
ನರೇಂದ್ರ ಮೋದಿ, ಪ್ರಧಾನಿ
ನಮ್ಮ ದೇಶವು 21ನೇ ಶತಮಾನದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದನ್ನು ಕೈಗೊಳ್ಳುವ ಹಂತದಲ್ಲಿದೆ. ಸಂಸತ್ತು ದಶಕಗಳ ಕಾಯುವಿಕೆಯನ್ನು ಕೊನೆಗೊಳಿಸಲು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಇದು 2029ರಿಂದ ಜಾರಿಯಾಗಲಿದೆ. ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ತಿದ್ದುಪಡಿ ತರುವುದು ಭೂತಕಾಲದ ದೃಷ್ಟಿಕೋನಗಳನ್ನು ನನಸು ಮಾಡುತ್ತದೆ. ಭವಿಷ್ಯದ ಸಂಕಲ್ಪಗಳನ್ನು ಪೂರೈಸುತ್ತದೆ. ಆಡಳಿತದಲ್ಲಿ ಮಹಿಳೆಯರು ನೀಡಿರುವ ಕೊಡುಗೆಗಳನ್ನು ನಾನು ಸದಾಕಾಲ ಸ್ಮರಿಸುತ್ತೇನೆ. ನಮ್ಮಲ್ಲಿ ಅನೇಕ ಮಹಿಳೆಯರು ಇನ್ನೂ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಮತ್ತು ಉತ್ಸುಕರಾಗಿದ್ದಾರೆ. ಅವರಿಗೆ ಹೊಸ ನಿಯಮ ಅಪಾರ ನೆರವು ನೀಡಲಿದೆ. ತಮಗೆ ಸಿಗಬೇಕಾಗಿದ್ದನ್ನು ಪಡೆಯುವ ಸಲುವಾಗಿ ಭಾರತದ ಪುತ್ರಿಯರು ಇನ್ನು ಕಾಯುವುದು ಬೇಡ.
2023ರಲ್ಲಿ ಈ ಕಾನೂನನ್ನು ಪರಿಚಯಿಸಿದಾಗ ಅದನ್ನು ಎಲ್ಲಾ ಪಕ್ಷಗಳು ಏಕಮತದಿಂದ ಅಂಗೀಕರಿಸಿದವು. ವಿಶೇಷವಾಗಿ ವಿರೋಧ ಪಕ್ಷಗಳಿಂದ 2029ರೊಳಗೆ ಅದನ್ನು ಜಾರಿಗೊಳಿಸುವಂತೆ ಒಂದು ಸಾಮೂಹಿಕ ಬೇಡಿಕೆ ಇತ್ತು. ಏ.16, 17 ಮತ್ತು 18ರಂದು ನಡೆಯಲಿರುವ ವಿಸ್ತರಿತ ಬಜೆಟ್ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ಪರಿಗಣಿಸಿ ಅಂಗೀಕರಿಸಲಾಗುತ್ತದೆ. ಇದರ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಏರಿಸಲಾಗುವುದು ಹಾಗೂ ಇದರಲ್ಲಿ 273 ಸೀಟುಗಳು ಮಹಿಳೆಯರಿಗೆ ಮೀಸಲಾಗಿ ಇರುವುದು. ಇದಕ್ಕೆ ಸರ್ವಪಕ್ಷಗಳ ಬೆಂಬಲ ಬೇಕಿದೆ. 2023ರಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣವಾದಾಗ ನಾವು, ಉಭಯ ಸದನಗಳಲ್ಲಿ ಸ್ತ್ರೀಯರಿಗೆ ಶೇ.33ರಷ್ಟು ಸೀಟುಗಳನ್ನು ಮೀಸಲಿಡುವ ನಾರಿ ಶಕ್ತಿ ವಂದನ ಕಾಯ್ದೆಯ ರೂಪದಲ್ಲಿ ಮೊದಲ ಹೆಜ್ಜೆ ಇಟ್ಟೆವು. ನಮ್ಮ ರಾಷ್ಟ್ರದ ಅಭಿವೃದ್ಧಿಯ ಪಯಣದ ಮುಖ್ಯ ಮೈಲುಗಲ್ಲುಗಳ ನಡುವೆ, ನಾರಿ ಶಕ್ತಿಗೆ ಸಮರ್ಪಿತವಾದ ಈ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಈ ನಿರ್ಧಾರವು ನಮ್ಮ ಕಾಲದ ಅತ್ಯಂತ ಮುಖ್ಯ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ಮಹಿಳಾ ಸಬಲೀಕರಣಕ್ಕೆ ಸಮರ್ಪಿತವಾದ ನಿರ್ಣಯವಾಗಿರುವ ಇದು, ಮಹಿಳಾ ಶಕ್ತಿ ಮತ್ತು ಗೌರವಕ್ಕೆ ನಿಜವಾದ ಕಾಣಿಕೆ. ಈ ಬಗ್ಗೆ ಅವರಲ್ಲಿ ಈಗಾಗಲೇ ಉತ್ಸಾಹ ಕಾಣಿಸಲು ಶುರು ಆಗಿದೆ.
ನಾರಿ ಶಕ್ತಿ ವಂದನ ಅಧಿನಿಯಮವನ್ನು ಸಕಾಲದಲ್ಲಿ ಜಾರಿಗೊಳಿಸಬೇಕು. ಏಕೆಂದರೆ ಮಹಿಳೆಯರ ಭಾಗವಹಿಸುವಿಕೆಯು ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಈ ಕೆಲಸವನ್ನು ಸಂಸತ್ತಿನ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ಪರಸ್ಪರ ಸಂವಾದ, ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಮಾಡಬೇಕು ಎಂಬುದು ನಮ್ಮ ಪ್ರಯತ್ನ ಮತ್ತು ಆದ್ಯತೆ. ದೇಶದ ಮಹಿಳೆಯರು ವಿಧಾನಸಭೆ ಮತ್ತು ಲೋಕಸಭೆಯನ್ನು ಪ್ರವೇಶಿಸುವ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ದೇಶದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಅವರ ಧ್ವನಿ ಗಟ್ಟಿಯಾದರೆ ಪ್ರಜಾಪ್ರಭುತ್ವಕ್ಕೂ ಬಲ ಬಂದಂತೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎಲ್ಲಾ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವಂತೆ ನಾನು ಮನವಿ ಮಾಡುತ್ತೇನೆ. ತಮ್ಮ ಕ್ಷೇತ್ರದ ಸಂಸದರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳು ಮತ್ತು ನಿರೀಕ್ಷೆಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.
ಸ್ತ್ರೀಯರಿಂದ ಪರಂಪರೆ ನಿರ್ಮಾಣ:
ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂವಿಧಾನ ಸಭೆಯವರೆಗೆ ಮಹಿಳೆಯರು ಸ್ವತಂತ್ರ ಭಾರತದ ಅಡಿಪಾಯ ಹಾಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ರಾತಿನಿಧ್ಯದ ಅವಕಾಶಗಳು ದೊರೆತಾಗೆಲ್ಲ ಮಹಿಳೆಯರು ದೇಶಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇಂದೂ ನಮ್ಮ ದೇಶದಲ್ಲಿ ರಾಷ್ಟ್ರಪತಿಯಿಂದ ಹಿಡಿದು ಹಣಕಾಸು ಸಚಿವರ ವರೆಗೆ ಮಹಿಳೆಯರು ಮುಖ್ಯ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಪಂಚಾಯತ್ ರಾಜ್ ಸಂಸ್ಥೆಗಳು ಮಹಿಳಾ ನಾಯಕತ್ವದ ಅತ್ಯುತ್ತಮ ಉದಾಹರಣೆ. ಇಂದು 14 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 21 ರಾಜ್ಯಗಳ ಪಂಚಾಯತ್‌ಗಳಲ್ಲಿ ಅವರ ಭಾಗವಹಿಸುವಿಕೆ ಶೇ.50ಕ್ಕೆ ತಲುಪಿದೆ. ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಲಕ್ಷಾಂತರ ಮಹಿಳೆಯರ ಈ ಸಕ್ರಿಯ ಭಾಗವಹಿಸುವಿಕೆಯು ವಿಶ್ವದ ಪ್ರಮುಖ ನಾಯಕರು ಮತ್ತು ರಾಜಕೀಯ ತಜ್ಞರನ್ನೂ ಆಶ್ಚರ್ಯಗೊಳಿಸುತ್ತಿದೆ. ವಿವಿಧ ಅಧ್ಯಯನಗಳ ಪ್ರಕಾರ, ನಿರ್ಧಾರ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾದಾಗ ವ್ಯವಸ್ಥೆಗಳಲ್ಲಿ ಸೂಕ್ಷ್ಮತೆ ಬರುತ್ತದೆ ಹಾಗೂ ಇದು ವಿಕಸಿತ ಭಾರತದ ಕಡೆಗಿನ ಪಯಣಕ್ಕೆ ಬಲ ತುಂಬುತ್ತದೆ. ನೀರು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯಂತಹ ವಿಷಯಗಳಲ್ಲಿ ಹೆಚ್ಚು ಸಮರ್ಪಣೆಯಿಂದ ಕೆಲಸ ನಡೆಯುತ್ತದೆ. ಜಲ ಜೀವನ್ ಮಿಷನ್‌ನ ಯಶಸ್ಸು ಇದಕ್ಕೆ ಉದಾಹರಣೆ. ಅತ್ತ ಅನೇಕ ನವೋದ್ಯಮಗಳಲ್ಲಿ ಮಹಿಳೆಯರು ನಾಯಕತ್ವದ ಸ್ಥಾನವನ್ನು ಅಲಂಕರಿಸಿದ್ದಾರೆ. ವಿಜ್ಞಾನ, ನಾವೀನ್ಯತೆ, ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ, ಸಿನಿಮಾ, ಕ್ರೀಡಾ ಕ್ಷೇತ್ರದಲ್ಲೂ ಅವರ ಪಾಲ್ಗೊಳ್ಳಯವಿಕೆ ಹೆಚ್ಚಿದೆ.
ನಾರಿ ಶಕ್ತಿಗೆ ನವ ಚೈತನ್ಯ ನೀಡಲು ಬದ್ಧ:
ಸ್ಥಳೀಯ ಸಂಸ್ಥೆಗಳಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿರುವ ಲಕ್ಷಾಂತರ ಮಹಿಳೆಯರು ಈಗ ವಿಶಾಲ ಅನುಭವವನ್ನು ಹೊಂದಿದ್ದಾರೆ. ಅವರು ದೊಡ್ಡ ಜವಾಬ್ದಾರಿಗಳಿಗೆ ಸಿದ್ಧರಾಗಿದ್ದಾರೆ. ನಾರಿ ಶಕ್ತಿ ವಂದನ ಅಧಿನಿಯಮವನ್ನು ಜಾರಿಗೊಳಿಸುವುದು ಅಂತಹ ಎಲ್ಲಾ ಮಹಿಳೆಯರ ಜೀವನಕ್ಕೆ ದೊಡ್ಡ ಅವಕಾಶ ತಂದುಕೊಡುತ್ತದೆ. ಪಂಚಾಯತ್‌ನಿಂದ ಸಂಸತ್ತಿನವರೆಗಿನ ಮಹಿಳೆಯರ ಪಯಣವು ಸುಲಭವಾಗುತ್ತದೆ. ಅಭಿವೃದ್ಧಿಯುತ ಭಾರತದ ಪಯಣದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ರಾಷ್ಟ್ರವು ಅವರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿದೆ. ಅವರ ಕನಸುಗಳನ್ನು ನನಸು ಮಾಡಲು ನಮ್ಮ ಸರ್ಕಾರ ಅಗತ್ಯವಾದ ಪ್ರತಿಯೊಂದು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ನಾನು ಭರವಸೆ ನೀಡುತ್ತೇನೆ. ದೇಶದ ನಾರಿ ಶಕ್ತಿಯು ಕಠಿಣ ಪರಿಶ್ರಮ, ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ ಹೊಸ ಎತ್ತರವನ್ನು ತಲುಪಿದೆ. ಈ ಶಕ್ತಿಗೆ ನಾವೆಲ್ಲರೂ ಒಟ್ಟಾಗಿ ಹೊಸ ಚೈತನ್ಯವನ್ನು ನೀಡಬೇಕು. ಅವರಿಗೆ ಇನ್ನಷ್ಟು ಅವಕಾಶಗಳನ್ನು ವಿಸ್ತರಿಸಬೇಕು.
ಸ್ತ್ರೀಯರಿಗಾಗಿ ಅನೇಕ ಯೋಜನೆ:
2014ರಿಂದ ನಮ್ಮ ಸರ್ಕಾರವು ಮಹಿಳೆಯರ ಜೀವನಚಕ್ರದ ಪ್ರತಿಯೊಂದು ಹಂತಕ್ಕೂ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದೆ. ಮೊದಲ ಉಸಿರಿನಿಂದ ಕೊನೆಯುಸಿರಿನವರೆಗೆ, ಸರ್ಕಾರವು ಪ್ರತಿ ಸಹೋದರಿ ಮತ್ತು ಮಗಳಿಗೆ ವಿವಿಧ ಯೋಜನೆಗಳ ಮೂಲಕ ಸೇವೆ ಸಲ್ಲಿಸಲು ಸಿದ್ಧವಾಗಿದೆ. ನಾವು ಹೆಣ್ಣು ಭ್ರೂಣ ಹತ್ಯೆ ತಡೆಯಲು ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಗರ್ಭವತಿಯಾಗಿರುವ ಸಮಯದಲ್ಲಿ ಸರಿಯಾದ ಪೋಷಣೆಗಾಗಿ ಮಾತೃ ವಂದನ ಯೋಜನೆಯಡಿ 5,000 ರು. ಆರ್ಥಿಕ ನೆರವು ನೀಡಿದ್ದೇವೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಲು ಹೆಚ್ಚು ಬಡ್ಡಿ ದರದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಇನ್ನೂ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.
ನಾರಿ ಶಕ್ತಿ ವಂದನ ಅಧಿನಿಯಮದ ತಿದ್ದುಪಡಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಭೂತಕಾಲದ ದೃಷ್ಟಿಕೋನಗಳನ್ನು ನನಸು ಮಾಡಿ, ಭವಿಷ್ಯದ ಸಂಕಲ್ಪಗಳನ್ನು ಪೂರೈಸುತ್ತದೆ. ಇದು ಮಹಿಳಾ ಸಬಲೀಕರಣಕ್ಕೆ ಸಮರ್ಪಿತವಾದ ನಿರ್ಣಯ. ಮಹಿಳಾ ಶಕ್ತಿ ಮತ್ತು ಗೌರವಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ನಿಜವಾದ ಕಾಣಿಕೆಯೂ ಹೌದು.
ನರೇಂದ್ರ ಮೋದಿ, ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ