
ನವದೆಹಲಿ (ಏ.11): 2008ರ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವ್ವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆಯಲ್ಲಿ ಎನ್‌ಐಎ ಪರವಾಗಿ ಹೋರಾಡಿದ್ದು ಬೆಂಗಳೂರು ನಂಟಿನ ದಯಾನ್ ಕೃಷ್ಣನ್. ಜೊತೆಗೆ ಈ ಹಿರಿಯ ವಕೀಲ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಸಂತೋಷ್ ಹೆಗ್ಡೆ ಅವರ ಶಿಷ್ಯ ಎಂಬುದು ಕೂಡ ವಿಶೇಷ. ಗಡೀಪಾರು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣನ್ ಅವರನ್ನು ಇದೀಗ ರಾಣಾ ವಿರುದ್ಧ ನ್ಯಾಯಾಲಯದಲ್ಲಿ ಎನ್‌ಐಎ ಪರವಾಗಿ ವಾದ ಮಂಡಿಸಲು ನಿಯೋಜಿಸಲಾಗಿದೆ.
ಯಾರಿವರು ಕೃಷ್ಣನ್?: ದಯಾನ್ ಕೃಷ್ಣನ್ 1993ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ಬಳಿಕ ಸಂತೋಷ್ ಹೆಗ್ಡೆ ಅವರು ವಕೀಲಿಕೆ ನಡೆಸುತ್ತಿದ್ದ ವೇಳೆ ಅವರ ಶಿಷ್ಯರಾಗಿಯೂ ಕೃಷ್ಣನ್ ಸೇವಾನುಭವ ಪಡೆದುಕೊಂಡಿದ್ದರು. ತದನಂತರದಲ್ಲಿ ದೆಹಲಿಗೆ ತೆರಳಿದ್ದ ಕೃಷ್ಣನ್ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದ್ದರು.
ನಂತರದ ವರ್ಷಗಳಲ್ಲಿ ದೇಶವ್ಯಾಪಿ ಭಾರೀ ಗಮನ ಸೆಳೆದಿದ್ದ ಸಂಸತ್ ಮೇಲಿನ ದಾಳಿ, ಕಾವೇರಿ ಜಲ ವಿವಾದ, ದೂರಸಂಪರ್ಕ, ಬ್ರಿಟನ್‌ನಿಂದ ಉದ್ಯಮಿ ರವಿ ಶಂಕರನ್ ಗಡೀಪಾರು, 2012ರ ನಿರ್ಭಯಾ ಬಲತ್ಕಾರ ಸೇರಿ ವಿವಿಧ ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ, ಎನ್‌ಐಎ, ಸಿಬಿಐ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರ ಪರವಾಗಿಯೂ ದಯಾನ್ ವಾದಿಸಿದ್ದಾರೆ. 2010ರಿಂದ ನಿರಂತರವಾಗಿ ರಾಣಾ ಗಡೀಪಾರು ಪ್ರಕ್ರಿಯೆಯಲ್ಲಿ ತೊಡಗಿರುವ ಕೃಷ್ಣನ್, ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹೆಡ್ಲಿ ತನಿಖೆಗೆ ಶಿಕಾಗೋಗೆ ತೆರಳಿದ ಎನ್‌ಐಎ ತಂಡದ ಸಲಹೆಗಾರರೂ ಆಗಿದ್ದರು.
ಕಡೆಗೂ ಬಂದ ರಾಣಾ ರಾಕ್ಷಸ: ಪಾಕಿಸ್ತಾನ ಬಣ್ಣ ಬಯಲು ನಿರೀಕ್ಷೆ
ಉಗ್ರ ಕಸಬ್ ಇದ್ದ ಸೆಲ್‌ನಲ್ಲಿ ರಾಣಾ ಜೈಲು ವಾಸ?: ಗಡೀಪಾರಾಗಿ ಭಾರತಕ್ಕೆ ಬಂದಿರುವ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾನನ್ನು ವಿಚಾರಣೆಯ ಸಂದರ್ಭದಲ್ಲಿ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ ಬ್ಯಾರಕ್ ನಂ.12ರಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ವಿಶೇಷವೆಂದರೆ ಉಗ್ರ ಕಸಬ್‌ನನ್ನು ಗಲ್ಲಿಗೇರಿಸುವ ಮುನ್ನ ಇದೇ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು.ಈ ಬ್ಯಾರಕ್ ನಂ.12 ವಿಶೇಷವಾಗಿದ್ದು, ಇದು ಸಾಮಾನ್ಯ ಬ್ಯಾರಕ್‌ಗಳಿಗಿಂತ ಹೆಚ್ಚಿನ ಭದ್ರತೆಯನ್ನು ಹೊಂದಿದೆ. ಇನ್ನು ಕಸಬ್ ಇದ್ದ ಸಂದರ್ಭದಲ್ಲಿ ಈ ಸೆಲ್ ಪ್ರತ್ಯೇಕ ಅಡುಗೆ ಮನೆಯನ್ನು ಸಹ ಹೊಂದಿತ್ತು. ಆದರೆ ಇದೇ ಬ್ಯಾರಕ್‌ನಲ್ಲಿ ರಾಣಾನನ್ನು ಇರಿಸುವ ಬಗ್ಗೆ ಯಾವುದೇ ಸೂಚನೆಗಳು ಬಂದಿಲ್ಲ. ಅವರನ್ನು ಇಲ್ಲಿಗೆ ಕರೆತಂದ ನಂತರ ಎಲ್ಲಿ ಇರಿಸಬೇಕು ಎಂದು ನೋಡುತ್ತೇವೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ ಮೂಲಗಳ ಮಾಹಿತಿ ಪ್ರಕಾರ ರಾಣಾನನ್ನು ಬ್ಯಾರಕ್ 12ನ ನೆಲ ಮಹಡಿಯಲ್ಲಿರುವ ಮೂರು ಸೆಲ್‌ಗಳಲ್ಲಿ ಒಂದರಲ್ಲಿ ಇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ