
ಪೆಹಲ್ಗಾಂ (ಜು.28) ಭಾರತದ ಮೇಲೆ ನಡೆದ ಅತೀ ಭೀಕರ ಉಗ್ರ ದಾಳಿಯಲ್ಲಿ ಪೆಹಲ್ಗಾಂ ಉಗ್ರ ದಾಳಿ ಕೂಡ ಒಂದು. ಪ್ರವಾಸಕ್ಕೆ ತೆರಳಿದ್ದ ಹಿಂದೂಗಳ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದರು. ಈ ಉಗ್ರ ದಾಳಿ ನಡೆಸಿದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಆಪರೇಶನ್ ಮಹಾದೇವ್ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ. ಪೆಹಲ್ಗಾಂ ಸಂಬಂಧಿಸಿದ ಎಲ್ಲಾ ಪ್ರತಿ ದಾಳಿ ಆಪರೇಶನ್ ಸಿಂದೂರ್ ಹೆಸರಿನಲ್ಲಿ ನಡೆದಿತ್ತು. ಆದರೆ ಇದೀಗ ಮೂವರು ಉಗ್ರರ ಹತ್ಯೆ ಮಾಡಿದ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ?
ಪವಿತ್ರ ಮಹಾದೇವ ಬೆಟ್ಟ
ಪೆಹಲ್ಗಾಂ ದಾಳಿ ಬಳಿಕ ಭಾರತ ಪಾಕಿಸ್ತಾನದ 9 ಉಗ್ರ ನೆಲೆಯನ್ನು ಪ್ರತಿದಾಳಿ ಮೂಲಕ ಧ್ವಂಸಗೊಳಿಸಿತು. ಇಷ್ಟೇ ಅಲ್ಲ ಭಾರತ ದಾಳಿಗೆ ಪಾಕಿಸ್ತಾನ ತಿರುಗೇಟು ನೀಡುವ ಪ್ರಯತ್ನ ಮಾಡಿತ್ತು. ಆದರೆ ಭಾರತೀಯ ಸೇನೆಯ ಮಾರಕ ದಾಳಿಗೆ ಪಾಕಿಸ್ತಾನ ಯುದ್ಧ ವಿರಾಮಕ್ಕೆ ಬೇಡಿಕೊಂಡಿತ್ತು. ಹೀಗಾಗಿ ಯುದ್ಧ ಅಂತ್ಯಗೊಂಡಿತ್ತು. ಈ ಎಲ್ಲಾ ಕಾರ್ಯಾಚರಣೆಗಳು ಆಪರೇಶನ್ ಸಿಂದೂರ್ ಹೆಸರಿನಲ್ಲಿ ನಡೆದಿತ್ತು. ಇದೀಗ ಆಪರೇಶನ್ ಮಹಾದೇವ್ ಹೆಸರಿನ ಕಾರ್ಯಾಚರಣೆಯಲ್ಲಿ ಪೆಹಲ್ಗಾಂ ಉಗ್ರರ ಹತ್ಯೆಯಾಗಿದೆ. ಈ ಹೆಸರಿಡಲು ಮುಖ್ಯ ಕಾರಣ ಹಿಂದೂಗಳ ಪವಿತ್ರ ಮಹಾದೇವ ಬೆಟ್ಟ.
ಪೆಹಲ್ಗಾಂ ದಾಳಿಕೋರರನ್ನು ಪತ್ತೆ ಹಚ್ಚೆ ಸದೆಬಡಿಯಲು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ಸದ್ದಿಲ್ಲದೆ ನಡೆಸುತ್ತಾ ಬಂದಿದೆ. ಸೇನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಳಿ ಇರುವ ಲಿಡ್ವಾಸ್ ವಲಯದಲ್ಲಿನ ಕಾರ್ಯಾಚರಣೆಯಲ್ಲಿ ಉಗ್ರರ ಸದಬಡಿದಿದೆ. ಈ ವಲಯದ ಹಿಂದೂಗಳ ಪವಿತ್ರ ಮಹಾದೇವ ಬೆಟ್ಟದ ತಪ್ಪಲಿನಲ್ಲಿದೆ. ಕಾಶ್ಮೀರದ ಹಲವು ಜನಪದ ಗೀತೆಗಳಲ್ಲಿ ಈ ಮಹಾದೇವ ಬೆಟ್ಟದ ಉಲ್ಲೇಖವಿದೆ. ಕಾಶ್ಮೀರಿ ಪಂಡಿತರ ಹಲವು ಗ್ರಂಥಗಳಲ್ಲೂ ಈ ಮಹಾದೇವ ಬೆಟ್ಟದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಶಿವನ ಪವಿತ್ರ ಕ್ಷೇತ್ರ ಎಂದೇ ಹಿಂದೂಗಳು ತೀರ್ಥ ಯಾತ್ರೆಯನ್ನು ಮಾಡುತ್ತಾರೆ. ಈ ಬೆಟ್ಟದ ತಪ್ಪಲಿನಲ್ಲಿ ನಡೆಸಿದ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಎಂದು ಹೆಸರಿಡಲಾಗಿತ್ತು.
ಶ್ರಾವಣ ಪೂರ್ಣಿಮೆಯಂದು ಕಾಶ್ಮೀರಿ ಪಂಡಿತರು ಯಾತ್ರೆ
ಮಹಾದೇವ ಬೆಟ್ಟ ಶಿವನ ಕ್ಷೇತ್ರ ಎಂಬುದು ಹಿಂದೂಗಳ ನಂಬಿಕೆ. ಶ್ರಾವಣ ಪೂರ್ಣಿವೆ ದಿನ ಇಲ್ಲಿಗೆ ಕಾಶ್ಮೀರಿ ಪಂಡಿತರು ತೀರ್ಥಯಾತ್ರೆ ಮಾಡುತ್ತಾರೆ. ಈ ಮಹಾದೇವ್ ಬೆಟ್ಟದ ತುದಿಯಲ್ಲಿ ಹಿಮ ನದಿ ಇದೆ. ಈ ನದಿ ವರ್ಷದ 12 ತಿಂಗಳು ಮಂಜುಗಡ್ಡೆಯಾಗಿರುತ್ತದೆ. ತೀರ್ಥಯಾತ್ರೆ ತೆರಳು ಕಾಶ್ಮೀರಿ ಪಂಡಿತರು ಈ ನದಿಯಿಂದ ಮಂಜುಗಡ್ಡೆಯನ್ನು ತಂದು ಪವಿತ್ರ ತೀರ್ಥವಾಗಿ ಹಂಚುತ್ತಾರೆ. ಇಷ್ಟೇ ಅಲ್ಲ ಈ ಮಂಜುಗಡ್ಡೆ ಔಷಧಿಗಳ ಅಂಶಹೊಂದಿದೆ ಎಂದು ಹೇಳಲಾಗುತ್ತದೆ.
ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದ ಮಹಾದೇವ್ ಬೆಟ್ಟ ಕಾಶ್ಮೀರಿ ಪಂಡಿತರ ಪವಿತ್ರ ತೀರ್ಥಕ್ಷೇತ್ರ. ಆದರೆ ಭಯೋತ್ಪಾದನೆ ಹೆಚ್ಚಾದ ಬಳಿಕ ಈ ಬೆಟ್ಟ, ಇದರ ತಪ್ಪಲಿನ ಲಿಡ್ವಾಸ್ ವಲಯದಲ್ಲಿ ಉಗ್ರರ ಅಡಗುತಾಣಗಳಾಗಿದೆ. ಹೀಗಾಗಿ ಕಳೆದ ಹಲವು ದಶಕಗಳಿಂದ ಇಲ್ಲಿಗೆ ಕಾಶ್ಮೀರಿ ಪಂಡಿತರು ತೀರ್ಥಯಾತ್ರೆ ಮಾಡುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ