
ಮುಂಬೈ: ಇತ್ತೀಚೆಗೆ ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಹುಟ್ಟು ಹಬ್ಬವನ್ನು ಐಪಿಎಲ್ ಅವ್ಯವಹಾರ ಮಾಡಿ ಸಾವಿರಾರು ಕೋಟಿ ನುಂಗಿದ ಲಲಿತ್ ಮೋದಿ ಬಹಳ ಅದ್ಧೂರಿಯಾಗಿ ಮಾಡಿದ್ದರು. ಇಬ್ಬರು ಕೂಡ ದೇಶ ಬಿಟ್ಟು ಲಂಡನ್‌ನಲ್ಲಿ ನೆಲೆಸಿದ್ದಾರೆ. ಇದೀಗ
ಭಾರತಕ್ಕೆ ಯಾವಾಗ ಮರಳಲು ಉದ್ದೇಶಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುವಂತೆ ವಿಜಯ್ ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ. ಜೊತೆಗೆ, ಮಲ್ಯ ಮೊದಲು ನ್ಯಾಯಾಲಯದ ವ್ಯಾಪ್ತಿಗೆ ಶರಣಾಗದೆ ಇದ್ದರೆ, ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ (Fugitive Economic Offenders Act – FEO Act) ವಿರುದ್ಧ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಎಂದು ಅವರ ವಕೀಲರಿಗೆ ಕೋರ್ಟ್ ಕಟ್ಟು ನಿಟ್ಟಾಗಿ ಹೇಳಿದೆ.
2016ರಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರು, ಬಾಂಬೆ ಹೈಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದರಲ್ಲಿ, ತಮ್ಮನ್ನು ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿದ್ದು, ಮತ್ತೊಂದರಲ್ಲಿ 2018ರಲ್ಲಿ ಜಾರಿಗೆ ಬಂದ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ. ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲು ಭಾರತಕ್ಕೆ ಮರಳದೆ ವಿದೇಶದಲ್ಲೇ ಇರುವ 70 ವರ್ಷದ ಉದ್ಯಮಿಯ ಅರ್ಜಿಗಳ ವಿಚಾರಣೆ ನಡೆಸುವ ವೇಳೆ, ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನೀವು ಯಾವಾಗ ಭಾರತಕ್ಕೆ ಮರಳಲಿದ್ದೀರಿ? ಎಂಬ ನೇರ ಪ್ರಶ್ನೆಯನ್ನು ಕೇಳಿತು.
ವಿಜಯ್ ಮಲ್ಯ ಪರ ವಿಚಾರಣೆಯಲ್ಲಿ ಹಾಜರಾದ ವಕೀಲ ಅಮಿತ್ ದೇಸಾಯಿ ಮುಂದೆ ನ್ಯಾಯಾಲಯವು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. ಮಲ್ಯ ಅವರು ಮೊದಲು ನ್ಯಾಯಾಲಯದ ವ್ಯಾಪ್ತಿಗೆ ಶರಣಾಗಿ ತಮ್ಮನ್ನು ಕಾನೂನಿಗೆ ಒಪ್ಪಿಸಿಕೊಳ್ಳದೆ ಇದ್ದರೆ, FEO ಕಾಯ್ದೆಯ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಈ ವೇಳೆ ಜಾರಿ ನಿರ್ದೇಶನಾಲಯ (ED) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಅರ್ಜಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡದೆ, ಪರಾರಿಯಾಗಿರುವ ವ್ಯಕ್ತಿಗಳಿಗೆ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಲು ಅವಕಾಶ ನೀಡಬಾರದು ಎಂದು ವಾದಿಸಿದರು. ಪರಾರಿಯಾದ ಆರ್ಥಿಕ ಅಪರಾಧಿಗಳು ವಿದೇಶದಲ್ಲೇ ಉಳಿದುಕೊಂಡು, ತಮ್ಮ ವಕೀಲರ ಮೂಲಕ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು FEO ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತುಷಾರ್ ಮೆಹ್ತಾ ತಮ್ಮ ವಾದವನ್ನು ನ್ಯಾಯಾಲಯದ ಮುಂದಿಟ್ಟರು. ಅಲ್ಲದೆ, ವಿಜಯ್ ಮಲ್ಯ ವಿರುದ್ಧದ ಹಸ್ತಾಂತರ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪೀಠ, ಮಲ್ಯ ಅವರು ಸಲ್ಲಿಸಿರುವ ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪ್ರವರ್ತಕರಾದ ಮಲ್ಯ, ಯಾವ ಅರ್ಜಿಯನ್ನು ಮುಂದುವರಿಸಲು ಬಯಸುತ್ತಾರೆ ಮತ್ತು ಯಾವುದನ್ನು ಹಿಂತೆಗೆದುಕೊಳ್ಳಲು ಉದ್ದೇಶಿಸಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಬೇಕು ಕಟ್ಟುನಿಟ್ಟಾಗಿ ಹೇಳಿತು.
ವಿಜಯ್ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ಮಲ್ಯ ಅವರ ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಬ್ಯಾಂಕುಗಳು 6,000 ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ವಸೂಲಿ ಮಾಡಿಕೊಂಡಿವೆ. ಈ ಮೂಲಕ ಹಣಕಾಸಿನ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಪರಾರಿಯಾಗಿರುವ ಉದ್ಯಮಿ ವಿದೇಶದಲ್ಲಿದ್ದರೂ ಕಾನೂನು ಪ್ರಾತಿನಿಧ್ಯ ಪಡೆಯುವ ಹಕ್ಕು ಹೊಂದಿದ್ದಾನೆ ಎಂದು ವಾದಿಸಿದರು. ಆದರೆ, ನ್ಯಾಯಾಲಯದ ವ್ಯಾಪ್ತಿಗೆ ಒಳಪಡದೆ ಕ್ರಿಮಿನಲ್ ಹೊಣೆಗಾರಿಕೆಯಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಪ್ರಶ್ನೆಯನ್ನು ಪೀಠ ಎತ್ತಿತು. ವಿಜಯ್ ಮಲ್ಯ ಅವರು ಯಾವ ಅರ್ಜಿಯನ್ನು ಮುಂದುವರಿಸಲು ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲು ಸಮಯ ನೀಡಿದ ಬಾಂಬೆ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದೆ.
ಗಮನಾರ್ಹವಾಗಿ, 2019ರ ಜನವರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯವು, ವಿಜಯ್ ಮಲ್ಯ ಅವರನ್ನು ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಘೋಷಿಸಿತ್ತು. ಹಲವು ಬ್ಯಾಂಕ್ ಸಾಲಗಳ ಮರುಪಾವತಿಯಲ್ಲಿ ವಿಫಲರಾಗಿದ್ದು ಹಾಗೂ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಲ್ಯ ಅವರು, 2016ರ ಮಾರ್ಚ್‌ನಲ್ಲಿ ಭಾರತ ತೊರೆದು ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ