ಕಡೆಗೂ ಬಂದ ರಾಣಾ ರಾಕ್ಷಸ: ಪಾಕಿಸ್ತಾನ ಬಣ್ಣ ಬಯಲು ನಿರೀಕ್ಷೆ

Published : Apr 11, 2025, 06:38 AM ISTUpdated : Apr 11, 2025, 08:01 AM IST
ಕಡೆಗೂ ಬಂದ ರಾಣಾ ರಾಕ್ಷಸ: ಪಾಕಿಸ್ತಾನ ಬಣ್ಣ ಬಯಲು ನಿರೀಕ್ಷೆ

ಸಾರಾಂಶ

166 ಜನರನ್ನು ಬಲಿ ಪಡೆದ 2008ರ ಮುಂಬೈ ಸರಣಿ ದಾಳಿ ಪ್ರಕರಣದ ಮಾಸ್ಟರ್‌ಮೈಂಡ್‌ ತಹಾವ್ವುರ್‌ ರಾಣಾ (64) ಕೊನೆಗೂ ಅಮೆರಿಕದಿಂದ ಗಡೀಪಾರಾಗಿ ಭಾರತಕ್ಕೆ ಬಂದಿಳಿದಿದ್ದಾನೆ. 

ನವದೆಹಲಿ (ಏ.11): 166 ಜನರನ್ನು ಬಲಿ ಪಡೆದ 2008ರ ಮುಂಬೈ ಸರಣಿ ದಾಳಿ ಪ್ರಕರಣದ ಮಾಸ್ಟರ್‌ಮೈಂಡ್‌ ತಹಾವ್ವುರ್‌ ರಾಣಾ (64) ಕೊನೆಗೂ ಅಮೆರಿಕದಿಂದ ಗಡೀಪಾರಾಗಿ ಭಾರತಕ್ಕೆ ಬಂದಿಳಿದಿದ್ದಾನೆ. ಎನ್‌ಐಎ ಮತ್ತು ಎನ್‌ಎಸ್‌ಜಿ ಕಮಾಂಡೋಗಳ ತಂಡ ವಿಶೇಷ ವಿಮಾನದಲ್ಲಿ ಆತನನ್ನು ಗುರುವಾರ ಸಂಜೆ ವೇಳೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಕರೆತಂದಿದೆ. ಅದರ ಬೆನ್ನಲ್ಲೇ ಮುಂಬೈ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ರಾಣಾನನ್ನು ಬಂಧಿಸಿದ್ದಾರೆ.

ಇದರೊಂದಿಗೆ ಭಯೋತ್ಪಾದನೆ ವಿಷಯದಲ್ಲಿ ಭಾರತದ ಹೋರಾಟ ಮತ್ತು ಭಾರತದ ರಾಜತಾಂತ್ರಿಕತೆಗೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ರಾಣಾನ ವಿಚಾರಣೆಯು, ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡದ ಕುರಿತು ಮತ್ತಷ್ಟು ಬೆಳಕು ಚೆಲ್ಲುವ ಸಾಧ್ಯತೆ ಇದೆ.

ರಕ್ತಪಿಪಾಸು ತಹಾವುರ್‌ ರಾಣಾ ಭಾರತಕ್ಕೆ: ಅಮೆರಿಕದಿಂದ ಗಡೀಪಾರು

ಗಡೀಪಾರು?: ಮುಂಬೈ ದಾಳಿಗೆ ನೆರವು ನೀಡಿದ್ದ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹಾವ್ವುರ್‌ ರಾಣಾನನ್ನು ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿದೆ. ಗಡೀಪಾರಿಗೆ ತಡೆ ಕೋರಿದ್ದ ರಾಣಾನ ಮೇಲ್ಮನವಿಯನ್ನು ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಉಗ್ರನನ್ನು ಹೊತ್ತ ವಿಶೇಷ ವಿಮಾನ ಗುರುವಾರ ಸಂಜೆ 6.35ರ ವೇಳೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಬಳಿಕ ಕೆಲವೊಂದು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಎನ್‌ಐಎ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಉಗ್ರನನ್ನು ಬಂಧಿಸಿದ್ದಾರೆ. ನಂತರ ರಾಣಾನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ಈ ವೇಳೆ ನ್ಯಾಯಾಲಯವು ಉಗ್ರನನ್ನು 14 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಈ ನಡುವೆ ಪ್ರಕರಣದಲ್ಲಿ ಎನ್‌ಐಎ ಪರವಾಗಿ ವಾದ ಮಂಡಿಸಲು ಕೇಂದ್ರ ಸರ್ಕಾರವು ದಯಾನ್‌ ಕೃಷ್ಣನ್‌ ಅವರನ್ನು ವಕೀಲರಾಗಿ ಮತ್ತು ನರೇಂದರ್‌ ಮಾನ್‌ ಅವರನ್ನು ವಿಶೇಷ ಅಭಿಯೋಜಕರಾಗಿ ನೇಮಿಸಿದೆ. ಇನ್ನೊಂದೆಡೆ ಉಗ್ರ ರಾಣಾನ ಪರವಾಗಿ ವಕೀಲಿಕೆ ನಡೆಸಲು ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪೀಯೂಷ್‌ ಸಚ್‌ದೇವ್ ಅವರನ್ನು ನೇಮಿಸಲಾಗಿದೆ.

ಎನ್‌ಐಎ ಹೇಳಿಕೆ: ರಾಣಾ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್‌ಐಎ, ‘ಎನ್‌ಐಎ ಮತ್ತು ಎನ್‌ಎಸ್‌ಜಿ ತಂಡ ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ರಾಣಾನನ್ನು ಭಾರತದಲ್ಲಿ ವಿಶೇ಼ಷ ವಿಮಾನದಲ್ಲಿ ಕರೆತಂದಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ರಾಣಾನನ್ನು ಅಧಿಕೃತವಾಗಿ ಬಂಧಿಸಲಾಗಿದೆ’ ಎಂದು ಹೇಳಿದೆ.

ಏನು ಆರೋಪ?: ಉಗ್ರರಾದ ಡೇವಿಡ್‌ ಕೋಲ್ಮನ್‌ ಹೆಡ್ಲಿ, ದಾವೂದ್‌ ಗಿಲಾನಿ, ಲಷ್ಕರ್‌ ಎ ತೊಯ್ಬಾ, ಹರ್ಕತ್‌ ಉಲ್‌ ಜಿಹಾದಿ ಇಸ್ಲಾಮಿ ಉಗ್ರ ಸಂಘಟನೆಯ ಕಾರ್ಯಕರ್ತರು ಮತ್ತು ಪಾಕಿಸ್ತಾನದ ಇತರೆ ಕೆಲವರ ಜೊತೆ ಸೇರಿಕೊಂಡು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪವನ್ನು ತಹಾವುರ್ ರಾಣಾ ಎದುರಿಸುತ್ತಿದ್ದಾನೆ.

ಯಾವ ಕೇಸಲ್ಲಿ ಆರೋಪಿ?: 2008ರ ನ.26ರಂದು ಪಾಕಿಸ್ತಾನ ಮೂಲದ 10 ಉಗ್ರರ ತಂಡವೊಂದು ಅಕ್ರಮವಾಗಿ ಭಾರತದ ಪ್ರವೇಶಿಸಿ ಮುಂಬೈನ ತಾಜ್‌ ಹೋಟೆಲ್‌ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಭಾರತ, ಅಮೆರಿಕ, ಇಸ್ರೇಲ್‌ ದೇಶಗಳ 166 ಪ್ರಜೆಗಳು ಸಾವನ್ನಪ್ಪಿ, 238 ಜನರು ಗಾಯಗೊಂಡಿದ್ದರು. ದಾಳಿ ನಡೆಸಿದವರ ಪೈಕಿ ಕಸಬ್ ಒಬ್ಬ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು.

ದಾಳಿಗೂ ಮುನ್ನ ಡೇವಿಡ್‌ ಹೆಡ್ಲಿ ಮುಂಬೈನಲ್ಲಿ ದಾಳಿ ನಡೆಸಬೇಕಿರುವ ಸ್ಥಳಗಳ ಪರಿಶೀಲನೆ ನಡೆಸಿದ್ದ. ಆತನಿಗೆ ರಾಣಾ ಸಹಾಯ ಮಾಡಿದ್ದ. 2009ರಲ್ಲಿ ಇಬ್ಬರೂ ಡೆನ್ಮಾರ್ಕ್‌ ಪತ್ರಿಕೆಯೊಂದರ ಮೇಲೆ ದಾಳಿಗೆ ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಮುಂಬೈ ದಾಳಿಯಲ್ಲೂ ಇವರ ಕೈವಾಡವಿರುವುದು ಬೆಳಕಿಗೆ ಬಂದಿತ್ತು. ಅಮೆರಿಕದ ಎಫ್‌ಬಿಐ ಇಬ್ಬರನ್ನೂ ಬಂಧಿಸಿ, ಭಾರತಕ್ಕೆ ಮಾಹಿತಿ ನೀಡಿತ್ತು. ಅಂದಿನಿಂದಲೂ ಭಾರತ ಗಡೀಪಾರಿಗೆ ಹೋರಾಟ ನಡೆಸುತ್ತಾ ಬಂದಿತ್ತು.

166 ಜನರ ಬಲಿ ಪಡೆದ 26/11 ದಾಳಿ ಮಾಸ್ಟರ್‌ಮೈಂಡ್‌ ಗಡೀಪಾರು: ಅಮೆರಿಕದಿಂದ ದೆಹಲಿಗೆ ಕರೆತಂದ ಎನ್‌ಐಎ, ಎನ್‌ಎಸ್‌ಜಿ ಕಮಾಂಡೋಗಳು- ಭಾರತಕ್ಕೆ ಮಹತ್ವದ ರಾಜತಾಂತ್ರಿಕ ದಿಗ್ವಿಜಯ । ಪಾಕ್‌ ಬಣ್ಣ ಬಯಲು ನಿರೀಕ್ಷೆ

ಮುಂದೇನು?: ಮುಂಬೈ ದಾಳಿ ಸಂಬಂಧ ರಾಣಾನನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ- ಪಾಕ್‌ ಕೈವಾಡ ಕುರಿತು ಪ್ರಬಲ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಕೋರ್ಟ್‌ಗೂ ವರದಿ ಸಲ್ಲಿಸಲಿದ್ದಾರೆ. ನೆಲದ ಕಾನೂನಿನ ಪ್ರಕಾರ ತಹಾವ್ವುರ್‌ ರಾಣಾ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ .

ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ: ತಹಾವ್ವುರ್‌ ರಾಣಾಗೆ ಭಾರತದ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಕೃಷ್ಣ ಪಿಳ್ಳೈ ಹೇಳಿದ್ದಾರೆ. 

ರಾಣಾ ನಮ್ಮ ಪ್ರಜೆ ಅಲ್ಲ: ಪಾಕ್‌ ವರಸೆ: ಉಗ್ರ ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರಾದ ಬೆನ್ನಲ್ಲೇ ಪಾಕಿಸ್ತಾನ ಆತನಿಂದ ಅಂತರ ಕಾಯ್ದುಕೊಂಡಿದ್ದು, ‘ಆತ ನಮ್ಮ ದೇಶದವನ್ನಲ್ಲ. ಕೆನಡಾದ ಪ್ರಜೆ’ ಎಂದು ಹೇಳಿಕೊಂಡಿದೆ. 

ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ರಾಣಾ ಗಡಿಪಾರಿಗೆ ಅಮೆರಿಕ ಕೋರ್ಟ್‌ ಸೂಚನೆ

14 ವರ್ಷ ಕಾಲದ ಹೋರಾಟಕ್ಕೆ ಜಯ: ತಹಾವ್ವುರ್‌ ರಾಣಾನ ಗಡೀಪಾರಿನೊಂದಿಗೆ ಈ ಬಗ್ಗೆ 14 ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಹೋರಾಟಕ್ಕೆ ಯಶಸ್ಸು ಸಿಕ್ಕಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್