ವಿಕಿಪೀಡಿಯಾದಲ್ಲಿ ಯಾರಾದರೂ ಎಡಿಟ್ ಮಾಡಬಹುದಾದ್ದರಿಂದ ಅದು ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎಎನ್‌ಐ ನ್ಯೂಸ್ ಏಜೆನ್ಸಿಯನ್ನು 'ಕೇಂದ್ರ ಸರ್ಕಾರದ ಪ್ರಚಾರದ ಅಸ್ತ್ರ' ಎಂದು ಕರೆದ ವಿಕಿಪೀಡಿಯಾ ಎಡಿಟ್ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ.
ನವದೆಹಲಿ: ಆನ್‌ಲೈನ್ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತಿ ಪಡೆದಿರುವ ವಿಕಿಪೀಡಿಯಾದಲ್ಲಿನ ಮುಕ್ತ ಎಡಿಟಿಂಗ್ ಆಯ್ಕೆ ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಎನ್‌ಐ ನ್ಯೂಸ್ ಏಜೆನ್ಸಿಯ ವಿಕಿಪೀಡಿಯಾ ಪೇಜ್‌ನಲ್ಲಿ ಆ ನ್ಯೂಸ್ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರದ ಅಸ್ತ್ರ’ ಎಂದು ಕರೆದು ಕೆಲವರು ಎಡಿಟ್ ಮಾಡಿದ್ದರು. ಅದರ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ಶುಕ್ರವಾರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರು, ‘ಯಾರು ಬೇಕಾದರೂ ವಿಕಿಪೀಡಿಯಾ ಪೇಜ್ ತಿದ್ದಬಹುದೇ? ಎಲ್ಲರಿಗೂ ಕೈಯಾಡಿಸಲು ಮುಕ್ತವಾಗಿರುವುದಾದರೆ ಅದೆಂತಹ ಪೇಜ್’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
undefined
ಅದಕ್ಕೆ ವಿವರಣೆ ನೀಡಿದ ವಿಕಿಪೀಡಿಯಾ ಪರ ವಕೀಲರು, ‘ವಿಕಿಪೀಡಿಯಾ ಪೇಜ್ ಸೃಷ್ಟಿ ಮಾಡುವವರು ಹಾಗೂ ಎಡಿಟ್ ಮಾಡುವವರು ಕಾನೂನಿಗೆ ಬದ್ಧರಾಗಿರಬೇಕಾಗುತ್ತದೆ. ತಾವು ಬರೆಯುವ ಎಲ್ಲಾ ಮಾಹಿತಿಗೂ ದಾಖಲೆ ಹಾಗೂ ಮೂಲವನ್ನು ಒದಗಿಸಬೇಕಾಗುತ್ತದೆ. ಇದು ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾ ಪೇಜ್ ಅಲ್ಲ’ ಎಂದರು. ಆಗ ವಿಚಾರಣೆಯನ್ನು ಕೋರ್ಟ್ ಅ.28ಕ್ಕೆ ಮುಂದೂಡಿತು.
ಎಎನ್‌ಐ ನ್ಯೂಸ್ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರ ಅಸ್ತ್ರ’ ಎಂದು ಎಡಿಟ್ ಮಾಡಿದ ಮೂವರ ಹೆಸರನ್ನು ಬಹಿರಂಗಪಡಿಸಬೇಕೆಂದು ಈ ಹಿಂದೆ ಹೈಕೋರ್ಟ್ ಹೇಳಿತ್ತು. ಅದರ ವಿರುದ್ಧ ವಿಕಿಪೀಡಿಯಾ ಮೇಲ್ಮನವಿ ಸಲ್ಲಿಸಿದೆ.
ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನಿಲ್ಲಿಸಿ: ಮಸ್ಕ್ ಕರೆ
ಆನ್‌ಲೈನ್ ಎನ್‌ಸೈಕ್ಲೋಪೀಡಿಯಾ ಎಂದು ಜನಪ್ರಿಯವಾಗಿರುವ ವಿಕಿಪೀಡಿಯಾವನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದು, ಅದರ ದುರ್ಬಳಕೆಗೆ ಮುಕ್ತ ಅವಕಾಶವಿರುವ ಕಾರಣ ಅದಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸುವಂತೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ತಮ್ಮ ಒಡೆತನದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ಅಮೆರಿಕದ ಸುದ್ದಿಸಂಸ್ಥೆ ಪೈರೆಟ್ ವೈರ್‌ನ ವರದಿಯನ್ನಾಧರಿಸಿ, ‘ವಿಕಿಪೀಡಿಯಾದ 40 ಸಂಪಾದಕರು ಸೇರಿಕೊಂಡು ಇಸ್ರೇಲ್ ಮೇಲೆ ಅಕ್ರಮದ ಗೂಬೆ ಕೂರಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ವರ್ತಿಸುತ್ತಿದ್ದಾರೆ ಹಾಗೂ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸಿ ಅದನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ವಿಕಿಪೀಡಿಯಾದ ಕೆಲ ಸಂಪಾದಕರು ತಮ್ಮ ವಿಶೇಷ ಅಧಿಕಾರ ಬಳಸಿ ಕೆಲ ವಿಷಯಗಳ ಕುರಿತ ವ್ಯಾಖ್ಯಾನವನ್ನು ಬದಲಿಸದಂತೆ ತಡೆ ಒಡ್ಡಿರುವ ಬಗ್ಗೆ ಭಾರತವೂ ಆರೋಪಿಸುತ್ತಲೇ ಬಂದಿದೆ.