
ನವದೆಹಲಿ: ಉನ್ನಾವ್ ಅತ್ಯಾ*ಚಾರ ಪ್ರಕರಣದ ಸಂತ್ರಸ್ತ ಮಹಿಳೆ ಮತ್ತು ಆಕೆಯ ತಾಯಿ, ವೃದ್ಧ ಮಹಿಳೆಯ ಮೇಲೆ ಕೇಂದ್ರ ಅರೆಸೈನಿಕ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ದೌರ್ಜನ್ಯ ನಡೆಸಿದ ಕೆಲವೇ ಗಂಟೆಗಳ ಬಳಿಕ, ಇಂದು ಸಂಜೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ಮಹತ್ವದ ಸಭೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯಿತು. ಜರ್ಮನಿಯಿಂದ ವಿದೇಶಿ ಪ್ರವಾಸ ಮುಗಿಸಿ ಹಿಂದಿರುಗಿದ ಮರುದಿನವೇ ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿಯಾದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಂತ್ರಸ್ತೆಗೆ ನ್ಯಾಯ ಒದಗಿಸುವ ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
2019ರ ಉನ್ನಾವ್ ಅತ್ಯಾ*ಚಾರ ಪ್ರಕರಣದಲ್ಲಿ ದೋಷಿಯಾಗಿರುವ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ನೀಡಲಾಗಿರುವ ಶಿಕ್ಷೆಗೆ ತಡೆ ನೀಡಿ, ಜಾಮೀನು ನೀಡಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಖಂಡಿಸಿ, ಸಂತ್ರಸ್ತೆ ಮತ್ತು ಆಕೆಯ ತಾಯಿ ಇತ್ತೀಚೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅರೆಸೈನಿಕ ಪಡೆ ಸಿಬ್ಬಂದಿ ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದ್ದರು. ಈ ಘಟನೆಯ ಮುಂದಿನ ದಿನವೇ, ರಾಹುಲ್ ಗಾಂಧಿ ಸ್ವತಃ ಕರೆ ಮಾಡಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಅದರಂತೆ ಇಂದು ಅವರು ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದರು. ಜೊತೆಗೆ ಪಿಎಂ ಮೋದಿಯನ್ನು ಭೇಟಿಯಾಗುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರಂತೆ
ಅತ್ಯಾ*ಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕುಲದೀಪ್ ಸಿಂಗ್ ಸೆಂಗಾರ್ ಅವರು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೆ ಜೈಲಿನಿಂದ ಹೊರಗಿರಲು ದೆಹಲಿ ಹೈಕೋರ್ಟ್ ಅವಕಾಶ ನೀಡಿದೆ. ಈ ಆದೇಶವನ್ನು ಸಂತ್ರಸ್ತೆ ಮತ್ತು ಆಕೆಯ ತಾಯಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ, ಸಿಆರ್‌ಪಿಎಫ್ ಸಿಬ್ಬಂದಿ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅಲ್ಲದೆ, ಚಲಿಸುತ್ತಿದ್ದ ಬಸ್ಸಿನಿಂದ ಇಳಿಯುವಂತೆ ಒತ್ತಾಯಿಸಿ, ವೃದ್ಧ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪವೂ ಕೇಳಿಬಂದಿದೆ.
ಸಂತ್ರಸ್ತೆ, ದೆಹಲಿ ಹೈಕೋರ್ಟ್ ಜಾಮೀನು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದು, ಈ ಸಂಬಂಧ ಉನ್ನತ ವಕೀಲರನ್ನು ಒದಗಿಸಲು ರಾಹುಲ್ ಗಾಂಧಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನಾವ್ ಅತ್ಯಾ*ಚಾರ ಸಂತ್ರಸ್ತೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ನಮ್ಮ ನೋವನ್ನು ಕೇಳಿ ಕಣ್ಣೀರಿಟ್ಟರು. ಅವರು ನಮ್ಮೊಂದಿಗೆ ನಿಂತಿದ್ದಾರೆ ಎಂಬ ಭರವಸೆ ನೀಡಿದರು ಎಂದರು.
ಬದುಕುಳಿದ ಮಹಿಳೆ, ತನ್ನ ಮತ್ತು ಕುಟುಂಬದ ಭದ್ರತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು ನಮಗೆ ಕೊಲೆಯಾಗುವ ಭಯವಿದೆ. ನಾವು ಸುರಕ್ಷಿತವಾಗಿಲ್ಲ. ದಯವಿಟ್ಟು ಕಾಂಗ್ರೆಸ್ ಆಡಳಿತವಿರುವ ರಾಜ್ಯಕ್ಕೆ ನಮ್ಮನ್ನು ಸ್ಥಳಾಂತರಿಸಲು ಸಹಾಯ ಮಾಡಿ ಎಂದು ರಾಹುಲ್ ಗಾಂಧಿಯನ್ನು ವಿನಂತಿಸಿಕೊಂಡಿದ್ದಾರೆ. ಈ ವಿಷಯವನ್ನು ಪರಿಶೀಲಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶವನ್ನು ಖಂಡಿಸಿದ ಸಂತ್ರಸ್ತೆ, ಶಿಕ್ಷೆಯನ್ನು ತಡೆಹಿಡಿದು ಅತ್ಯಾ*ಚಾರ ಆರೋಪಿಗೆ ಜಾಮೀನು ನೀಡಿದ್ದು ದೇಶದಲ್ಲಿ ಇದೇ ಮೊದಲ ಬಾರಿ. ಇದು ನಮಗೆ ಭಾರೀ ಆಘಾತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ದೇಶದ ಎಲ್ಲಾ ಹೆಣ್ಣುಮಕ್ಕಳೂ ಭಯದಲ್ಲಿ ಬದುಕುತ್ತಿದ್ದಾರೆ. ಅಪರಾಧಿಗಳು ಹೊರಗೆ ಇರುತ್ತಾರೆ, ಬಲಿಪಶುಗಳು ಮನೆಗೆ ಸೀಮಿತಗೊಳ್ಳಬೇಕಾಗಿದೆ. ನನಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದೆ” ಎಂದು ಹೇಳಿದರು.
ಸಂತ್ರಸ್ತೆಯೊಂದಿಗೆ ಇದ್ದ ಕಾರ್ಯಕರ್ತೆ ಯೋಗಿತಾ ಭಯನಾ, ಇದು ನ್ಯಾಯವೇ? ಬಲಿಪಶುವಿನ ತಾಯಿಯನ್ನು ಬೀದಿಗೆ ಎಸೆಯಲಾಗಿದೆ. ಚಲಿಸುವ ಬಸ್ಸಿನಿಂದ ಜಿಗಿಯುವಂತೆ ಒತ್ತಾಯಿಸಲಾಗಿದೆ. ಇದು ದೇಶವೇ ಅಥವಾ ಕಾಡೇ? ಎಂದು ಪ್ರಶ್ನಿಸಿದರು. ಬಸ್ಸಿನಲ್ಲಿದ್ದ ದೃಶ್ಯಗಳಲ್ಲಿ, ಸಿಆರ್‌ಪಿಎಫ್ ಸಿಬ್ಬಂದಿ ವೃದ್ಧ ಮಹಿಳೆಯನ್ನು ಮೊಣಕೈಯಿಂದ ತಳ್ಳುತ್ತಿರುವುದು, ಬಳಿಕ ಆಕೆ ಚಲಿಸುವ ಬಸ್ಸಿನಿಂದ ಜಿಗಿಯುವಂತಹ ದೃಶ್ಯಗಳು ಕಾಣಿಸಿಕೊಂಡಿವೆ. ಆ ವೇಳೆ ಸಂತ್ರಸ್ತೆ ಬಸ್ಸಿನೊಳಗೇ ಇದ್ದರು ಎಂದು ಆರೋಪಿಸಲಾಗಿದೆ.
ಅತ್ಯಾ*ಚಾರಿಗಳಿಗೆ ಜಾಮೀನು, ಬದುಕುಳಿದವರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು. ಇದು ಯಾವ ರೀತಿಯ ನ್ಯಾಯ? ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪ್ರಶ್ನಿಸಿದ್ದಾರೆ. ನಾವು ಕೇವಲ ಸತ್ತ ಆರ್ಥಿಕತೆಯಾಗುತ್ತಿಲ್ಲ, ಇಂತಹ ಅಮಾನವೀಯ ಘಟನೆಗಳಿಂದ ಸತ್ತ ಸಮಾಜವಾಗಿಯೂ ಬದಲಾಗುತ್ತಿದ್ದೇವೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಸಂತ್ರಸ್ತ ಕುಟುಂಬವು ರಾಹುಲ್ ಗಾಂಧಿ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ: ಇದೆಲ್ಲ ವಿಷಯಗಳಲ್ಲೂ ಸಹಾಯ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ನಾನು ನನ್ನ ವಕೀಲರನ್ನು ಭೇಟಿ ಮಾಡಲು ಕೂಗುತ್ತಿದ್ದೆ. ಕೊನೆಗೂ ಮೇಲಿಂದ ಆದೇಶ ಬಂದು ಕರೆದುಕೊಂಡು ಹೋದರು. ನನಗೆ ಬೇಕಾಗಿರುವುದು ಒಂದೇ – ನ್ಯಾಯ ಎಂದು ಸಂತ್ರಸ್ತೆ ಭಾವುಕರಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ