ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ವಿವಾದದ ಬೆನ್ನಲ್ಲೇ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದ್ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಗಾಜಿಯಾಬಾದ್ (ಅ.6): ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ವಿವಾದದ ಬೆನ್ನಲ್ಲೇ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದ್ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ನರಸಿಂಗಾನಂದ್ ಬಂಧನಕ್ಕೆ ಆಗ್ರಹಿಸಿ ಮುಸ್ಲಿಮರು ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಸೆ.29ರಂದು ದಸ್ನಾ ದೇಗುಲದಲ್ಲಿ ಭಕ್ತರನ್ನು ಉದ್ಧೇಶಿಸಿ ಮಾತನಾಡುವ ವೇಳೆ, ನೀವು ದಸರಾ ವೇಳೆ ಪ್ರತಿಕೃತಿ ದಹಿಸುವುದಾದರೆ ಪ್ರವಾದಿ ಮೊಹಮ್ಮದ್ ಅವರ ಪ್ರತಿಕೃತಿ ದಹಿಸಿ ಎಂದು ಕರೆ ನೀಡಿದ್ದರು. ಈ ಕುರಿತ ವಿಡಿಯೋ ಶನಿವಾರ ವೈರಲ್ ಆದ ಬೆನ್ನಲ್ಲೇ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಇಂಥದ್ದೇ ಹೇಳಿಕೆ ವಿರುದ್ಧ ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ನರಸಿಂಗಾನಂದ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಯತಿ ನರಸಿಂಹಾನಂದ್ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋ ಹಲವು ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶ, ಪ್ರತಿಭಟನೆಗಳು ಮತ್ತು ಘರ್ಷಣೆಗಳಿಗೆ ಕಾರಣವಾಯಿತು. ವಿವಾದಾತ್ಮಕ ಹೇಳಿಕೆಯಿಂದ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಹೊರಗೆ ಶುಕ್ರವಾರ ರಾತ್ರಿ ಭಾರೀ ಜನ ಸೇರಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿದರು. ಅಶಾಂತಿ ತಡೆಯಲು ದೇವಾಲಯದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದರು. ವರದಿಗಳ ಪ್ರಕಾರ, ಯತಿ ನರಸಿಂಹಾನಂದ್ ಅವರ ಆಪ್ತ ಸಹಾಯಕರು ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ, ಆದರೂ ಗಾಜಿಯಾಬಾದ್ ಪೊಲೀಸರು ಆತನ ಬಂಧನವನ್ನು ಖಚಿತಪಡಿಸಿಲ್ಲ ಎನ್ನಲಾಗಿದೆ.