
ಚಂಡೀಗಢ(ಆ.28): ಬಂಡಾಯದ ಬಾವುಟ ಬೀಸುತ್ತಲೇ ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ, ನವಜೋತ ಸಿಂಗ್ ಸಿಧು, ಇದೀಗ ಮತ್ತೆ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯದ ವಿಷಯದಲ್ಲಿ ನನಗೆ ನಿರ್ಧಾರ ಕೈಗೊಳ್ಳುವ ಪೂರ್ಣ ಸ್ವಾತಂತ್ರ್ಯ ಕೊಡಿ ಎಂದು ಕೇಂದ್ರದ ನಾಯಕರಿಗೆ ನೇರಾನೇರ ಸಂದೇಶ ರವಾನಿಸಿದ್ದಾರೆ
"
‘ಕಾಶ್ಮೀರ ಪ್ರತ್ಯೇಕ ದೇಶ’ ಎಂದು ವಿವಾದ ಎಬ್ಬಿಸಿದ್ದ ಸಿಧು ಸಲಹೆಗಾರ ಮಾಲ್ವಿಂದರ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಈ ಹಂತದಲ್ಲೇ ಸಿಧು ಅವರಿಂದ ಇಂಥದ್ದೊಂದು ಎಚ್ಚರಿಕೆ ಹೊರಬಿದ್ದಿರುವುದು, ರಾಜ್ಯದಲ್ಲಿ ಸಿಎಂ ಅಮರೀಂದರ್ ಮತ್ತು ಸಿಧು ನಡುವಿನ ಬಣ ರಾಜಕೀಯ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಸ್ಪಷ್ಟವಾಗಿ ಹೊರಹೊಮ್ಮಿದೆ. ಇದೇ ವೇಳೆ, ರಾಜ್ಯ ರಾಜಕೀಯದಿಂದ ಬೇಸತ್ತಿದ್ದಾರೆ ಎನ್ನಲಾದ ರಾಜ್ಯ ಕಾಂಗ್ರೆಸ್ ಪ್ರಭಾರಿ ಹರೀಶ್ ರಾವತ್ ಅವರು ಈ, ಉಸ್ತುವಾರಿ ಹುದ್ದೆಯಿಂದ ಮುಕ್ತಿ ಕೊಡಿ ಎಂದು ವರಿಷ್ಠರಿಗೆ ಕೋರಿದ್ದಾರೆ.
ಸಿಧು ಎಚ್ಚರಿಕೆ:
ಶುಕ್ರವಾರ ಚಂಡೀಗಢದಲ್ಲಿ ಪ್ರತಿಕ್ರಿಯೆ ನೀಡಿದ ಸಿಧು, ‘ಪಕ್ಷದ ಹೈಕಮಾಂಡ್, ನನಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡಬೇಕು. ಇಲ್ಲದೇ ಹೋದಲ್ಲಿ ನಾನು ತಕ್ಕ ತಿರುಗೇಟು ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ರಾವತ್, ‘ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ನಾನು ಪರಿಶೀಲಿಸುವೆ. ಸಿಧು, ಅವರು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಗೌರವಾನ್ವಿತ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಸಿಧು ಅಲ್ಲದೆ ಇನ್ಯಾರು ನಿರ್ಧಾರ ಕೈಗೊಳ್ಳಲು ಸಾಧ್ಯ? ಪಕ್ಷದ ಸಂವಿಧಾನದ ಚೌಕಟ್ಟು ಮತ್ತು ಅವರ ಹುದ್ದೆಯಲ್ಲಿ ಎಲ್ಲಾ ನಿರ್ಧಾರ ಕೈಗೊಳ್ಳಲು ಅವರು ಮುಕ್ತ’ ಎಂದು ಹೇಳಿದ್ದಾರೆ.
ತಲೆದಂಡ:
ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಮತ್ತು ಪಾಕ್ ಎರಡೂ ರಾಜ್ಯಗಳು ಆಕ್ರಮಿಸಿವೆ. ಕಾಶ್ಮೀರದ ಭಾರತದ ಅಂಗ ಎಂದಾದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಅವಶ್ಯಕತೆ ಏನಿತ್ತು ಎಂದೆಲ್ಲಾ ಪ್ರಶ್ನಿಸಿ ತೀವ್ರ ವಿವಾದ ಸೃಷ್ಟಿಸಿದ್ದ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್‌ಸಿಂಗ್ ಸಿಧು ಅವರ ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ ಇದನ್ನು ರಾಜೀನಾಮೆ ಎಂದು ಒಪ್ಪಲು ಸಿದ್ಧರಿಲ್ಲದ ಅವರು, ಸಿಧುಗೆ ಸಲಹೆ ನೀಡಲು ಒಪ್ಪಿದ್ದ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ. ಹೀಗಾಗಿ ಇದು ರಾಜೀನಾಮೆ ಅಲ್ಲ ಎಂದು ಎಂದಿದ್ದಾರೆ. ಜೊತೆಗೆ, ಕೆಲ ರಾಜಕೀಯ ನಾಯಕ ಟೀಕೆಯರ ಹಿನ್ನೆಲೆಯಲ್ಲಿ ನನ್ನ ವಿರುದ್ಧ ನಡೆದ ಅಪಪ್ರಚಾರದ ಭಾಗವಾಗಿ ನನ್ನ ಮೇಲೇನಾದರೂ ದೈಹಿಕ ಹಲ್ಲೆ ನಡೆದರೆ ಅದಕ್ಕೆ ಆ ವ್ಯಕ್ತಿಗಳೇ ಕಾರಣ ಎಂದು ಪರೋಕ್ಷವಾಗಿ ಸಿಎಂ ಅಮರೀಂದರ್ ಮತ್ತು ಅವರ ಆಪ್ತರ ವಿರುದ್ಧ ಹರಿಹಾಯ್ದಿದ್ದಾರೆ.
ಮಾಲಿ ಹೇಳಿಕೆಯನ್ನು ಸಿಎಂ ಅಮರೀಂದರ್ ಮತ್ತು ಪಕ್ಷದ ರಾಜ್ಯದ ಉಸ್ತುವಾರಿ ಹರೀಶ್ ರಾವತ್ ಖಂಡಿಸಿದ್ದರು. ಅಲ್ಲದೆ ಅವರನ್ನು ಹುದ್ದೆಯಿಂದ ಕಿತ್ತೊಗೆಯದೇ ಹೋದರೆ ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಬಿಜೆಪಿ ಟೀಕೆ:
ಇದೇ ವೇಳೆ ಮಾಲಿ ಹೇಳಿಕೆಯನ್ನು ರಾಹುಲ್ ಗಾಂಧಿ ಅಥವಾ ಸಿಧು ತಿರಸ್ಕರಿಸಿಲ್ಲ. ಅವರಿಂದ ಯಾವುದೇ ಕ್ಷಮೆಯನ್ನೂ ಬಯಸಿಲ್ಲ. ಕೇವಲ ಒತ್ತಡಕ್ಕೆ ಒಳಗಾಗಿ ಪಕ್ಷ ಅವರಿಂದ ರಾಜೀನಾಮೆ ಪಡೆದುಕಂಡಿದೆ ಎಂದು ಬಿಜೆಪಿ ಟೀಕಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ