ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿ ತಾನು ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದ ಮತ್ತು ಆಕೆಯ ಪ್ರೊಫೈಲ್‌ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತಾನು ಆಸ್ಟ್ರೇಲಿಯಾದಲ್ಲಿರುವುದಾಗಿ ಹೇಳಿ, ಮಹಿಳೆಗೆ ಹತ್ತಿರವಾಗಿ, ತನ್ನ ಕುಟುಂಬ ಆರ್ಥಿಕವಾಗಿ ಬಹಳ ಚೆನ್ನಾಗಿದೆ ಎಂದು ನಂಬಿಸಿ, ಆಕೆಯಿಂದಲೇ 40 ಲಕ್ಷ ರೂ. ಪೀಕಿಸಿ ಗಾಯಬ್ ಆಗಿದ್ದಾನೆ. ಮನಸ್ಸು ಮುರಿದ ಜೊತೆಗೆ ಹಣವನ್ನೂ ಕಳೆದುಕೊಂಡ ಮಹಿಳೆ ಈ ಬಗ್ಗೆ ಈಗ ಪೋಲೀಸರಿಗೆ ದೂರು ದಾಖಲಿಸಿದ್ದಾರೆ.
ಪುಣೆಯ ಮುಂಧ್ವಾ ಮೂಲದ 33 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮೋಸ ಹೋದ ಮಹಿಳೆ. ಸೆಪ್ಟೆಂಬರ್ 2023 ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿ ತಾನು ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದ ಮತ್ತು ಆಕೆಯ ಪ್ರೊಫೈಲ್‌ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ. ಕಾಲಾನಂತರದಲ್ಲಿ, ಅವರು ಸಂಪರ್ಕ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಆ ವ್ಯಕ್ತಿ ಆರ್ಥಿಕವಾಗಿ ಉತ್ತಮವಾಗಿರುವುದಾಗಿ ತೋರಿಸಿಕೊಂಡು ಮಹಿಳೆಯ ನಂಬಿಕೆ ಗಳಿಸಿದ.
ನಂತರ ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಎಂದು ಹೇಳಿ ಮಹಿಳೆಯಿಂದ ಹಣಕಾಸಿನ ನೆರವು ಕೋರಿದ. ಹಣ ವರ್ಗಾವಣೆಗಾಗಿ ಎರಡು ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಿದ. ತಾನು ವಿವಾಹವಾಗುವ ವ್ಯಕ್ತಿ ಎಂದು ಪೂರ್ತಿ ನಂಬಿದ್ದ ಮಹಿಳೆ ಕಳೆದ ವರ್ಷ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಈ ಖಾತೆಗಳಿಗೆ 40.5 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.
ಜನವರಿಯಲ್ಲಿ ವ್ಯಕ್ತಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ಮಹಿಳೆ ಒತ್ತಾಯಿಸಿದಾಗ, ಅವನು ಅವಳೊಂದಿಗೆ ಎಲ್ಲಾ ಸಂವಹನವನ್ನು ನಿಲ್ಲಿಸಿದನು.
ಎರಡೂ ಬ್ಯಾಂಕ್ ಖಾತೆಗಳು ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸೇರಿದ್ದು, ಮಹಿಳೆ ತಮ್ಮ ರುಜುವಾತುಗಳನ್ನು ಪರಿಶೀಲಿಸದೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಮುಂಡ್ವಾ ಪೊಲೀಸ್‌ನ ಹಿರಿಯ ಇನ್ಸ್‌ಪೆಕ್ಟರ್ ಮಹೇಶ್ ಬಾಲ್ಕೋಟ್ಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.