ಪಕ್ಕದ ಮನೆಯ ಕೋಳಿ ವಿರುದ್ಧ ಮಹಿಳೆ 2ನೇ ಬಾರಿಗೆ ಕೋಳಿ ವಿರುದ್ಧ ದೂರು ನೀಡಿದ್ದಾರೆ. ಈ ಕೋಳಿಯಿಂದ ನನ್ನ ನಿದ್ದೆ ಹಾಳಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಸತತ 2ನೇ ದೂರಿನ ಬೆನ್ನಲ್ಲೇ ಇದೀಗ ಪಾಲಿಕೆ ಅಧಿಕಾರಿಗಳ ನಿದ್ದೆಯೂ ಇಲ್ಲದಾಗಿದೆ.
ಪಾಲಕ್ಕಾಡ್(ಆ.11) ಪಕ್ಕದ ಮನೆಯವರ ಜೊತೆ ಕ್ಷುಲಕ್ಕ ಕಾರಣಕ್ಕೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ಮಹಿಳೆ ಪಕ್ಕದ ಮನೆಯ ಕೋಳಿ ವಿರುದ್ಧ ದೂರು ನೀಡಿದ್ದಾರೆ. ಪಕ್ಕದ ಮನೆಯ ಕೋಳಿ ಬೆಳಗಾಗುವುದಕ್ಕಿಂತ ಮುಂಚೆ ಕೂಗಲು ಆರಂಭಿಸುತ್ತಿದೆ. ನನ್ನ ನಿದ್ದೆಯನ್ನು ಕೋಳಿ ಹಾಳುಮಾಡುತ್ತಿದೆ ಎಂದು ಪಾಲಿಕೆ ಅಧಿಕಾರಿಗಳಿಗೆ ಮಹಿಳೆ ದೂರು ನೀಡಿದ್ದಾಳೆ. ಮೊದಲ ದೂರಿನ ಬಳಿಕ ಮಾತುಕತೆ ನಡೆಸಿದರೂ ಇದೀಗ ಮಹಿಳೆ 2ನೇ ಬಾರಿಗೆ ದೂರು ನೀಡಿ ಅಧಿಕಾರಿಗಳಿಗೆ ತಲೆನೋವು ಹಿಡಿಸಿದ ಘಟನೆ ಕೇರಳದ ಪಾಲಕ್ಕಾಡಿನಲ್ಲಿ ನಡೆದಿದೆ.
10ನೇ ವಾರ್ಡ್‌ನಲ್ಲಿ ವಾಸವಿರುವ ಮಹಿಳೆ ಪಕ್ಕದ ಮನೆಯ ಕೋಳಿ ವಿರುದ್ದ ಪಾಲಕ್ಕಾಡ್ ಪಾಲಿಕೆಯಲ್ಲಿ ದೂರು ನೀಡಿದ್ದಾರೆ. ಪಕ್ಕದ ಮನೆಯವರು ಸಾಕಿರುವ ಹುಂಜ 4 ಗಂಟೆಗೆ ಕೂಗಲು ಶುರುಮಾಡುತ್ತಿದೆ. ನಾನು ತಡ ರಾತ್ರಿ ಕೆಲಸ ಮುಗಿಸಿ ಮಲಗಿದ ಕೆಲ ಹೊತ್ತಲ್ಲೇ ಕೋಳಿ ಕೂಗಲು ಆರಂಭಿಸುತ್ತಿದೆ. ಇದರಿಂದ ನನ್ನ ನಿದ್ದೆ ಹಾಳಾಗುತ್ತಿದೆ. ಆರೋಗ್ಯ ಹದಗೆಡುತ್ತಿದೆ. ಇಷ್ಟೇ ಅಲ್ಲ ಪಕ್ಕದ ಮನೆಯವರು ಕೋಳಿ ಗೂಡನ್ನು ಶುಚಿಯಾಗಿಟ್ಟುಕೊಂಡಿಲ್ಲ. ಇದರಿಂದ ಗಬ್ಬು ನಾತ ಬೀರುತ್ತಿದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು. ನನ್ನ ನೆಮ್ಮದಿಗೆ ಭಂಗ ತರುತ್ತಿರುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಮಹಿಳೆ ಲಿಖಿತ ದೂರನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿದ್ದಾರೆ.
ಕೋಳಿ ವಿಐಪಿ ಆದ ರೋಚಕ ಕತೆ, ದಿನದ 24 ಗಂಟೆ ಪಂಜಾಬ್ ಪೊಲೀಸ್ ಭದ್ರತೆ!
ದೂರು ಸ್ವೀಕರಿಸಿದ ವಾರ್ಡ್ ಕೌನ್ಸಿಲರ್ ಕ್ರಮದ ಭರವಸೆ ನೀಡಿದ್ದಾರೆ. ಬಳಿಕ ಮಹಿಳೆಯ ಪಕ್ಕದ ಮನೆಗೆ ತೆರಳಿ ದೂರಿನ ಕುರಿತು ವಿವರಿಸಿದ್ದಾರೆ. ಈ ವೇಳೆ ಗೂಡು ಶುಚಿಯಾಗಿಡಲು ಒಪ್ಪಿಕೊಂಡಿದ್ದಾರೆ. ಇದರಂತೆ ಕೋಳಿ ಗೂಡನ್ನು ಶುಚಿ ಮಾಡಿದ್ದಾರೆ. ಇದೇ ವೇಳೆ ಕೋಳಿ ಕೂಗುವುದು ಸಹಜ. ಇದನ್ನು ನಿಲ್ಲಿಸುವುದು ಹೇಗೆ ಎಂದು ಮರು ಪ್ರಶ್ನಿಸಿದ್ದಾರೆ.
ಕೌನ್ಸಿಲರ್ ಇಬ್ಬರಲ್ಲೂ ಮಾತುಕತೆ ನಡೆಸಿ ಸಮಸ್ಸೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ದೂರು ನೀಡಿದ ಮಹಿಳೆ ಕೋಳಿ ಕೂಗಿನಿಂದ ರೋಸಿ ಹೋಗಿದ್ದಳು. ಹೀಗಾಗಿ ಕೆಲ ದಿನಗಳ ಬಳಿಕ ಮತ್ತೊಂದು ದೂರು ನೀಡಿದ್ದಾರೆ. ನಿದ್ದೆ ಪ್ರತಿಯೊಬ್ಬರ ಹಕ್ಕು. ಇದಕ್ಕೆ ಭಂಗ ತರಲಾಗುತ್ತಿದೆ. ದೂರಿನ ಬಳಿಕವೂ ಈ ಪ್ರಯತ್ನ ಮುಂದುವರಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಾರಿ ದೂರನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಹಾರ ಕ್ರಮದ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ.
Viral Video: ಒಂದು ಕೋಳಿ, ನಾಲ್ಕು ಹುಂಜ, ತಂದೆ ಯಾರು ಎನ್ನುತ್ತಿದ್ದಾರೆ ನೆಟ್ಟಿಗರು..!