ಭಾರತದ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳ ಸರಣಿ ಮುಂದುವರೆದಿದ್ದು, ಭಾನುವಾರ ಮತ್ತೆ 50 ವಿಮಾನಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ರವಾನಿಸಲಾಗಿದೆ. ಇದರೊಂದಿಗೆ ಕಳೆದೆರಡು ವಾರದಲ್ಲಿ ಬಂದ ಬೆದರಿಕೆಗಳ ಸಂಖ್ಯೆ 350 ತಲುಪಿದೆ.
ನವದೆಹಲಿ (ಅ.28): ಭಾರತದ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳ ಸರಣಿ ಮುಂದುವರೆದಿದ್ದು, ಭಾನುವಾರ ಮತ್ತೆ 50 ವಿಮಾನಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ರವಾನಿಸಲಾಗಿದೆ. ಇದರೊಂದಿಗೆ ಕಳೆದೆರಡು ವಾರದಲ್ಲಿ ಬಂದ ಬೆದರಿಕೆಗಳ ಸಂಖ್ಯೆ 350 ತಲುಪಿದೆ.
ಆಕಾಸಾದ 15, ಇಂಡಿಗೋದ 18 ಹಾಗೂ ವಿಸ್ತಾರದ 17 ವಿಮಾನಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಒಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿ, ನಂತರ ಪ್ರಯಾಣ ಮುಂದುವರೆಸಲು ಅನುಮತಿಸಲಾಗಿದೆ.
ಇತ್ತೀಚೆಗಷ್ಟೇ ಬೆದರಿಕೆ ಸಂದೇಶಗಳನ್ನು ನಿಯಂತ್ರಿಸುವಂತೆ ಐಟಿ ಸಚಿವಾಲಯ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದ್ದು, ಇಂತಹ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲು ವಿಮಾನಯಾನ ಸಂಸ್ಥೆ ಚಿಂತನೆ ನಡೆಸುತ್ತಿದೆ.
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ : ಕಠಿಣ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚನೆ
ತಿರುಪತಿ: 2 ಹೋಟೆಲ್, ದೇವಸ್ಥಾನಕ್ಕೆ ಬಾಂಬ್ ಬೆದರಿಕೆ
ತಿರುಪತಿ: ಇಲ್ಲಿನ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಸತತ 3ನೇ ದಿನವೂ ಮುಂದುವರಿದಿದ್ದು, ಇದೀಗ 2 ಹೋಟೆಲ್ ಹಾಗೂ ವರದರಾಜ ದೇವಸ್ಥಾನಕ್ಕೆ ಭಾನುವಾರ ಬೆದರಿಕೆ ಸಂದೇಶ ರವಾನಿಸಲಾಗಿದೆ.ಹೋಟೆಲ್‌ಗಳು ಹಾಗೂ ದೇವಸ್ಥಾನದ ಆವರಣದಲ್ಲಿ ಬಾಂಬ್ ಇರುವುದಾಗಿ ಇ-ಮೇಲ್ ಮೂಲಕ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ಇ-ಮೇಲ್ ಸಂದೇಶದಲ್ಲಿ ತಮಿಳುನಾಡಿನ ಸ್ಥಳೀಯ ರಾಜಕಾರಣಿ ಹಾಗೂ ಪಾಕಿಸ್ತಾನದ ಐಎಸ್‌ಐ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.
ಉ. ಪ್ರದೇಶದ 10 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ
ಲಖನೌ: ತಿರುಪತಿ, ರಾಜ್‌ಕೋಟ್ ಬಳಿಕ ಇದೀಗ ಉತ್ತರಪ್ರದೇಶದ ರಾಜಧಾನಿ ಲಖನೌನ 10 ಹೋಟೆಲ್‌ಗಳಿಗೆ ಭಾನುವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.‘ಹೋಟೆಲ್‌ನಲ್ಲಿ ಕಪ್ಪು ಚೀಲಗಳಲ್ಲಿ ಬಾಂಬ್ ಇರಿಸಲಾಗಿದೆ. ನನಗೆ 46.24 ಲಕ್ಷ ರು. ನೀಡಬೆಕು. ಇಲ್ಲದಿದ್ದರೆ ಬಾಂಬ್‌ಗಳನ್ನು ಸ್ಫೊಟಿಸುತ್ತೇನೆ. ಅವುಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದರೂ ಸ್ಫೋಟ ಸಂಭವಿಸುತ್ತದೆ’ ಎಂಬ ಸಂದೇಶ ಕಳಿಸಲಾಗಿದೆ. ಈ ಕುರಿತು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ವಿಮಾನಗಳಿಗೆ ಬಾಂಬ್ ಬೆದರಿಕೆಯಿಂದ 300 ಕೋಟಿ ನಷ್ಟ, ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನು ಎಚ್ಚರಿಕೆ
ಹೋಟೆಲ್‌ನಲ್ಲಿ ಅತಿಥಿಗಳ ಬ್ಯಾಗ್ ಪರಿಶೀಲಿಸುವ ವ್ಯವಸ್ಥೆ ಇದೆಯಾದರೂ, ಮುಂಜಾಗೃತಾ ಕ್ರಮವಾಗಿ ಹೋಟೆಲ್ ಸ್ಕ್ಯಾನ್ ಮಾಡಲು ಪೊಲೀಸರ ಸಹಕಾರ ಪಡೆಯಲಾಗಿದೆ ಎಂದು ಹೋಟೆಲೊಂದರ ಮ್ಯಾನೇಜರ್ ಬ್ರಜೇಶ್ ಕುಮಾರ್ ತಿಳಿಸಿದ್ದಾರೆ.