
ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಕಿರೀಟ ಎತ್ತಿ ಹಿಡಿದು ಇತಿಹಾಸ ಸೃಷ್ಟಿಸಿರೋದು ಗೊತ್ತೆ ಇದೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡವನ್ನು ಸೋಲಿಸಿ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ ನವಂಬರ್ 2 ರಂದು ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ದೇಶದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಖುಷಿ ಪಡುವಂತೆ ಮಾಡಿದೆ. ಮಹಿಳಾ ಕ್ರಿಕೆಟ್ ತಂಡದ ಈ ಗೆಲುವನ್ನು ಭಾರತದ ಹಲವು ಮಹಾನಗರಗಳ ಬೀದಿಗಳಲ್ಲಿ ಯುವಕರು ಸಂಭ್ರಮಿಸಿದ್ದಾರೆ. ರಸ್ತೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾ ಬೈಕ್‌ನಲ್ಲಿ ಜಾಥಾ ಹೋಗಿ ಸಂಭ್ರಮಿಸಿದ್ದಾರೆ. ಹಾಗೆಯೇ ಹೈದರಾಬಾದ್‌ನಲ್ಲಿಯೂ ಯುವಕರು ಬೀದಿಗಿಳಿದು ಮಹಿಳಾ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ್ದಾರೆ. ಆದರೆ ಈ ವೇಳೆ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಯನ್ನೇ ಯುವಕರು ಮೇಲೆತ್ತಿ ಗಾಳಿಯಲ್ಲಿ ಹಾರಿಸಿದಂತಹ ಘಟನೆ ನಡೆದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
@amazing.hyderabad ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಈ ವೀಡಿಯೋ ಈಗ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಪೊಲೀಸ್ ಅಧಿಕಾರಿ ಅಲ್ಲಿ ಸೇರಿದ್ದ ಜನಸಂದಣಿಯನ್ನು ನಿಯಂತ್ರಿಸಲು, ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದರೆ, ಅಲ್ಲಿ ಸಂಭ್ರಮಿಸುತ್ತಿದ್ದ ಯುವಕರ ಗುಂಪು ಅವರನ್ನು ಸುತ್ತುವರೆದು ಸಂಭ್ರಮಿಸಲು ಆರಂಭಿಸಿದ್ದು, ನಂತರ ಅವರನ್ನೇ ಹೀರೋ ರೀತಿ ಎತ್ತಿಕೊಂಡು ಕುಣಿದಾಡಿದ್ದಲ್ಲದೇ ಗಾಳಿಯಲ್ಲಿ ಹಾರಿಸಿದ್ದಾರೆ.
ಕ್ರಿಕೆಟ್ ಪ್ರೇಮಿಗಳ ಹುಚ್ಚಾಟಕ್ಕೆ ಅಧಿಕಾರಿ ಮೊಗದಲ್ಲಿ ನಗು
ಇತ್ತ ಅಲ್ಲಿ ಸೇರಿದ್ದ ಜನ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಜಯಕಾರ ಕೂಗುತ್ತಿದ್ದರೆ ನಡುವೆ ಯುವಕರು ಅಧಿಕಾರಿಯನ್ನೇ ಮೇಲೆತ್ತಿ ಸಂಭ್ರಮಿಸಿದ್ದು, ಯುವಕರ ಹುಚ್ಚಾಟ ನೋಡಿ ಅಧಿಕಾರಿ ಮೊಗದಲ್ಲೂ ನಗು ಬಂದಿದೆ.
ಹೈದರಾಬಾದ್‌ನಲ್ಲಿ 2025 ರ ಮಹಿಳಾ ವಿಶ್ವಕಪ್ ಗೆಲುವಿನ ಸಂಭ್ರಮ ಹೀಗಿರಬೇಕು ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು,, 3 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 1,000 ಕ್ಕೂ ಹೆಚ್ಚು ಜನ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಇತರರು ಶೇರ್ ಮಾಡಿದ್ದಾರೆ.
ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಅರೇ ಅವರು ಪೊಲೀಸ್ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟ್ ಆಚರಣೆಯ ವಿಷಯಕ್ಕೆ ಬಂದರೆ ಹೈದರಾಬಾದ್ ಅನ್ನು ಕಡಿಮೆ ಅಂದಾಜು ಮಾಡಲಾಗುತ್ತದೆ. ಜನರು ದೆಹಲಿ, ಮುಂಬೈ, ಚೆನ್ನೈ ಬಗ್ಗೆ ಮಾತ್ರ ಮಾತನಾಡುತ್ತಾರೆ ಆದರೆ ಹೈದರಾಬಾದ್ ಜನ ಕ್ರಿಕೆಟ್ ಗೆಲುವನ್ನು ಸಂಭ್ರಮಿಸುವುದರಲ್ಲಿ ಕಡಿಮೆ ಏನಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪುರುಷರು ಮಹಿಳಾ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವುದು ಖುಷಿಯ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸಮಯದಲ್ಲಿ ಬ್ರೋ ಪೊಲೀಸ್ ಆಗಿಯೇ ಇರುವುದಕ್ಕೆ ಕಷ್ಟಪಡುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗೆ ಕಾರಿನಲ್ಲಿದ್ದ ವಿದ್ಯಾರ್ಥಿನಿಯ ಅಪಹರಿಸಿ ಗ್ಯಾಂಗ್*ರೇಪ್ : ವಿಮಾನ ನಿಲ್ದಾಣದ ಸಮೀಪವೇ ಘಟನೆ
ಇದನ್ನೂ ಓದಿ: ಕೋಟಿಯೊಡೆಯ ಬೀಡಿ ಸಾಮ್ರಾಜ್ಯದ ಮಾಲೀಕನ ದುರಂತ ಅಂತ್ಯ: ಕುಡಿದ ಮತ್ತಿನಲ್ಲಿ ತಂದೆಗೆ ಗುಂಡಿಕ್ಕಿದ ಮಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ