
ನವದೆಹಲಿ (ಮೇ21): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿ ಬರುವ ಐದು ಪಾಲಿಕೆಗಳಿಗೆ ಚುನಾವಣೆ ವಿಳಂಬಗೊಳಿಸಲು ರಾಜ್ಯ ಸರ್ಕಾರವು ಯತ್ನಿಸುತ್ತಿದೆ ಎಂದು ಕಟುವಾಗಿ ಟೀಕಿಸಿರುವ ಸುಪ್ರೀಂಕೋರ್ಟ್, ಆಗಸ್ಟ್ 31ರೊಳಗೆ ಜಿಬಿಎ ಅಡಿ ಬರುವ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಜಿಬಿಎ ಚುನಾವಣೆ ಮುಂದೂಡಿಕೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ.ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠ, ಚುನಾವಣೆ ನಡೆಸಲು ಎರಡು ತಿಂಗಳ ಹೆಚ್ಚಿನ ಸಮಯಾವಕಾಶ ನೀಡಿತು.
ಈ ಪ್ರಕರಣವನ್ನು ನೋಡಿದರೆ ರಾಜ್ಯ ಸರ್ಕಾರವು ಪಾಲಿಕೆ ಚುನಾವಣೆ ಮುಂದೂಡಲು ಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅಂತಿಮವಾಗಿ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಗಣಿಸಿ, ಬಿಜಿಎಗೆ ಚುನಾವಣೆ ನಡೆಸಲು ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆದೇಶಿಸಿತು.
ಇದಕ್ಕೂ ಮೊದಲು, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ, ಜಿಬಿಎನ ಐದೂ ಪಾಲಿಕೆಗಳಿಗೆ ಜೂನ್ 30ರ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು. ಆದರೆ, ಸದ್ಯ ರಾಜ್ಯದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮತ್ತು ಜನಗಣತಿ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ, ಸಿಬ್ಬಂದಿಯ ಕೊರತೆ ಎದುರಾಗಲಿದ್ದು, ಚುನಾವಣೆ ನಡೆಸುವುದು ತಾಂತ್ರಿಕವಾಗಿ ಸವಾಲಾಗಿದೆ ಎಂದರು.
ನಂತರ, ಮಳೆಗಾಲ ಆರಂಭ ಆಗುತ್ತಿದೆ, ಇದರಿಂದ ಮುಂದಿನ ಮೂರು ತಿಂಗಳು ಚುನಾವಣೆ ನಡೆಸುವುದು ಕಷ್ಟ. ಹೀಗಾಗಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಕೇಂದ್ರ ನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ, ಪಾಲಿಕೆಗೆ ಚುನಾವಣೆ ನಡೆಸಲು ಡಿಸೆಂಬರ್‌ತನಕ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಚುನಾವಣೆ ಮುಂದೂಡಿಕೆ ವಿರೋಧಿಸಿ ವಕೀಲ ರಂಗನಾಥ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪರಮೇಶ್ವರ್ ಅವರು ವಾದ ಮಂಡಿಸಿದರು.
ನ್ಯಾಯಾಲಯವು ಹಲವು ಬಾರಿ ಕಾಲಾವಕಾಶ ನೀಡಿದೆ. ಸರ್ಕಾರ ಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿದೆ. 15 ದಿನ ಹೆಚ್ಚುವರಿ ಕಾಲಾವಕಾಶ ನೀಡಬಹುದು. ಅದರ ಮೇಲೆ ಸಮಯ ನೀಡಕೂಡದು ಎಂದು ಹೇಳಿದರು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಚುನಾವಣೆ ನಡೆಸಲು ಡಿಸೆಂಬರ್‌ವರೆಗೆ ಕಾಲಾವಕಾಶ ಕೋರಿದ್ದಾರೆ. ಮತ್ತೊಮ್ಮೆ ನ್ಯಾಯಾಲಯದ ಮುಂದೆ ಬರಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆಗಸ್ಟ್ 31ರೊಳಗೆ ಜಿಬಿಎ ಅಡಿ ಬರುವ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.
2015ರಲ್ಲಿ ಕೊನೆಯ ಬಾರಿಗೆ ಬಿಬಿಎಂಪಿಗೆ ಚುನಾವಣೆ ನಡೆದಿತ್ತು. ಇದರ ಅವಧಿ 2020ರ ಸೆಪ್ಟೆಂಬರ್ ಗೆ ಕೊನೆಗೊಂಡಿತ್ತು. ಅಂದಿನಿಂದ ಮೀಸಲಾತಿ, ಕ್ಷೇತ್ರ ಪುನರ್‌ವಿಂಗಡಣೆ ಮತ್ತಿತರ ನೆಪವೊಡ್ಡಿ ರಾಜ್ಯ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಾ ಬಂದಿವೆ. 2026ರ ಜನವರಿ 12ರಂದು ಈ ಸಂಬಂಧದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಜೂನ್ 30ರೊಳಗೆ ಜಿಬಿಎಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೂಡ ಚುನಾವಣಾ ದಿನಾಂಕ ನಿಗದಿಗೆ ಮುಂದಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ