
ನವದೆಹಲಿ (ಜೂ.13): ಮುಂಬರುವ 2029ರ ಲೋಕಸಭೆ ಚುನಾವಣೆಗೂ ಮುನ್ನ ಕ್ಷೇತ್ರ ಮರುವಿಂಗಡಣೆಗೆ ಯೋಜನೆ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅದರ ಭಾಗವಾಗಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
2023ರ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಅನುಮೋದನೆ ಪಡೆದ ನಾರಿ ಶಕ್ತಿ ವಂದನಾ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಮಸೂ ದೆಯ ಪ್ರಕಾರ, ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯ ರಿಗೆ1/3ರಷ್ಟು ಮೀಸಲಾತಿ ನೀಡುವುದು ಕಡ್ಡಾಯ. ಈ ವರ್ಷಾಂತ್ಯದಲ್ಲಿ ಶುರುವಾಗಲಿರುವ ಜನಗಣತಿಯ ಬಳಿಕ, ಅದರನುಸಾರ ಕ್ಷೇತ್ರ ಮರುವಿಂಗಡಣೆ ಮಾಡಲಾಗುವುದು. ಅದರ ಭಾಗವಾಗಿ, ಈ ಮಸೂದೆಯ ಅಡಿಯಲ್ಲೇ ಸ್ತ್ರೀಯರಿಗೆ ಶೇ.33ರಷ್ಟು ಮೀಸಲಾತಿ ನೀಡಲಾಗುವುದು. 2023ರ ಈ ಮಸೂದೆಯನ್ನು 1996ರಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಪರಿಚಯಿಸ ಲಾಗಿತ್ತಾದರೂ, ಅದಾದ 27 ವರ್ಷಗಳ ಬಳಿಕ ಜಾರಿಯಾಗಿತ್ತು.
‘ಒಂದು ದೇಶ, ಒಂದು ಚುನಾವಣೆ’ 2034ರಲ್ಲಿ ಜಾರಿ ಆಗುವ ಸಾಧ್ಯತೆ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಒಮ್ಮೆಗೆ ಚುನಾವಣೆ ನಡೆಸುವ ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 2034ರಲ್ಲಿ ಮೊದಲ ಸಲ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ 2029ರ ಬಳಿಕ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರುವ ರಾಜ್ಯ ಸರ್ಕಾರಗಳು ಪೂರ್ಣಾವಧಿ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ. ಒಂದು ದೇಶ ಒಂದು ಚುನಾವಣೆಯ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥರಾದ ಪಿ.ಪಿ.ಚೌಧರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
2027ರಲ್ಲಿ ವಿಧಾನಸಭೆ ಚುನಾವಣೆ ನಡೆದರೆ 2032ರಲ್ಲಿ ಅದರ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಆಗ ಮತ್ತೆ ಆಯ್ಕೆಯಾಗುವ ಸರ್ಕಾರದ ಅವಧಿ ಕೇವಲ 2 ವರ್ಷವಷ್ಟೇ ಆಗಿರಲಿದೆ. 2034ರ ಮಹಾ ಚುನಾವಣೆಗೆ ಹೊಂದಾಣಿಕೆಯಾಗುವಂತೆ ಈ ಬದಲಾವಣೆ ಮಾಡಲಾಗುತ್ತದೆ. ಈ ತಿದ್ದುಪಡಿ ವಿಧೇಯಕದ ಪ್ರಕಾರ, 2029ರಲ್ಲಿ ಆಯ್ಕೆಯಾಗುವ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಏಕಕಾಲದಲ್ಲಿ ಚುನಾವಣೆ ಸಂಬಂಧ ನೋಟಿಫಿಕೇಷನ್ ಹೊರಡಿಸುವ ಸಾಧ್ಯತೆ ಇದೆ. ಆ ದಿನಾಂಕದ ಬಳಿಕ ಎಲ್ಲ ವಿಧಾನಸಭೆಗಳ ಅಧಿಕಾರಾವಧಿ ಕೊನೆಗೊಳ್ಳುತ್ತದೆ. ಒಂದು ವೇಳೆ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳು ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸದಿದ್ದರೆ 2034ಕ್ಕೆ ಅಧಿಕಾರಾವಧಿ ಕೊನೆಗೊಳ್ಳುವಂತೆ ಮತ್ತೆ ಚುನಾವಣೆ ನಡೆಯಲಿದೆ.
ಒಂದು ವೇಳೆ ಚುನಾವಣಾ ಆಯೋಗವು ನಿರ್ದಿಷ್ಟ ರಾಜ್ಯವೊಂದರ ಚುನಾವಣೆಯು ದೇಶದ ಇತರೆ ರಾಜ್ಯಗಳ ಚುನಾವಣೆ ಜತೆಗೆ ನಡೆಯಲು ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದರೆ, ಈ ಸಂಬಂಧ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ. ಆಗ ರಾಷ್ಟ್ರಪತಿಗಳು ಆ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಸಲು ಆದೇಶ ಹೊರಡಿಸಲು ವಿಧೇಯಕವು ಅವಕಾಶ ಮಾಡಿಕೊಟ್ಟಿದೆ.ಚುನಾವಣಾ ವೆಚ್ಚ ಕಡಿತ, ಪದೇ ಪದೇ ಚುನಾವಣೆ ಘೋಷಣೆಯಿಂದಾಗಿ ಜಾರಿಯಾಗುವ ನೀತಿ ಸಂಹಿತೆಗಳ ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ತಡೆ ಬೀಳುತ್ತದೆ. ತಡೆಯಲು ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ