'ಶಾಲೆಗಳು ಮತ್ತೆ ಆನ್‌ಲೈನ್ ಕ್ಲಾಸ್? ಪ್ರಧಾನಿ ಮೋದಿಯವರ ಆ ಒಂದು ಹೇಳಿಕೆಯಿಂದ ಜನರದಲ್ಲಿ ಹೊಸ ಚರ್ಚೆ, ಮುಂದೇನು?

Kannadaprabha News   | Kannada Prabha
Published : May 12, 2026, 05:32 AM IST
Will Schools Switch Back to Online Classes PM Modi Single Statement Sparks Fresh Debate What Next

ಸಾರಾಂಶ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಬಳಕೆ ಕಡಿಮೆ ಮಾಡುವಂತೆ, ವರ್ಕ್ ಫ್ರಂ ಹೋಂ ಪಾಲಿಸುವಂತೆ ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೆಟ್ರೋಲ್ ಅಭಾವ ಸೃಷ್ಟಿಯಾಗಿದ್ದು, ಕೆಲವು ಬಂಕ್‌ಗಳು ಮುಚ್ಚಿ ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರು (ಮೇ.12): ಇಂಧನ ಬಳಕೆ ಕಡಿಮೆ ಮಾಡುವ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಅಭಾವ ಮರುಕಳಿಸಿದೆ. ನಗರದ ಕೆಲ ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ವಡೋದರಾ: ಭಾರತವು ಯುದ್ಧ, ಕೋವಿಡ್‌ ಅಥವಾ ಯಾವುದೇ ದೊಡ್ಡ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ನಾಗರಿಕರು ಸರ್ಕಾರದ ಮನವಿಯ ಮೇರೆಗೆ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದರು. ನಾವು ಈಗ ಅದೇ ರೀತಿ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಸರ್ಕಾರಿ, ಖಾಸಗಿ ಕಚೇರಿಗಳು ವರ್ಕ್‌ ಫ್ರಂ ಹೋಮ್ ನೀತಿ ಜಾರಿಗೊಳಿಸಬೇಕು, ಶಾಲೆಗಳನ್ನು ಆನ್‌ಲೈನ್‌ ಮಾದರಿ ನಡೆಸಬೇಕು ಎಂದೂ ಕರೆ ನೀಡಿದ್ದಾರೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿ ಎದುರಿಸಲು ನೆರವಾಗುವಂತೆ ಭಾನುವಾರ ಮನವಿ ಮಾಡಿದ್ದ ಮೋದಿ, ಸೋಮವಾರ ತಮ್ಮ ಮನವಿಯನ್ನು ಪುನರುಚ್ಚರಿಸಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ಮಾತನಾಡಿದ ಮೋದಿ, ‘ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ವಿದೇಶಿ ವಿನಿಮಯವನ್ನು ಖರ್ಚು ಮಾಡಿಸುವ ವೈಯಕ್ತಿಕ ಕಾರ್ಯಗಳನ್ನು ಸದ್ಯಕ್ಕೆ ನಿಲ್ಲಿಸಬೇಕು. ಭಾರತವನ್ನು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಪ್ರಮುಖ ಪಾಲುದಾರನನ್ನಾಗಿ ಮಾಡಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ’ ಎಂದರು.

ಅಲ್ಲದೆ, ‘ನಾಗರಿಕರು ಸಾಧ್ಯವಾದಷ್ಟು ಪೆಟ್ರೋಲ್‌, ಡೀಸೆಲ್‌ ಬಳಕೆ ಕಡಿಮೆ ಮಾಡಬೇಕು, ಮೆಟ್ರೋ, ಎಲೆಕ್ಟ್ರಿಕ್‌ ಬಸ್‌, ಸಾರಿಗೆ ವಾಹನಗಳನ್ನು ಹೆಚ್ಚಾಗಿ ಬಳಸಬೇಕು. ಕಾರ್‌ಪೂಲಿಂಗ್‌ಗೆ ಆದ್ಯತೆ ನೀಡಬೇಕು. ಕಾರಿದ್ದವರು ತಮ್ಮೊಂದಿಗೆ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆದೊಯ್ಯಬೇಕು, ಕಚೇರಿಯಲ್ಲಿ ಆನ್‌ಲೈನ್‌, ವರ್ಚುವಲ್‌ ಸಭೆ ನಡೆಸಬೇಕು, ಸಾಧ್ಯವಿದ್ದಲ್ಲಿ ಶಾಲೆಗಳು ಆನ್‌ಲೈನ್‌ ತರಗತಿ ನಡೆಸಬೇಕು, ಪರಿಸ್ಥಿತಿ ಸುಧಾರಣೆ ಆಗುವವರೆಗೂ ಚಿನ್ನ ಖರೀದಿಯನ್ನು ಮುಂದೂಡಬೇಕು’ ಎಂದು ಮನವಿ ಮಾಡಿದ್ದಾರೆ.

ಜತೆಗೆ, ‘ಭಾರತದ ಆಮದಿನಲ್ಲಿ ಕಚ್ಚಾ ತೈಲದ ಪಾಲೇ ದೊಡ್ಡದಿದೆ. ಆದರೀಗ, ಬಹುತೇಕ ದೇಶಗಳಿಗೆ ತೈಲ ರಫ್ತು ಮಾಡುತ್ತಿದ್ದ ರಾಷ್ಟ್ರಗಳೇ ಯುದ್ಧದಲ್ಲಿ ತೊಡಗಿ ಅಸ್ಥಿರವಾಗಿದೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳುವ ತನಕ, ರಾಷ್ಟ್ರೀಯ ಹಿತಾಸಕ್ತಿಗಾಗಿ ಎಲ್ಲರೂ ಅರ್ಥಪೂರ್ಣ ನಿರ್ಣಯಗಳನ್ನು ಕೈಗೊಳ್ಳಬೇಕು’ ಎಂದರು.

‘ಕಳೆದ ಕೆಲವು ವರ್ಷಗಳಿಂದ ಜಗತ್ತು ಅಸ್ಥಿರವಾಗಿದೆ. ಮೊದಲು ಕೊರೋನಾ ಬಿಕ್ಕಟ್ಟು, ನಂತರ ಜಾಗತಿಕ ಆರ್ಥಿಕ ಸವಾಲುಗಳು, ಈಗ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ. ಇವುಗಳು ವಿಶ್ವದ ಮೇಲೆ ಬೀರುತ್ತಿರುವ ಪರಿಣಾಮಗಳಿಂದ ಭಾರತವೂ ಹೊರತಾಗಿಲ್ಲ. ಕೊರೋನಾ ಈ ಶತಮಾನದ ಅತಿದೊಡ್ಡ ಬಿಕ್ಕಟ್ಟಾಗಿದ್ದರೆ, ಸದ್ಯದ ಯುದ್ಧದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯು ಈ ದಶಕದ ಪ್ರಮುಖ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ದೇಶದ ಜನರ ಮೇಲೆ ಇದರ ಪರಿಣಾಮ ಅಷ್ಟಾಗಿ ಆಗದಂತೆ ನೋಡಿಕೊಳ್ಳಲು ಸರ್ಕಾರವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಮೋದಿ ಹೇಳಿದರು.

ಅಂದಿನಂತೆ ಇಂದೂ ಸಹಕರಿಸಿ:

ಮೋದಿ ಅವರು ಈ ಹಿಂದಿನ ಯುದ್ಧ ಸ್ಥಿತಿಗಳನ್ನು ನೆನಪಿಸುತ್ತಾ, ‘ಭಾರತವು ಯುದ್ಧ ಅಥವಾ ಯಾವುದೇ ದೊಡ್ಡ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ನಾಗರಿಕರು ಸರ್ಕಾರದ ಮನವಿಯ ಮೇರೆಗೆ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದರು. ನಾವು ಈಗ ಅದೇ ರೀತಿ ಮಾಡಬೇಕಾಗಿದೆ. ಭಾರತವು ಆಮದಿಗಾಗಿ ಕೋಟ್ಯಂತರ ರು. ಸುರಿಯುತ್ತಿದೆ. ಸದ್ಯ ವಸ್ತುಗಳ ಬೆಲೆ ಏರಿಕೆಯಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿದೆ. ಹನಿ ಹನಿ ಕೂಡಿ ಹಳ್ಳ ಎಂಬಂತೆ, ನಿಮ್ಮ ಸಣ್ಣ ಕ್ರಮವೂ ಪರಿಣಾಮ ಬೀರುತ್ತದೆ. ಆದ್ದರಿಂದ ಆಮದು ಕಮ್ಮಿ ಮಾಡಿ’ ಎಂದು ಜನರಿಗೆ ಕರೆ ನೀಡಿದ್ದಾರೆ.

ವರ್ಕ್‌ ಫ್ರಂ ಹೋಂ ಮಾಡಿ

ಸಾಧ್ಯವಾದಷ್ಟು ಪೆಟ್ರೋಲ್‌, ಡೀಸೆಲ್‌ ಬಳಕೆ ಕಡಿಮೆ ಮಾಡಿ. ಸಮೂಹ ಸಾರಿಗೆ, ಕಾರ್‌ಪೂಲಿಂಗ್‌ ಬಳಸಿ. ವರ್ಕ್‌ ಫ್ರಂ ಹೋಂ ಸೌಲಭ್ಯ ಜಾರಿಗೊಳಿಸಿ. ಸಾಧ್ಯವಿದ್ದಲ್ಲಿ ಶಾಲೆಗಳು ಆನ್‌ಲೈನ್‌ ತರಗತಿ ನಡೆಸಿ. ಪರಿಸ್ಥಿತಿ ಸುಧಾರಣೆ ಆಗುವವರೆಗೂ ಚಿನ್ನ ಖರೀದಿಯನ್ನು ಮುಂದೂಡಿಕೆ ಮಾಡಿ.

- ನರೇಂದ್ರ ಮೋದಿ, ಪ್ರಧಾನಿ 

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ತೈಲ ಬೆಲೆಗಳು ಏರುತ್ತಿರುವ ಕಾರಣ ಮಿತವ್ಯಯ ಮಂತ್ರ ಪಾಲಿಸಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ನಲ್ಲಿ ಭಾನುವಾರ ಆಡಿದ ಮಾತುಗಳು ಭಾರಿ ಚರ್ಚೆಗೆ ಕಾರಣವಾಗಿವೆ. ಇದು ಮೋದಿ ಸರ್ಕಾರದ ವೈಫಲ್ಯ ಎಂದು ಪ್ರತಿಪಕ್ಷಗಳು ಮುಗಿಬಿದ್ದು ದಾಳಿ ಮಾಡಿದ್ದರೆ, ಪ್ರಧಾನಿ ಮತ್ತೊಮ್ಮೆ ಮಿತವ್ಯಯಕ್ಕೆ ಕರೆ ಕೊಟ್ಟಿದ್ದಾರೆ.

60 ದಿನಕ್ಕಾಗುವಷ್ಟು ತೈಲ ಇದೆ: ಸರ್ಕಾರ

ಇಂಧನ ಬಳಕೆ ತಗ್ಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಕೂಡ ದೇಶದ ನಾಗರಿಕರಿಗೆ ಅಂಥದ್ದೇ ಮನವಿ ಮಾಡಿದೆ. ಆದರೆ ಇದೇ ವೇಳೆ, ‘ದೇಶದಲ್ಲಿ 60 ದಿನಕ್ಕಾಗುವಷ್ಟು ತೈಲ, 45 ದಿನಕ್ಕಾಗುವಷ್ಟು ಎಲ್‌ಪಿಜಿ ಇದೆ. ಆತಂಕ ಬೇಡ’ ಎಂದಿದೆ.

ಷೇರುಪೇಟೆ ಕಂಪನ: ಸೆನ್ಸೆಕ್ಸ್‌ 1313 ಪಲ್ಟಿ

ಮುಂಬೈ: ಕಚ್ಚಾತೈಲ ಬೆಲೆ ಏರಿಕೆ, ದೇಶೀಯವಾಗಿ ಚಿನ್ನ ಖರೀದಿ ಸ್ಥಗಿತ ಮಾಡಿ, ತೈಲ ಬಳಕೆ ಇಳಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಪರಿಣಾಮ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 1313 ಅಂಕಗಳ ಭಾರೀ ಕುಸಿತ ಕಂಡು 76,015ಕ್ಕೆ ತಲುಪಿದೆ.

ಆಭರಣ ಬಗ್ಗೆ ಹೇಳಿಲ್ಲ

ಪ್ರಧಾನಿ ಮೋದಿ ಅವರ ಹೇಳಿಕೆ ಸರಿಯಾಗಿದೆ. ಚಿನ್ನ ಸಂಗ್ರಹ ನಿಲ್ಲಿಸಿ ಎಂಬರ್ಥದಲ್ಲಿ ಹೇಳಿದ್ದಾರೆ. ಆಭರಣಗಳ ಬಗ್ಗೆ ಅವರು ಹೇಳಿಲ್ಲ. ಬಂಡವಾಳ ಹೂಡಿಕೆ ಚಿನ್ನದ ಬಗ್ಗೆ ಹೇಳಿದ್ದಾರೆ.

- ಟಿ.ಎ. ಶರವಣ, ರಾಜ್ಯ ಚಿನ್ನದ ವ್ಯಾಪಾರಿಗಳ ಸಂಘದ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನನ್ನ ಅನುಭವದಿಂದ ಹೇಳ್ತಿದ್ದೀನಿ..' ಮೋದಿ ಬಗ್ಗೆ ದೇವೇಗೌಡರ ಮಾತು ವೈರಲ್!
ಒಂದೇ ವಾರದಲ್ಲಿ ಎರಡನೇ ಬಾರಿ ರಾಜೇಗೌಡ ಮತ್ತೆ ಶಾಸಕ, ಶೃಂಗೇರಿ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್, ಜೀವರಾಜ್‌ಗೆ ಸುಪ್ರೀಂ ಶಾಕ್!