ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಪುಷ್ಕರ್‌ ಸಿಂಗ್‌ ಧಾಮಿ

By Suvarna News  |  First Published Mar 25, 2022, 7:28 AM IST

*ಮೊದಲ ಸಚಿವ ಸಂಪುಟ ಸಭೆಯಲ್ಲೇ ಸಮಿತಿ ರಚನೆ ನಿರ್ಧಾರ
*ಚುನಾವಣಾ ಭರವಸೆ ಈಡೇರಿಕೆಯತ್ತ ಧಾಮಿ ಸರ್ಕಾರ ಹೆಜ್ಜೆ


ಡೆಹ್ರಾಡೂನ್‌ (ಮಾ. 25): ಉತ್ತರಾಖಂಡದಲ್ಲಿ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ (Pushkar Singh Dhami) ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code) ತರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಪ್ರಮುಖ ಚುನಾವಣಾ ಭರವಸೆ ಈಡೇರಿಕೆಯತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮೊದಲ ಸಂಪುಟ ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಿರ್ಧರಿಸಿದ್ದೇವೆ. ಕಾನೂನು ಜಾರಿಗೆ ರಾಜ್ಯ ಸಂಪುಟದಲ್ಲಿ ಅವಿರೋಧ ಅನುಮತಿ ದೊರೆತಿದ್ದು, ಶೀಘ್ರವೇ ತಜ್ಞರ ಸಮಿತಿ ರಚನೆ ಮಾಡುತ್ತೇವೆ. ಎಲ್ಲ ಅಂದುಕೊಂಡಂತಾದರೆ ಈ ಕಾಯ್ದೆ ಜಾರಿ ಮಾಡುವ ಮೊದಲ ರಾಜ್ಯ ಉತ್ತರಾಖಂಡವಾಗಿರಲಿದೆ’ ಎಂದು ಹೇಳಿದರು.

Tap to resize

Latest Videos

ಇದನ್ನೂ ಓದಿUttarakhand Elections: ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!

ಏನಿದು ಏಕರೂಪ ನಾಗರಿಕ ಸಂಹಿತೆ?:  ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಕಾನೂನಾಗಿದೆ. ಹಾಲಿ ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ, ಮುಸ್ಲಿಮರಿಗೆ, ಕ್ರೈಸ್ತರಿಗೆ ಪ್ರತ್ಯೇಕ ಕಾಯ್ದೆಗಳಿವೆ. ಅದರ ಬದಲಾಗಿ ಎಲ್ಲಾ ಧರ್ಮಗಳಿಗೂ ಒಂದೇ ನಿಯಮ ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.

ಉತ್ತರಾಖಂಡದಲ್ಲಿ ಸತತ 2ನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 21 ವರ್ಷಗಳ ರಾಜ್ಯದ ಇತಿಹಾಸದಲ್ಲಿ 2ನೇ ಬಾರಿ ಅಧಿಕಾರ ಪಡೆದ ಮೊದಲ ಆಡಳಿತಾರೂಢ ಪಕ್ಷ ಎಂಬ ಇತಿಹಾಸ ಸೃಷ್ಟಿಸಿದೆ. ಆದರೆ ಹಾಲಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಖಟಿಮಾ ಕ್ಷೇತ್ರದಿಂದ 6,500 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.

ಇದು ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿ ಧಾಮಿ, ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಮತ್ತು ತ್ರಿವೇಂದ್ರ ಸಿಂಗ್‌ ರಾವತ್‌ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿತ್ತು.

ಗೋವಾದಲ್ಲಿ ಇದೆ ಈ ಕಾನೂನು: ಹಾಲಿ, ಭಾರತದಲ್ಲಿ ಗೋವಾದಲ್ಲಿ ಮಾತ್ರವೇ ಈ ಕಾನೂನು ಜಾರಿಯಲ್ಲಿದೆ. 1961ರಲ್ಲಿ ಗೋವಾ ರಾಜ್ಯವು ಪೋರ್ಚುಗೀಸರಿಂದ ಭಾರತಕ್ಕೆ ಹಸ್ತಾಂತರ ಆದ ವೇಳೆ, ಪೋರ್ಚುಗೀಸರ ಆಡಳಿತದ್ದಲ್ಲಿದ್ದ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಮುಂದುವರೆಸಲು ನಿರ್ಧರಿಸಲಾಯಿತು. ಹೀಗಾಗಿ ಗೋವಾದಲ್ಲಿ ಮಾತ್ರ ಈ ಕಾನೂನು ಜಾರಿಯಲ್ಲಿದೆ.

ಇದನ್ನೂ ಓದಿ: Punjab ನೂತನ ಸಿಎಂ ಭಗವಂತ್ ಮಾನ್‌ರಿಂದ ಪ್ರಧಾನಿ ಮೋದಿ ಭೇಟಿ!

ಹರ್ಭಜನ್‌ ಸಿಂಗ್‌ ಸೇರಿ ಆಪ್‌ನ 5 ಜನ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ:  ಪಂಜಾಬ್‌ನ ಐವರು ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ 9ಕ್ಕೆ ಮುಕ್ತಾಯ ವಾಗಲಿರುವ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಪಂಜಾಬ್‌ನಿಂದ ಹರ್ಭಜನ್‌ ಸಿಂಗ್‌ ಸೇರಿ ಐವರು ಎಎಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಎಎಪಿಯಿಂದ ನಾಮನಿರ್ದೇಶನರಾಗಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, ಪಕ್ಷದ ನಾಯಕ ರಾಘವ್‌ ಚಡ್ಡಾ, ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾನಿಲಯ ಸ್ಥಾಪಕ ಅಶೋಕ್‌ ಮಿತ್ತಲ್‌, ದೆಹಲಿ ಐಐಟಿಯ ಪ್ರಾಧ್ಯಪಕ ಸಂದೀಪ್‌ ಪಾಠಕ್‌ ಮತ್ತು ಕೈಗಾರಿಕೋದ್ಯಮಿ ಸಂಜೀವ್‌ ಅರೋರಾ ಅವರನ್ನು ಎಎಪಿ ಮಾ.31ಕ್ಕೆ ನಡೆಯುವ ಚುನಾವಣೆಗೆ ಹೆಸರು ಸೂಚಿಸಿತ್ತು. ಪಂಜಾಬ್‌ನಿಂದ ರಾಜ್ಯಸಭಾ ಚುನಾವಣೆಗೆ ಬೇರೆ ಯಾವ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಈ ಐವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನವಣಾಧಿಕಾರಿ ಸುರೀಂದರ್‌ ಪಾಲ್‌ ತಿಳಿಸಿದ್ದಾರೆ.

click me!