ಸಿಬಿಐ ಪ್ರಕಾರ ಮೃತಪಟ್ಟಿದ್ದ ಮಹಿಳೆ ಕೋರ್ಟ್‌ನಲ್ಲಿ ದಿಢೀರ್‌ ಪ್ರತ್ಯಕ್ಷ: ಕೋರ್ಟ್‌ ಛೀಮಾರಿ

Published : Jun 08, 2022, 05:50 PM IST
ಸಿಬಿಐ ಪ್ರಕಾರ ಮೃತಪಟ್ಟಿದ್ದ ಮಹಿಳೆ ಕೋರ್ಟ್‌ನಲ್ಲಿ ದಿಢೀರ್‌ ಪ್ರತ್ಯಕ್ಷ: ಕೋರ್ಟ್‌ ಛೀಮಾರಿ

ಸಾರಾಂಶ

ಬಿಹಾರದ ಪತ್ರಕರ್ತರೊಬ್ಬರ ಹತ್ಯೆಯ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಸಿಬಿಐ ಕೋರ್ಟ್‌ಗೆ ದಾಖಲೆ ಸಲ್ಲಿಸಿತ್ತು. ಆದರೆ ಪ್ರಕರಣದ ವಿಚಾರಣೆ ವೇಳೆ ಮಹಿಳೆ ಕೋರ್ಟ್‌ಗೆ ಹಾಜರಾಗಿದ್ದು ನ್ಯಾಯಾಧೀಶರು ಸಿಬಿಐಗೆ ಛೀಮಾರಿ ಹಾಕಿದ್ದಾರೆ. ಜತೆಗೆ ಶೋಕಾಸ್‌ ನೊಟೀಸ್‌ ಕೂಡ ನೀಡಿದ್ದು, ಯಾವ ಕಾರಣಕ್ಕಾಗಿ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿದ್ದಾರೆ ಎಂಬ ಸ್ಪಷ್ಟನೆ ಕೋರಿದ್ದಾರೆ.

ಈ ಹಿಂದೆ ಸಿಬಿಐ (Central Bureau of Investigation) ಮಹಿಳೆಯೊಬ್ಬಳನ್ನು ಮೃತಪಟ್ಟಿದ್ದಾಳೆ ಎಂದು ಘೋಷಿಸಿತ್ತು. ಆದರೆ ಬಿಹಾರದ ಮುಜಾಫರ್‌ಪುರ ಕೋರ್ಟಿನಲ್ಲಿ ಈಗ ದಾಖಲೆಗಳಲ್ಲಿ ಬದುಕಿರದ ಮಹಿಳೆ ದಿಢೀರ್‌ ಪ್ರತ್ಯಕ್ಷಳಾಗಿದ್ದಾಳೆ. ಮಹಿಳೆಯನ್ನು ನೋಡಿ ನ್ಯಾಯಾಧೀಶರೇ ದಿಗಿಲುಬಿದ್ದಿದ್ದಾರೆ, ನಂತರ ಸಿಬಿಐ ಅಧಿಕಾರಿಗಳಿಗೆ ಶೋಕಾಸ್‌ ನೊಟೀಸ್‌ ನೀಡಿದ್ದಾರೆ. ಬದುಕಿರುವ ಮಹಿಳೆಯನ್ನು ದಾಖಲೆಯಲ್ಲಿ ಸಾಯಿಸಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ಸಿಬಿಐಗೆ ನೊಟೀಸ್‌ ಜಾರಿಗೊಳಿಸಲಾಗಿದೆ. ಪತ್ರಕರ್ತ ರಾಜ್‌ದಿಯೊ ರಂಜನ್‌ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಬಾದಾಮಿ ದೇವಿ ಅವರು ವಿಧಿವಶರಾಗಿದ್ದಾರೆ ಎಂದು ಸಿಬಿಐ ಕೋರ್ಟ್‌ಗೆ ದಾಖಲೆ ಸಲ್ಲಿಸಿತ್ತು. ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಆಕೆಯ ಡೆತ್ ಸರ್ಟಿಫಿಕೇಟ್‌ (Fake Death Certificate) ಕೂಡ ನೀಡಿದ್ದರು. ಆದರೆ ಮಹಿಳೆ ದಿನಪತ್ರಿಕೆಗಳಲ್ಲಿ ಪ್ರಕರಣದ ವಿಚಾರಣೆ ಕುರಿತು ಬಂದ ವರದಿಗಳನ್ನು ನೋಡಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪತ್ರಕರ್ತನನ್ನು ಮಾರುಕಟ್ಟೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅರ್ಜಿದಾರರ ಪರ ವಕೀಲರು ಸಿಬಿಐ ತನಿಖಾ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಸುಳ್ಳು ದಾಖಲೆಗಳನ್ನು ಸಲ್ಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬಿಐ ಸುಳ್ಳು ದಾಖಲೆಗಳನ್ನು ಕೊಟ್ಟು ಸಾಕ್ಷಿ ನಾಶ ಮಾಡಲು ಮುಂದಾದಂತೆ ಭಾಸವಾಗುತ್ತಿದೆ. ಆ ಮೂಲಕ ಆರೋಪಿಗಳ ವಿರುದ್ಧ ಅಥವಾ ಪರ ಪಿತೂರಿ ಮಾಡುವಂತೆ ಕಾಣುತ್ತಿದೆ ಎಂಬ ಚರ್ಚೆಗೂ ಈ ಘಟನೆ ನಾಂದಿ ಹಾಡಿದೆ. 

2016ರ ಮೇ 23ರಂದು ಪತ್ರಕರ್ತ ರಾಜ್‌ದಿಯೊ ರಂಜನ್‌ (Journalist Rajdio Ranjan murder case) ಅವರನ್ನು ಬಾಹುಬಲಿ ಮೊಹಮ್ಮದ್‌ ಶಹಾಬುದ್ದೀನ್‌ನ ಸಹಚರ ಹತ್ಯೆ ಮಾಡಿದ್ದ ಎನ್ನಲಾಗಿತ್ತು. ಬಿಹಾರದ ಸಿವಾನ್‌ನ ಸ್ಟೇಷನ್‌ ರೋಡ್‌ನ ಮಾರುಕಟ್ಟೆಯಲ್ಲಿ ಹತ್ಯೆ ನಡೆದಿತ್ತು. ನಂತರ 2017ರಲ್ಲಿ ಪತ್ರಕರ್ತ ರಾಜ್‌ದಿಯೊ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವರ್ಗಾವಣೆ ಮಾಡಿ ಸುಪ್ರೀಂ ಕೋರ್ಟ್‌ ತನಿಖೆಗೆ ಆದೇಶಿಸಿತ್ತು. ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಅಮಿತವ ರಾಯ್‌ ನೇತೃತ್ವದ ದ್ವಿಸದಸ್ಯ ಪೀಠ ಆರೋಪಿಗಳು ಯಾವುದೇ ಕಾರಣಕ್ಕೂ ಜಾಮೀನು ಅರ್ಜಿ ಸಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿದ್ದರು. ಪ್ರಕರಣ ನಡೆದು ತಿಂಗಳುಗಳಾದರೂ ಸ್ಥಳೀಯ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿರಲಿಲ್ಲ. ಈ ಆಧಾರದ ಮೇಲೆ ಜಾಮೀನು ಅರ್ಜಿ ಸಲ್ಲಿಸಲು ಆರೋಪಿಗಳು ಮುಂದಾಗಿದ್ದರು. ಆದರೆ ಮದ್ಯ ಪ್ರವೇಶಿಸಿದ್ದ ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸುವವರೆಗೂ ಜಾಮೀನು ಅರ್ಜಿ ಸಲ್ಲಿಸುವಂತಿಲ್ಲ ಎಂದು ಆದೇಶಿಸಿತ್ತು. 
ಸಿವಾನ್‌ ಸೆಷನ್ಸ್‌ ನ್ಯಾಯಾಲಯಕ್ಕೂ ಪ್ರಕರಣದಲ್ಲಿ ಪರಾರಿಯಾಗಿರುವ ಇಬ್ಬರು ಆರೋಪಿಗಳ ಕುರಿತು ವರದಿ ನೀಡುವಂತೆ ಸಿವಾನ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಬಾಲಕನ ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಸಿನಿಮೀಯ ರೀತಿಯಲ್ಲಿ ಬಾಲಕನ ರಕ್ಷಿಸಿದ ಪೊಲೀಸರು!

ಮೊಹಮ್ಮದ್‌ ಕೇಫ್‌, ಮೊಹಮ್ಮದ್‌ ಜಾವೇದ್‌ ತಲೆಮರೆಸಿಕೊಂಡಿದ್ದರು. ಅದಾದ ನಂತರ ಇಬ್ಬರನ್ನೂ ಘೋಷಿತ ಅಪರಾಧಿಗಳು ಎಂದು ಪ್ರಕರಣದಲ್ಲಿ ಪರಿಗಣಿಸಲಾಗಿತ್ತು. ಬಿಹಾರ ಅಂದಿನ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಆರ್‌ಜೆಡಿ ಪಕ್ಷದ ವಿವಾದಾತ್ಮಕ ನಾಯಕ ಶಹಾಬುದ್ದೀನ್‌ ಜತೆಯಲ್ಲಿ ಇಬ್ಬರೂ ಅಪರಾಧಿಗಳು ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅವರನ್ನು ಘೋಷಿತ ಅಪರಾಧಿಗಳು ಎಂದು ಕೋರ್ಟ್‌ ಪರಿಗಣಿಸಿತ್ತು. 

ಇದನ್ನೂ ಓದಿ: Mandya: ಮಹಿಳೆಯರಿಬ್ಬರ ಬರ್ಬರ ಕೊಲೆ ಪ್ರಕರಣ: ಕೇಸ್ ಭೇದಿಸಲು 7 ಪ್ರತ್ಯೇಕ ತಂಡ ರಚನೆ

ಅಂದಿನ ಆರೋಗ್ಯ ಸಚಿವ, ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರನ್ನು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೋರ್ಟ್‌ ಸೂಚಿಸಿತ್ತು. ಪತ್ರಕರ್ತ ರಾಜ್‌ದಿಯೊ ಪತ್ನಿ ಪ್ರಕರಣದ ವಿಚಾರಣೆಯನ್ನು ಬಿಹಾರದ ಸಿವಾನ್‌ನಿಂದ ದೆಹಲಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದರು. ಬಿಹಾರ ಪೊಲೀಸರ ಮೇಲೆ ನಂಬಿಕೆ ಇಲ್ಲದ ಹಿನ್ನೆಲೆ ಅವರು ವರ್ಗಾವಣೆ ಬಯಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು