿಖೆ ವೇಳೆ ಈತ ಭಾರತದಲ್ಲಿನ ಐಸಿಸ್‌ ಸಂಘಟನೆಯ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಲ್ಲದೆ ಈ ಸಂಘಟನೆಗೆ ಕಾರ್ಯಕರ್ತರನ್ನು ನೇಮಕ ಮಾಡುವ, ಅವರಿಗೆ ಸ್ಫೋಟಕ ಬಳಸಲು ತರಬೇತಿ ನೀಡುವ ಕೆಲಸವನ್ನು ಮಾಡಿದ್ದು ಕಂಡುಬಂದಿತ್ತು. ಅಲ್ಲದೆ ತನ್ನ ಹುಟ್ಟೂರನ್ನು ಭಾರತದಿಂದ ಸ್ವತಂತ್ರ್ಯಗೊಂಡ ಪ್ರದೇಶ ಎಂದೂ ಘೋಷಿಸಿಕೊಂಡಿದ್ದ. ಈ ಪ್ರಕರಣದಲ್ಲಿ ಬಂಧನದ ಬಳಿಕ ಈತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿಡಲಾಗಿತ್ತು.

ಜೂ.24ರಂದು ಆರೋಗ್ಯ ಹದಗೆಟ್ಟಿದ್ದರಿಂದ ಸಾಕೀಬ್‌ನನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್‌ ಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ಬಂಧನ

ನವದೆಹಲಿ: ಐಸಿಸ್‌ ಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ದಳ ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಬಂಧಿತರನ್ನು ಅಬ್ದುಲ್ಲಾ ಫಯಾಜ್‌ ಶೇಖ್‌ ಅಲಿಯಾಸ್‌ ಡಯಪರ್‌ವಾಲಾ ಮತ್ತು ತಲ್ಹಾ ಖಾನ್‌ ಎಂದು ಗುರುತಿಸಲಾಗಿದೆ. ಕಳೆದ 2 ವರ್ಷದಿಂದ ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಲೆ ಬೀಸಿದ್ದ ಎನ್‌ಐಎ ತಂಡ, ಇಬ್ಬರು ಬಂದಿಳಿಯುತ್ತಲೇ ಬಂಧಿಸಿದೆ.

ಸ್ಫೋಟಕ ತಯಾರಿ

ಪುಣೆಯ ಖೋಂಡ್ವಾದಲ್ಲಿ ಅಬ್ದುಲ್‌ ಫಯಾಜ್‌ ಶೇಕ್‌ ಎಂಬಾತನ ಮನೆಯಲ್ಲಿ ವಾಸವಿದ್ದ ಆರೋಪಿಗಳು ಅಲ್ಲಿಯೇ ಐಇಡಿಗಳನ್ನು ತಯಾರಿಸಿದ್ದರು. ಬಳಿಕ ಅದನ್ನು ಸ್ಫೋಟಿಸಿ ಪರೀಕ್ಷೆಯನ್ನೂ ನಡೆಸಿದ್ದರು. ಇದರ ಜತೆಗೆ, 2022-23ರ ಅವಧಿಯಲ್ಲಿ ಅಲ್ಲಿ ಬಾಂಬ್‌ ತಯಾರಿಕೆ ಮತ್ತು ಉಗ್ರ ತರಬೇತಿ ನೀಡುವ ಕಾರ್ಯಾಗಾರವನ್ನೂ ಆಯೋಜಿಸಿದ್ದರು. ಜೊತೆಗೆ ಐಸಿಸ್‌ ಅಜೆಂಡಾದಂತೆ ಹಿಂಸಾಚಾರ ಮತ್ತು ಭಯೋತ್ಪಾದನೆ ಮೂಲಕ ಭಾರತದಲ್ಲಿ ಇಸ್ಲಾಮಿಕ್‌ ಆಡಳಿತವನ್ನು ಜಾರಿಗೆ ತರಲು ದೇಶದಲ್ಲಿ ಶಾಂತಿಭಂಗ ಮತ್ತು ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ
ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ