
ನವದೆಹಲಿ: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾರನ್ನು ಮರಣದಂಡನೆಯಿಂದ ಪಾರು ಮಾಡಲು ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ನೇರವಾಗಿ ಯೆಮೆನ್‌ನಲ್ಲಿರುವ ಧರ್ಮಗುರುಗಳ ಮೂಲಕ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿಯಾಗುವ ಮೂಲಕ ಪರಿಹಾರ ಧನ ಸ್ವೀಕರಿಸುವಂತೆ ಮನವೊಲಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಕೆಲಸ ಸರ್ಕಾರಕ್ಕಿಂತ ಧಾರ್ಮಿಕ ಮಾರ್ಗದ ಮೂಲಕವೇ ಸಾಧ್ಯ ಎಂಬುದನ್ನು ಹೇಳಲಾಗುತ್ತಿದೆ. ಹಾಗಾಗಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ. ಸದ್ಯ ನಿಮಿಷಾ ಪ್ರಿಯಾ ಮರಣದಂಡಣೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿಯನ್ನು ನೀಡಿದೆ.
ಯಾರು ಈ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್?
ಬಹುತೇಕರಿಗೆ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಯಾರು? ಎಷ್ಟು ಪ್ರಭಾವಿ ಎಂಬ ವಿಷಯ ತಿಳಿದಿರಲ್ಲ. ಈ ಲೇಖನದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಯಾರು ಎಂಬುದರ ಮಾಹಿತಿಯನ್ನು ನೋಡೋಣ ಬನ್ನಿ.
94 ವರ್ಷದ ಧಾರ್ಮಿಕ ಗುರು ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಪೂರ್ಣ ಹೆಸರು ಶೇಖ್ ಅಬು ಬಕರ್ ಅಹ್ಮದ್. ಇವರನ್ನು 'ಭಾರತದ ಗ್ರ್ಯಾಂಡ್ ಮುಫ್ತಿ' ಎಂದು ಕರೆಯಲಾಗುತ್ತದೆ. ಕೇರಳದ ಮುಸ್ಲಿಮರಲ್ಲಿ ಈ ಬಿರುದು ಹೊಂದಿರುವ ಧರ್ಮಗುರುಗಳನ್ನು ಅತ್ಯಂತ ಗೌರವಯುತವಾಗಿ ನೋಡಲಾಗುತ್ತದೆ. ರಾಜತಾಂತ್ರಿಕವಾಗಿ ಕಷ್ಟಕರವಾದ ಕೆಲಸಗಳನ್ನ ಅಬೂಬಕರ್ ಮುಸ್ಲಿಯಾರ್ ಮಾಡಿದ್ದು, ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶದಲ್ಲಿರುವ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದಾರೆ.
ಸದ್ಯ ಕೇರಳದ ಕೋಝಿಕ್ಕೋಡ್‌ನಲ್ಲಿ ವಾಸವಾಗಿರುವ ಅಬೂಬಕರ್ ಮುಸ್ಲಿಯಾರ್, ಅಖಿಲ ಭಾರತ ಸುನ್ನಿ ಜಮಿಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ದಕ್ಷಿಣ ಏಷ್ಯಾದ ಸುನ್ನಿ ಮುಸ್ಲಿಮರ ಪ್ರಮುಖ ಧರ್ಮಗುರಗಳಲ್ಲಿ ಒಬ್ಬರಾಗಿದ್ದಾರೆ. ಮರ್ಕಜ್ ಜ್ಞಾನ ನಗರದ ಅಧ್ಯಕ್ಷರಾಗಿರುವ ಇವರು, ಇಸ್ಲಾಮಿಕ್ ಸಂಪ್ರದಾಯವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಸಂಪರ್ಕ ಸಾಧಿಸಿದ್ದೇಗೆ?
ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಮಧ್ಯಸ್ಥಿಕೆ ಮಾಡಬೇಕೆಂಬ ಮನವಿ ಬಂದಾಗ ಕಾಂತಪುರಂ ಮುಸ್ಲಿಯಾರ್ ಅವರು ಮೊದಲು ಯೆಮನ್‌ನ ಪ್ರಭಾವಿ ಸೂಫಿ ಇಸ್ಲಾಮಿಕ್ ವಿದ್ವಾಂಸರನ್ನು ಸಂಪರ್ಕಿಸಿದ್ದರು. ಶಿಕ್ಷೆಗಿಂತ ಕರುಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇಸ್ಲಾಮಿಕ್ ಶರಿಯಾ ಕಾನೂನಿನ ಅಂಶವನ್ನು ಸಂತ್ರಸ್ತ ಕುಟುಂಬಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ. ನಂತರ ಸಂತ್ರಸ್ತ ಕುಟುಂಬ ಮಾತುಕತೆಗೆ ಒಪ್ಪಿದೆ ಎಂದು ಹೇಳಲಾಗುತ್ತಿದೆ.
ಈ ಪ್ರಕರಣದ ಕುರಿತು ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಕಾಂತಿಪುರಂ ಮುಸ್ಲಿಯಾರ್, ಯೆಮೆನ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ನಿಮಿಷಾ ಪ್ರಿಯಾ ಎಂಬವರಿಗೆ ಮರಣದಂಡನೆ ವಿಧಿಸಿತ್ತು. ಇಸ್ಲಾಂನಲ್ಲಿ ಅನ್ಯಾಯಕ್ಕೊಳಾಗದ ಅಥವಾ ಸಂತ್ರಸ್ತ ಕುಟುಂಬಕ್ಕೆ ಅಪರಾಧಿಯನ್ನು ಕ್ಷಮಿಸಬಹುದು. ನಾನು ಇಲ್ಲಿಂದಲೇ ಯೆಮೆನ್‌ನಲ್ಲಿರುವ ಪ್ರಮುಖ ವಿಧ್ವಾಂಸರನ್ನು ಸಂಪರ್ಕಿಸಿ ಇಲ್ಲಿಯ ಮತ್ತು ಪ್ರಕರಣದ ಪರಿಸ್ಥಿತಿಯನ್ನು ವಿವರಿಸಿದೆ. ಅವರು ಸಹ ಮನವೊಲಿಸಲು ಪ್ರಯತ್ನ ಮಾಡೋದಾಗಿ ಹೇಳಿದ್ದಾರೆ. ಯೆಮೆನ್‌ನಲ್ಲಿ ಅಪರಾಧಿ ನೀಡುವ ದಿಯಾ (ಬ್ಲಡ್ ಮನಿ) ಪಡೆದು ಕ್ಷಮಿಸುವ ಪದ್ಧತಿ ಇದೆ. ದಿಯಾ ಹಣ ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮಾನವೀಯತೆಯ ಹೆಸರಿನಲ್ಲಿ ಮನವಿ
ಸಂತ್ರಸ್ತ ಕುಟುಂಬ ಪರಿಹಾರ ಹಣವನ್ನು ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯ ಶಿಕ್ಷ ವಿಧಿಸುವ ದಿನಾಂಕ ಮುಂದೂಡಲಾಗಿದೆ. ಮಾನವೀಯತೆಯ ಹೆಸರಿನಲ್ಲಿ ಕುಟುಂಬದ ಮುಂದೆ ಮನವಿ ಸಲ್ಲಿಸಿದ್ದೇವೆ. ಈ ಮನವಿ ಸ್ವೀಕರಿಸಿದ್ರೆ ನಿಮಿಷಾ ಪ್ರಿಯಾ ಪ್ರಕರಣದಿಂದ ಹೊರ ಬರುತ್ತಾರೆ ಎಂದು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ