
ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಂದು ಮೆಡಿಕಲ್ ಮಾಫಿಯಾ ವಿಸ್ತಾರವಾಗಿ ಬೆಳೆದು ಬಿಟ್ಟಿದೆ. ಹಲವು ಆಸ್ಪತ್ರೆಗಳಲ್ಲಿ ದುಡ್ಡಿನ ಹಪಾಹಪಿಗೆ ಪ್ರಾಣಕ್ಕೆ ಲೆಕ್ಕವೇ ಇಲ್ಲವಾಗಿದೆ. ಕಾಯಿಲೆ ಇದ್ದವ ಆಸ್ಪತ್ರೆಗೆ ಹೋಗಿ ಹುಷಾರಾಗಿ ಬರುವ ಬದಲು, ಆರೋಗ್ಯವಂತನಾಗಿ ಆಸ್ಪತ್ರೆಗೆ ಹೋಗಿ ಹೊರಬರುವಾಗ ರೋಗಿಯಾಗಿ ಮರಳಿದರೆ ಪುಣ್ಯ, ಇಲ್ಲದಿದ್ದರೆ ಆತನ ಡೆಡ್ಬಾಡಿ ಬರುತ್ತದೆ. ಅದೂ ಹೆಣ ಕೊಡುವಾಗ ಸುಮ್ಮನೇ ಕೊಡುವುದಿಲ್ಲ ಮತ್ತೆ, ಹತ್ತಿಪ್ಪತ್ತು ಲಕ್ಷ ಪೀಕಿಯೇ ಹೆಣ ಕೊಡುವ ಸ್ಥಿತಿ ದಿನನಿತ್ಯ ಸೋಷಿಯಲ್ ಮೀಡಿಯಾದಲ್ಲಿ ನೊಂದವರು ಬರೆದುಕೊಳ್ಳುವುದನ್ನು ನೋಡಬಹುದಾಗಿದೆ. ರೋಗಿ ಒಂದು ಚಿಕಿತ್ಸೆಗೆ ಹೋದರೆ, ಇನ್ನೊಂದು ಚಿಕಿತ್ಸೆ ನೀಡಿ ಅವರ ಸಾವಿಗೆ ಕಾರಣವಾಗುತ್ತಿರುವ ಎಷ್ಟು ಉದಾಹರಣೆಗಳು ದಿನನಿತ್ಯ ನಡೆಯುತ್ತಿಲ್ಲ ಹೇಳಿ?
ಅಂಥದ್ದೇ ಒಂದು ಕೇಸ್ನಲ್ಲಿ ಇದೀಗ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದೆಹಲಿಯ ರಾಷ್ಟ್ರೀಯ ಗ್ರಾಹಕರ ವೇದಿಕೆ ಆಸ್ಪತ್ರೆಯೊಂದಕ್ಕೆ ಆದೇಶಿಸಿದೆ. 56 ವರ್ಷದ ಮಹಿಳೆಯೊಬ್ಬರು ಕಿಡ್ನಿ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಬಲಭಾಗದ ಮೂತ್ರಪಿಂಡದಲ್ಲಿ ಸಮಸ್ಯೆಯಿತ್ತು. ಆದರೆ ಆ ಎಂಬಿಬಿಎಸ್ ಸೇರಿ ಹಲವು ಡಿಗ್ರಿಗಳನ್ನು ತಮ್ಮ ಮುಂದೆ ಹಾಕಿಕೊಂಡಿರುವ ಡಾಕ್ಟರ್, ಎಡಭಾಗದ ಕಿಡ್ನಿ ಆಪರೇಷನ್ ಮಾಡಿದ್ದಾರೆ! ಸಾಲದು ಎನ್ನುವುದಕ್ಕೆ ಉತ್ತಮವಾಗಿರುವ ಕಿಡ್ನಿಯನ್ನೇ ತೆಗೆದಿದ್ದಾರೆ. ಕೊನೆಗೆ ಮಹಿಳೆ ಸಾವನ್ನಪ್ಪಿದ್ದಾರೆ. ಆ ಶವವನ್ನು ಕೊಡಲು ಆಸ್ಪತ್ರೆ ಇನ್ನೆಷ್ಟು ಲಕ್ಷವನ್ನು ಕೇಳಿತ್ತೋ ಆ ದೇವರಿಗೇ ಗೊತ್ತು.
ಈ ವಿಷಯವನ್ನು ಇಲ್ಲಿಗೇ ಬಿಡದ ಮೃತ ಮಹಿಳೆಯ ಪತಿ ಇದನ್ನು ಗ್ರಾಹಕರ ಕೋರ್ಟ್ನಲ್ಲಿ ಪ್ರಶ್ನಿಸಿದರು. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಇದರ ವಿಚಾರಣೆ ನಡೆಸಿತು. ನಿವೃತ್ತ ನ್ಯಾಯಮೂರ್ತಿ ಎ ಪಿ ಸಾಹಿ (ಅಧ್ಯಕ್ಷರು) ಮತ್ತು ಭರತ್‌ಕುಮಾರ್ ಪಾಂಡ್ಯ (ಸದಸ್ಯರು) ಅವರನ್ನೊಳಗೊಂಡ ಪೀಠವು ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿತು, ಅಲ್ಲಿ ರೋಗಿಯ ಎಡ ಮೂತ್ರಪಿಂಡವನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಗಮನಿಸಿದ ನ್ಯಾಯಮೂರ್ತಿಗಳು ಆಸ್ಪತ್ರೆಯ ಕ್ರಮಕ್ಕೆ ಸಿಕ್ಕಾಪಟ್ಟೆ ಅಸಮಾಧಾನಗೊಂಡರು. ಮಹಿಳೆಯ ಬಲ ಮೂತ್ರಪಿಂಡದಲ್ಲಿ ಹೈಡ್ರೋನೆಫ್ರೋಸಿಸ್ (ಮೂತ್ರ ಶೇಖರಣೆಯಿಂದಾಗಿ ಊತ) ಇರುವುದು ಪತ್ತೆಯಾಗಿತ್ತು. ಅದರ ಆಪರೇಷನ್ ಮಾಡುವ ಬದಲು ಎಡಭಾಗದಲ್ಲಿರುವ ಸರಿಯಾಗಿ ಮೂತ್ರಪಿಂಡದ ಆಪರೇಷನ್ ಮಾಡಿ ಸಾಯಿಸಿಬಿಟ್ಟಿದ್ದರು ಈ ವೈದ್ಯರು.
ಆಸ್ಪತ್ರೆಯವರು ಮಾಡಿರುವ ಈ ಕೃತ್ಯ ಅಪರಾಧವಾಗದೆ. ಅತ್ಯಂತ ಗಂಭೀರ ನಿರ್ಲಕ್ಷ್ಯದ ರೂಪಗಳಲ್ಲಿ ಒಂದಾಗಿದೆ ಎಂದಿರುವ ನ್ಯಾಯಮೂರ್ತಿಗಳು ಮೃತರ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ