ತೃಣಮೂಲ ಕಾಂಗ್ರೆಸ್ ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿರುವುದು ಸಾಬೀತಾದರೆ ತಾನು ರಾಜೀನಾಮೆ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಸವಾಲು ಹಾಕಿದ್ದಾರೆ.
ಕೋಲ್ಕತ್ತಾ (ಏಪ್ರಿಲ್ 19, 2023): ತೃಣಮೂಲ ಕಾಂಗ್ರೆಸ್ ಇತ್ತೀಚೆಗಷ್ಟೇ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡು ಶಾಕ್ ಅನುಭವಿಸಿತ್ತು. ಈ ಹಿನ್ನೆಲೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮತ್ತು ತೃಣಮೂಲದ ರಾಷ್ಟ್ರೀಯ ಸ್ಥಾನಮಾನವನ್ನು ಮರುಸ್ಥಾಪಿಸಲು ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಗಳವಾರ ಹೇಳಿಕೊಂಡಿದ್ದರು.
ಬಿಜೆಪಿಯ ನಾಯಕ ಸುವೇಂದು ಅಧಿಕಾರಿ ಈ ಆರೋಪ ಮಾಡಿದ ಬಳಿಕ ಇದಕ್ಕೆ ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬಾನರ್ಜಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪಕ್ಷವಾದ ತೃಣಮೂಲ ಕಾಂಗ್ರೆಸ್ ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿರುವುದು ಸಾಬೀತಾದರೆ ತಾನು ರಾಜೀನಾಮೆ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಸವಾಲು ಹಾಕಿದ್ದಾರೆ.
ಇದನ್ನು ಓದಿ: ನಾನು ಬಿಜೆಪಿ ಶಾಸಕ; ಅಮಿತ್ ಶಾ ಭೇಟಿಯಾಗ್ಬೇಕು ಎಂದ ಟಿಎಂಸಿ ನಾಯಕ ಮುಕುಲ್ ರಾಯ್
"ನನಗೆ ಆಶ್ಚರ್ಯ ಮತ್ತು ಆಘಾತವಾಗಿದೆ... ತೃಣಮೂಲ ಪಕ್ಷದ ರಾಷ್ಟ್ರೀಯ ಪಕ್ಷದ ಸ್ಥಾನಮಾನದ ಬಗ್ಗೆ ನಾನು ಅಮಿತ್ ಶಾ ಅವರಿಗೆ ಕರೆ ಮಾಡಿರುವುದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ" ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗವು ಕೆಲವು ಪಕ್ಷಗಳ ರಾಷ್ಟ್ರೀಯ ಸ್ಥಾನಮಾನದ ಅರ್ಹತೆಯನ್ನು ಪರಿಶೀಲಿಸಿತ್ತು. ಬಳಿಕ ಎಎಪಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿ ಟಿಎಂಸಿ, ಎನ್‌ಸಿಪಿ ಸೇರಿ 3 ಪಕ್ಷಗಳ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ತೆಗೆದುಹಾಕಿತು. ಈ ವಿಚಾರದ ಬಗ್ಗೆ ಮಧ್ಯಪ್ರವೇಶಿಸಲು ಮತ್ತು ತೃಣಮೂಲ ಕಾಂಗ್ರೆಸ್‌ಗೆ ರಾಷ್ಟ್ರೀಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಮಮತಾ ಬ್ಯಾನರ್ಜಿ ಅವರು ಅಮಿತ್ ಶಾ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಂಗಳವಾರ ಹೇಳಿಕೊಂಡಿದ್ದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಬಂಗಾಳದಲ್ಲಿ ಬಿಜೆಪಿಗೆ 35 ಸ್ಥಾನ ಕೊಡಿ; ನಂತರ ಟಿಎಂಸಿ ಸರ್ಕಾರ ಉಳಿಯಲ್ಲ: ಅಮಿತ್ ಶಾ
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು. ಮಮತಾ ಬ್ಯಾನರ್ಜಿಯ ಮಾಜಿ ಆಪ್ತ ಎನಿಸಿಕೊಂಡಿದ್ದ ಸುವೇಂದು ಅಧಿಕಾರಿ 2021 ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಪಕ್ಷಾಂತರವಾಗಿದ್ದರು. ಇನ್ನು, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ತಂಡವನ್ನು ಕಟ್ಟಲು ವಿರೋಧ ಪಕ್ಷಗಳ ತೀವ್ರ ಪ್ರಯತ್ನಗಳ ಬಗ್ಗೆಯೂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
"ಕೆಲವೊಮ್ಮೆ ಮೌನವು ಬಂಗಾರವಾಗಿರುತ್ತದೆ. ವಿರೋಧ ಪಕ್ಷಗಳು ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ ಎಂದು ಭಾವಿಸಬೇಡಿ. ನಾವೆಲ್ಲರೂ ಅಸ್ತಿತ್ವದಲ್ಲಿದ್ದೇವೆ ಮತ್ತು ಎಲ್ಲರೂ ಪರಸ್ಪರ ಸಂಬಂಧವನ್ನು ನಿರ್ವಹಿಸುತ್ತಿದ್ದೇವೆ. ಅದು (ವಿಪಕ್ಷಗಳ ಒಕ್ಕೂಟ) ಒಮ್ಮೆ ಆರಂಭವಾದರೆ ಸುಂಟರಗಾಳಿಯಂತೆ ಸಂಭವಿಸುತ್ತದೆ" ಎಂದೂ ಅವರು ಹೇಳಿದರು.
ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!
ಇನ್ನೊಂದೆಡೆ, ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದರ ಕುರಿತಾದ ಸುಪ್ರೀಂ ಕೋರ್ಟ್ ಕೇಸ್‌ನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನುಣುಚಿಕೊಂಡಿದ್ದಾರೆ. ‘’ನಾನು ಏನನ್ನೂ ಹೇಳುವುದಿಲ್ಲ. ಏಕೆಂದರೆ ವಿಷಯವು ನ್ಯಾಯಾಂದ ಚೌಕಟ್ಟಿನಲ್ಲಿದೆ. ನಾನು ಇತರರನ್ನು ಪ್ರೀತಿಸುವ ಜನರನ್ನು ಪ್ರೀತಿಸುತ್ತೇನೆ. ಈ ವಿಷಯ ಸೂಕ್ಷ್ಮ ಮತ್ತು ನಾನು ಜನರ ನಾಡಿಮಿಡಿತವನ್ನು ನೋಡಬೇಕು. ನಾನು ನ್ಯಾಯಾಲಯದ ಆದೇಶವನ್ನು ನೋಡಬೇಕು ಮತ್ತು ನಂತರ ನಾವು ಅಭಿಪ್ರಾಯವನ್ನು ರಚಿಸಬಹುದು’’ ಎಂದಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ