
ಅಹಮದಾಬಾದ್: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಏರಿಂಡಿಯಾದ ವಿಮಾನವು, ರನ್‌ವೇನ ಸಮೀಪವೇ ಇದ್ದ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿ ಬೆಂಕಿಯುಂಡೆಯಾಗಿತ್ತು. ಕೆಲವೇ ಕ್ಷಣದಲ್ಲಿ ನಡೆದ ಈ ಘಟನೆಯು, ವಿಮಾನದಲ್ಲಿದ್ದವರ ಜತೆಗೆ ಕಟ್ಟಡದಲ್ಲಿದ್ದ ಹಲವು ವೈದ್ಯರ ಪ್ರಾಣವನ್ನೂ ಆಹುತಿ ಪಡೆದಿದೆ. ಅದು ಮಧ್ಯಾಹ್ನದ ಹೊತ್ತಾಗಿದ್ದರಿಂದ ಬಿಜೆ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳೆಲ್ಲರೂ ಊಟಕ್ಕೆ ಕುಳಿತಿದ್ದರು. ಇನ್ನೇನು ಅನ್ನಕ್ಕೆ ಕೈ ಇಡಬೇಕು ಎನ್ನುವಷ್ಟರಲ್ಲಿ ವೇಗವಾಗಿ ಹಾರಿಬಂದ ವಿಮಾನ ಆ ಕಟ್ಟಡಕ್ಕೆ ಅಪ್ಪಳಿಸಿದೆ. ಇದರಿಂದ ಅಲ್ಲಿದ್ದ ಬಹುತೇಕರು ಗಂಭೀರವಾಗಿ ಗಾಯಗೋಂಡಿದ್ದಾರೆ. ಹಲವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಭೋಜನ ಸ್ಥಳದಲ್ಲಿ ಊಟವಿರುವ ತಟ್ಟೆಗಳು ಹಾಗೆಯೇ ಇರುವ, ನೆಲದಲ್ಲಿ ಬಿದ್ದಿರುವ ಸುಟ್ಟ ಶವಗಳ ದೃಶ್ಯಗಳು ಮನ ಕಲಕುವಂತಿವೆ.
ದುರಂತಕ್ಕೀಡಾದ ವಿಮಾನದ ಟೇಕಾಫ್ ಅಸಹಜ: ಪೈಲಟ್
ನವದೆಹಲಿ: ಅಹಮದಾಬಾದ್‌ನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ಎ1171 ವಿಮಾನ ಟೇಕ್ ಆಫ್ ಅಸಹಜವಾಗಿತ್ತು. ಬಹುಶಃ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಲ್ಯಾಂಡಿಂಗ್ ಗೇರ್ ತೆರೆದೇ ಇತ್ತು, ರೆಕ್ಕೆಯ ವಿಸ್ತರಿಸಬಹುದಾದ ಭಾಗ ಅಥವಾ ಮಡಿಕೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಸರಿಸಲಾಗಿತ್ತು. ಟೇಕ್ ಆಫ್ ವೇಳೆ ಈ ರೀತಿಯ ಸ್ಥಿತಿ ಅಪಾಯಕಾರಿ ಎಂದು ವಾಣಿಜ್ಯ ವಿಮಾನದ ಪೈಲಟ್‌ವೊಬ್ಬರು ವಿಶ್ಲೇಷಣೆ ಮಾಡಿದ್ದಾರೆ.
ವಿಮಾನ ಟೇಕ್ ಆಫ್ ಆದ ದೃಶ್ಯಗಳನ್ನು ಆಧರಿಸಿ ವಾಣಿಜ್ಯ ವೈಲಟ್‌ವೊಬ್ಬರು ಈ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಟೇಕ್ ಆಫ್ ನಂತರದ ವಿಮಾನವೊಂದು ಈ ಸ್ಥಿತಿಯಲ್ಲಿರುವುದು ಅಸಹಜವಾಗಿದೆ ಎಂದು ಅವರು ಹೇಳಿದ್ದಾರೆ.
ಟೇಕಾಫ್ ವೇಳೆಗೆ 787 ಡ್ರೀಮ್‌ಲೈನರ್ ವಿಮಾನಗಳ ವಿಂಗ್ ಫ್ಲ್ಯಾಪ್(ರೆಕ್ಕೆಯ ಮಡಿಕೆಗಳು- ವಿಮಾನದ ವೇಗೆ ಹೆಚ್ಚಳ, ತಗ್ಗಿಸಲು ನೆರವಾಗುವ ರೆಕ್ಕೆಡ ಭಾಗ)ಗಳನ್ನು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಗೆ ಸೆಟ್ ಮಾಡಿಟ್ಟಿರಬೇಕು. ನಂತರ ಹಂತ ಹಂತವಾಗಿ ಅದನ್ನು ಹಿಂತೆಗೆದುಕೊಳ್ಳಬೇಕು. ಅದೇ ರೀತಿ ಟೇಕಾಫ್ ಯಶಸ್ವಿಯಾಗಿದೆ ಎಂದು ಖಚಿತವಾದ ಬಳಿಕವಷ್ಟೇ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಮತ್ತು ಸುಮಾರು 600 ಅಡಿ ತಲುಪುವ ಮೊದಲು ಲ್ಯಾಂಡಿಂಗ್ ಗೇರ್ ಅನ್ನು ಮಡಚಲಾಗುತ್ತದೆ.
ಮೇಲ್ನೋಟಕ್ಕೆ ಲ್ಯಾಂಡಿಂಗ್ ಗೇರ್ ಯಾಂತ್ರಿಕ ಅಥವಾ ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೆಳ ಮುಖಮಾಡಿಕೊಂಡಿರುವ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರಬೇಕು. ಇಂಥ ಪರಿಸ್ಥಿತಿಯಲ್ಲಿ ಪೈಲಟ್ ವಿಮಾನದ ರೆಕ್ಕೆಗಳ ಪಟ್ಟಿಯನ್ನು ಹಿಂತೆಗೆದುಕೊಂಡು ವೇಗ ಹೆಚ್ಚಿಸಲು ಪ್ರಯತ್ನಿಸಿರಬೇಕು. ಆದರೆ, ಕಡಿಮೆ ಎತ್ತರ ಮತ್ತು ಕಡಿಮೆ ವೇಗದಲ್ಲಿ ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ವಿಮಾನ ಮೇಲೆತ್ತುವಲ್ಲಿ ಸಮಸ್ಯೆ ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟಾದರೂ ವಿಮಾನ ಸಂಚಾರದ ವೇಳೆ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ. ಇದು ಪೈಲಟ್‌ಗೆ ವಿಮಾನದ ಮೇಲೆ ಒಂದಷ್ಟು ನಿಯಂತ್ರಣ ಸಾಧಿಸಿದ್ದ ಎಂಬುದನ್ನು ತಿಳಿಸುತ್ತದೆ ಎಂದು ವಾಣಿಜ್ಯ ವಿಮಾನದ ಪೈಲಟ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ