ವಕ್ಫ್‌ ಕಾನೂನಿನಲ್ಲಿ ಭೂ ಕಬಳಿಕೆಗೆ ಅವಕಾಶ ಕೊಟ್ಟಿತ್ತಾ ಕಾಂಗ್ರೆಸ್?‌ ವಕ್ಫ್‌ ಕಾನೂನು 1995 ಹೇಳೋದೇನು?

By Shashishekar P  |  First Published Aug 13, 2024, 9:17 AM IST

ವಕ್ಫ್‌ ಬೋರ್ಡ್‌ ಕಾನೂನು ಬದಲಿಸಲು ಹೊರಟ ಕೇಂದ್ರ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಅಲ್ಪ ಸಂಖ್ಯಾತದ ಕೆಲ ಸಮುದಾಯ ಮುಗಿ ಬಿದ್ದಿದೆ. ವಕ್ಫ್ ಬೋರ್ಡ್ ಕಾನೂನು ಜಾರಿಗೆ ಬಂದಿದ್ದು ಯಾಕೆ? ಈ ಕಾನೂನಿನಡಿ ಭೂಕಬಳಿಕೆಗೆ ಕಾಂಗ್ರೆಸ್ ಅವಕಾಶ ನೀಡಿತ್ತಾ?
 


ಶಶಿಶೇಖರ ಪಿ, ಸುವರ್ಣ ನ್ಯೂಸ್

ದೇಶದಲ್ಲಿ ಯಾರದ್ದೇ ಭೂಮಿ, ಕಟ್ಟಡವನ್ನ ನಮ್ಮದು ಅಂತ ಹಕ್ಕು ಸಾಧಿಸೋ ಅಧಿಕಾರ ಈ ದೇಶದ ವಕ್ಫ್‌ ಬೋರ್ಡ್‌ಗಳಿಗಿತ್ತು. ಇಂಥಾ ಅಧಿಕಾರವನ್ನ ವಕ್ಫ್‌ ಬೋರ್ಡ್‌ಗಳಿಗೆ ಕೊಟ್ಟಿದ್ದು 1995ರಲ್ಲಿದ್ದ ಕಾಂಗ್ರೆಸ್‌ ಸರ್ಕಾರ. 2013ರಲ್ಲಿದ್ದ ಯುಪಿಎ ಸರ್ಕಾರದಿಂದ ವಕ್ಫ್‌ ಬೋರ್ಡ್‌ಗಳಿಗೆ ಇನ್ನಷ್ಟು ಅಧಿಕಾರ ನೀಡಲಾಯ್ತು. ಯಾವುದೇ ಆಸ್ತಿ ತಮ್ಮದು ಅಂತ ವಕ್ಫ್‌ ಬೋರ್ಡ್‌ಗೆ ಅನ್ನಿಸಿದರೆ ಆ ಆಸ್ತಿಯನ್ನ ವಕ್ಫ್‌ ಆಸ್ತಿಯೆಂದು ರಿಜಿಸ್ಟರ್ ಮಾಡಿಸಿಕೊಳ್ಳುವ ಅಧಿಕಾರ ನೀಡಲಾಗಿತ್ತು. ನೆನಪಿರಲಿ ಇಂಥಾ ಯಾವ ಕಾನೂನು ಕಟ್ಟರ್‌ ಮುಸ್ಲಿಂ ದೇಶಗಳಲ್ಲಿಯೂ ಇಲ್ಲ. ಮುಸ್ಲಿಂ ವೋಟ್‌ ಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಲು ಈ ಕಾನೂನನ್ನ ತರಲಾಗಿತ್ತು. ಈಗ ಈ ಕಾನೂನನ್ನ ಬದಲಿಸಲು ಮೋದಿ ಸರ್ಕಾರ ಹೊರಟಿದೆ, ಸಹಜವಾಗಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ವಿರೋಧಿಸುತ್ತಿವೆ.

Tap to resize

Latest Videos

undefined

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಕ್ಫ್‌ ಕಾನೂನಿನ ಮುಂದೆ ಏನೇನೂ ಅಲ್ಲ. ಭೂ ಕಬಳಿಕೆ, ಒತ್ತುವರಿ ಮಾಡಲು ವಕ್ಫ್‌ ಬೋರ್ಡ್‌ಗಳಿಗೆ ಕಾನೂನು ಬದ್ಧ ಅಧಿಕಾರ ನೀಡಲಾಗಿತ್ತು. ಇದರ ಪರಿಣಾಮ ಆಗಿದ್ದೇನು..?  ದೇಶಾದ್ಯಂತ 2006ರಲ್ಲಿದ್ದ ವಕ್ಫ್‌ ಆಸ್ತಿ 1 ಲಕ್ಷದ 20 ಸಾವಿರ ಎಕರೆ. ಇದು 2009ರ ವೇಳೆಗೆ 4 ಲಕ್ಷ ಎಕರೆಗೆ ಏರಿಕೆಯಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ದೇಶದಲ್ಲಿರೋ ಒಟ್ಟಾರೆ ವಕ್ಫ್‌ ಭೂಮಿ 9 ಲಕ್ಷದ 40 ಸಾವಿರ ಎಕರೆ. ಕೇವಲ 18 ವರ್ಷಗಳಲ್ಲಿ 8 ಲಕ್ಷ ಎಕರೆಯಷ್ಟು ವಕ್ಫ್‌ ಆಸ್ತಿ ಹೆಚ್ಚಾಗಿತ್ತು. ಈ ದೇಶದಲ್ಲಿ ಅತಿಹೆಚ್ಚು ಭೂಮಿ ಹೊಂದಿರೋ ಸರ್ಕಾರೇತರ ಸಂಸ್ಥೆ ಅಂದ್ರೆ ಅದು ವಕ್ಫ್ ಬೋರ್ಡ್‌ಗಳು.‌ ದೇಶಾದ್ಯಂತ ಸೇನಾನೆಲೆ ಹೊಂದಿರೋ ಮಿಲಿಟರಿ ಬಳಿ ಇರೋ ಭೂಮಿ 18 ಲಕ್ಷ ಎಕರೆ. ದೇಶದುದ್ದಕ್ಕೂ ಇರೋ ರೈಲ್ವೇ ಇಲಾಖೆಯ ಆಸ್ತಿ 12 ಲಕ್ಷ ಎಕರೆ. ಸರ್ಕಾರದ ನೇರ ನಿಯಂತ್ರಣವೇ ಇಲ್ಲದ ವಕ್ಫ್‌ ಬೋರ್ಡ್‌ಗಳ ಆಸ್ತಿ 9.4 ಲಕ್ಷ ಎಕರೆ. ಇದು ಕೇವಲ ಭೂಮಿ ಒಡೆತನದ ವಿವರ. ಕಟ್ಟಡಗಳ ವಿಷಯಕ್ಕೆ ಬಂದ್ರೆ ಲೆಕ್ಕಕ್ಕೆ ಸಿಗದಷ್ಟು ಆಸ್ತಿಗಳಿವೆ.

ವಕ್ಫ್‌ ಬೋರ್ಡ್‌ಗಳ ಆಸ್ತಿ ಷೇರು ಮಾರುಕಟ್ಟೆಗಿಂತಲೂ ವೇಗವಾಗಿ ಹೆಚ್ಚಾಗ್ತಿರೋದಕ್ಕೆ ಕಾರಣ 1995ರಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ವಕ್ಫ್‌ ಕಾನೂನು. 1954ರಲ್ಲಿ ಜಾರಿಗೆ ಬಂದಿದ್ದ ವಕ್ಫ್‌ ಕಾನೂನನ್ನ 1995ರಲ್ಲಿ ಪಿ.ವಿ ನರಸಿಂಹರಾವ್‌ ಸರ್ಕಾರ ತಿದ್ದುಪಡಿ ಮಾಡ್ತು. ಬಾಬ್ರಿ ಮಸೀದಿ ಧ್ವಂಸಕ್ಕೆ ಅವಕಾಶ ಮಾಡಿಕೊಟ್ಟ ಆರೋಪ ಇತ್ತಲ್ಲ ಅವರ ಮೇಲೆ. ಆ ಆರೋಪದಿಂದ ಮುಕ್ತರಾಗೋದಕ್ಕೆ ಮುಸ್ಲಿಮರಿಗೆ ವಕ್ಫ್‌ ಕಾನೂನಿನ ಮೂಲಕ ಪರಮಾಧಿಕಾರ ನೀಡಿದ್ದರು.

ವಕ್ಫ್‌ ತಿದ್ದುಪಡಿ ಮಸೂದೆ ಜೆಪಿಸಿಗೆ 31 ಸದಸ್ಯರ ತಂಡ, ತೇಜಸ್ವಿ ಸೂರ್ಯ, ಡಾ. ವೀರೇಂದ್ರ ಹೆಗ್ಗಡೆ, ನಾಸಿರ್‌ ಹುಸೇನ್‌ಗೆ ಸ್ಥಾನ

1995ರ ವಕ್ಫ್‌ ಕಾನೂನಿನ ಸೆಕ್ಷನ್‌ 40(3) ರ ಪ್ರಕಾರ ವಕ್ಫ್ ಬೋರ್ಡ್‌ಗಳಿಗೆ ವಿಶೇಷ ಸ್ಥಾನಮಾನ ನೀಡಲಾಯ್ತು. ಯಾವುದೇ ಆಸ್ತಿ ವಕ್ಫ್‌ ಬೋರ್ಡ್‌ಗೆ ಸೇರಿದ್ದು ಅನ್ನಿಸಿದರೆ ಆ ಆಸ್ತಿಗಳ ಮೇಲೆ ಯಾವುದೇ ದಾಖಲೆ ಇಲ್ಲದಿದ್ದರೂ ಹಕ್ಕು ಸಾಧಿಸಬಹುದು. ತಮ್ಮದು ಅನ್ನಿಸಿದ ಭೂಮಿ ಬೇರೆಯವರಿಗೆ ಮಾರಾಟವಾಗದಂತೆ ತಡೆಯಲು ನೋಟಿಸ್‌ ನೀಡುವ ಅಧಿಕಾರ. ಯಾವುದೇ ಆಸ್ತಿ, ಭೂಮಿ ತನ್ನದು ಎಂದು ವಕ್ಫ್ ಬೋರ್ಡ್‌ಗೆ ಅನ್ನಿಸಿದರೆ ಈ ಕಾನೂನಿನ ಅಡಿಯಲ್ಲಿ ವಕ್ಫ್ ಆಸ್ತಿ ಎಂದು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಅಧಿಕಾರ ನೀಡಲಾಯ್ತು.  ಸೆಕ್ಷನ್ 54ರ ಪ್ರಕಾರ ಆಸ್ತಿ ಮೇಲೆ ವಕ್ಫ್ ಬೋರ್ಡ್ ಸಿ.ಇ.ಓ ತನಿಖೆ ಆರಂಭಿಸಿ ವಕ್ಫ್ ಟ್ರಿಬ್ಯುನಲ್ ಮೂಲಕ ಸ್ವಾಧೀನದಲ್ಲಿದ್ದವರನ್ನ ಅಲ್ಲಿಂದ ಒಕ್ಕಲೆಬ್ಬಿಸುವ ಅಧಿಕಾರ ನೀಡಲಾಯ್ತು. ವಕ್ಫ್ ಬೋರ್ಡ್ ಟ್ರಿಬ್ಯುನಲ್ ನಲ್ಲೇ ಕಾನೂನು ಪ್ರಕಾರ ಹೋರಾಟ ಮಾಡಬೇಕು. ಯಾವುದೇ ದಾಖಲೆಯಿಲ್ಲದಿದ್ದರೂ ಹಕ್ಕು ಸಾಧಿಸೋ ಅಧಿಕಾರ ವಕ್ಫ್‌ ಬೋರ್ಡ್‌ಗಳಿಗೆ ನೀಡಲಾಗಿತ್ತು. ಆದ್ರೆ ಭೂಮಿಯ ಮಾಲೀಕ ಇದು ತನ್ನದೇ ಆಸ್ತಿ ಅಂತ ಸಾಬೀತುಪಡಿಸಿಕೊಳ್ಳಲು ದಾಖಲೆ ತರಬೇಕು ಅನ್ನುತ್ತೆ ಈ ಕಾನೂನಿನ ಸೆಕ್ಷನ್‌ 85. ಇದೇ ಕಾನೂನಿನ ಸೆಕ್ಷನ್‌ 3ರ ಪ್ರಕಾರ ಆಸ್ತಿ ವಶಕ್ಕೆ ಪಡೆದಿದ್ದನ್ನ ದೇಶದ ಯಾವುದೇ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿರಲಿಲ್ಲ. ಸರ್ಕಾರ ಭೂಮಿ ವಶಪಡಿಸಿಕೊಂಡಿದ್ದನ್ನ ಕೋರ್ಟ್‌ನಲ್ಲಿ ಪ್ರಶ್ನಿಸೋ ಅಧಿಕಾರ ಇದೆ. ಆದ್ರೆ ವಕ್ಪ್‌ ಹೆಸರಲ್ಲಿ ಭೂಮಿ ಕಬಳಿಸಿದ್ದನ್ನ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿರಲಿಲ್ಲ.

ಈ ಕಾನೂನಿನ ಸದ್ಬಳಕೆ ಹೇಗಾಗ್ತಿದೆ ಅನ್ನೋದಕ್ಕೆ ಒಂದಿಷ್ಟು ಉದಾಹರಣೆಗಳಿವೆ. 2022ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 7 ಗ್ರಾಮದ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿತ್ತು. ತಿರುಚೆಂಡುರೈ ಗ್ರಾಮದಲ್ಲಿರೋ 1,500 ವರ್ಷಗಳ ಸುಂದರೇಶ್ವರ ದೇವಸ್ಥಾನಕ್ಕೆ ಸೇರಿದ 400 ಎಕರೆ ಭೂಮಿ ತನ್ನದು ಎಂದಿತ್ತು ತಮಿಳುನಾಡು ವಕ್ಫ್‌ ಬೋರ್ಡ್.‌ ವಿಪರ್ಯಾಸ ಅಂದ್ರೆ ಈ ದೇವಸ್ಥಾನ ನಿರ್ಮಾಣವಾದಾಗ ಸೌದಿ ಅರೇಬಿಯಾದಲ್ಲಿ ಇಸ್ಲಾಂ ಹುಟ್ಟೇ ಇರಲಿಲ್ಲ. 2021ರಲ್ಲಿ ಸೂರತ್‌ನ ಮುನಿಸಿಪಾಲಿಟಿ ಆಫೀಸ್‌ ತನಗೆ ಸೇರಿದ್ದು ಅಂದಿತ್ತು ಗುಜರಾತ್‌ನ ವಕ್ಫ್‌ ಬೋರ್ಡ್.‌ 2022ರಲ್ಲಿ ಗುಜರಾತ್ ಕರಾವಳಿಯ 2 ಸಣ್ಣ ದ್ವೀಪಗಳ ಮೇಲೆ ವಕ್ಫ್ ಬೋರ್ಡ್‌ ಹಕ್ಕು ಸಾಧಿಸಿತ್ತು. 2023ರ ಜನವರಿಯಲ್ಲಿ ತಮಿಳುನಾಡಿನ ರಾಣಿಪೇಟೆಯಲ್ಲಿ 50 ಎಕರೆ ಕೃಷಿ ಭೂಮಿ ತನ್ನದು ಎಂದು ನೋಟಿಸ್‌ ನೀಡಿತ್ತು ಅಲ್ಲಿನ ವಕ್ಫ್‌ ಬೋರ್ಡ್.‌ 2024ರ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಹಳ್ಳಿಯೊಂದರ ಪ್ರಾಚೀನ ಮಹಾದೇವ ದೇವಸ್ಥಾನಕ್ಕೆ ಸೇರಿದ ಆಸ್ತಿ ತನ್ನದು ಅಂದಿತ್ತು ಅಲ್ಲಿನ ವಕ್ಫ್‌ ಬೋರ್ಡ್.‌ ಇಷ್ಟೇ ಯಾಕೆ ಮಮ್ತಾಜ್‌ಗಾಗಿ ಶಹಜಹಾನ್‌ ಕಟ್ಟಿಸಿದ ಎಂದು ಹೇಳಲಾಗುವ ತಾಜ್‌ಮಹಲ್‌ ವಕ್ಫ್‌ ಆಸ್ತಿ ಎಂದಿತ್ತು ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಬೋರ್ಡ್. ಇಂಥಾ ಸಾವಿರಾರು ಆಸ್ತಿಗಳಿಗೆ ವಕ್ಫ್‌ ಬೋರ್ಡ್‌ಗಳು ತಮ್ಮದು ಎಂದು ಹಕ್ಕು ಮಂಡಿಸಿದ, ಕಬಳಿಕೆ ಮಾಡಿದ ಉದಾಹರಣೆಗಳಿವೆ.  

ಇದೇ ರೀತಿಯ ಅವಕಾಶ ಹಿಂದೂ ದತ್ತಿ ಕಾನೂನಿನಲ್ಲಿದ್ದಿದ್ದರೆ ಏನಾಗುತ್ತಿತ್ತು..? ಜಾತ್ಯಾತೀತ ವಿರೋಧಿ ಕಾನೂನು, ಕೋಮುವಾದಿ ಕಾನೂನು ಅಂತೆಲ್ಲ ಕರೆಯಲಾಗ್ತಿತ್ತು. ಸಂವಿಧಾನ ರಕ್ಷಣೆಯ ಗುತ್ತಿಗೆ ಪಡೆದವರಂತೆ ಮಾತಾಡುವವರು ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಈಗ ಈ ಕಾನೂನಿಗೆ 40ಕ್ಕೂ ಹೆಚ್ಚು ತಿದ್ದುಪಡಿ ಮಾಡೋದಕ್ಕೆ ಮೋದಿ ಸರ್ಕಾಆರ ಮುಂದಾಗ್ತಿದ್ದಂತೆ ಮತ್ತೆ ಸಂವಿಧಾನದ ಗುರಾಣಿಯಿಡಿದು ವಿರೋಧಿಸಲಾಗುತ್ತಿದೆ.
ಈಗ ಮೂಲ ವಿಷಯಕ್ಕೆ ಬರೋಣ. ವಕ್ಫ್‌ ಆಸ್ತಿ ಅಂದ್ರೆ ಏನು..? ಇಸ್ಲಾಂ ಪ್ರಕಾರ ವಕ್ಫ್ ಆಸ್ತಿ ಅಂದ್ರೆ ದೇವರಿಗೆ ಸೇರಿದ ಆಸ್ತಿ. ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಮತ್ತು ದಾನದ ಉದ್ದೇಶಕ್ಕೆ ದೇವರಿಗೆ ಸಮರ್ಪಣೆ ಮಾಡಿದ ಆಸ್ತಿ ಇದು. ಅಲ್ಲಾನಿಗೆ ಸೇರಿದ ಆಸ್ತಿ. ಇಸ್ಲಾಂ ಪ್ರಕಾರ ಒಂದು ಬಾರಿ ಅಲ್ಲಾನಿಗೆ ಸಮರ್ಪಣೆಯಾದ ಆಸ್ತಿ ಯಾವತ್ತಿಗೂ ಬದಲಾಗಲ್ಲ. ಈ ಆಸ್ತಿಗಳ ನಿರ್ವಹಣೆಯ ಅಧಿಕಾರ ರಾಜ್ಯ ವಕ್ಫ್ ವಕ್ಫ್‌ ಬೋರ್ಡ್‌ಗಳು ನೋಡಿಕೊಳ್ಳುತ್ತವೆ. ವಕ್ಫ್ ಆಸ್ತಿ ಮೂಲಕ ಮುಸ್ಲಿಮರ ಸಮಸ್ಯೆಗಳ ಪರಿಹಾರಕ್ಕೆ, ಬಡವರ ಕಲ್ಯಾಣಕ್ಕೆ, ಸಮಾಜ ಸೇವೆಗೆ, ಧಾರ್ಮಿಕ ಕಾರ್ಯಗಳಿಗೆ ಬಳಸಬೇಕು.

ನಿಜವಾಗಲೂ ವಕ್ಫ್‌ ಆಸ್ತಿ ಮೂಲಕ ಬಡ ಮುಸ್ಲಿಮರ ಕಲ್ಯಾಣ, ಧಾರ್ಮಿಕ ಕೆಲಸಗಳು ಆಗ್ತಿದೆಯಾ ಅಂತ ನೋಡಿದ್ರೆ, ಎಲ್ಲ ರಾಜ್ಯಗಳ ವಕ್ಫ್‌ ಬೋರ್ಡ್‌ಗಳಲ್ಲೂ ದುರಾಡಳಿತದ ದುರ್ವಾಸನೆಯೇ. ಇದಕ್ಕೆ ಕರ್ನಾಟಕದ ಒಂದು ಉದಾಹರಣೆಯೇ ಸಾಕು ಅನ್ನಿಸುತ್ತೆ. ಸದಾನಂದಗೌಡರ ಸರ್ಕಾರವಿದ್ದಾಗ 2012ರಲ್ಲಿ ವಕ್ಫ್‌ ಅಕ್ರಮದ ಬಗ್ಗೆ ತನಿಖೆ ಮಾಡಿ ಅನ್ವರ್‌ ಮಾಣಿಪ್ಪಾಡಿ ವರದಿ ಕೊಟ್ಟರು. ಆ ವರದಿ ಪ್ರಕಾರ ರಾಜ್ಯದಲ್ಲಿ 29 ಸಾವಿರ ವಕ್ಫ್‌ ಭೂಮಿಯನ್ನ ಮುಸ್ಲಿಂ ರಾಜಕಾರಣಿಗಳೇ ಕಬಳಿಸಿದ್ದರು. ಹಾಗೆ ಕಬಳಿಸಿದವರಲ್ಲಿ ಹೆಚ್ಚಿನವರು ಕಾಂಗ್ರೆಸ್‌ನವರು. 12 ವರ್ಷಗಳ ಹಿಂದೆ ಈ ಹಗರಣದ ಮೊತ್ತ 2.3 ಲಕ್ಷ ಕೋಟಿ. ಇಂಥಾ ಹಗರಣಗಳು ಪ್ರತಿ ರಾಜ್ಯದಲ್ಲೂ ನಡೆದ ಉದಾಹರಣೆಗಳಿವೆ. ಒಂದು ಬಾರಿ ಅಲ್ಲಾನಿಗೆ ಸಮರ್ಪಣೆಯಾದ ವಕ್ಫ್‌ ಆಸ್ತಿ ಎಂದಿಗೂ ಬದಲಾಗಲ್ಲ ಅಂತ ಉಪದೇಶ ಮಾಡುವವರು ಇದನ್ನೊಮ್ಮೆ ನೋಡಲಿ. ವಕ್ಫ್‌ ಆಸ್ತಿಯಲ್ಲಿ ಬಂದ ಆದಾಯವನ್ನ ಬಡ ಮುಸ್ಲಿಮರ ಕಲ್ಯಾಣಕ್ಕೆ ಬಳಸಬೇಕಾಗಿತ್ತು. ಆದ್ರೆ ಅದರಿಂದ ಕಲ್ಯಾಣವಾದವರು ಮುಸ್ಲಿಂ ರಾಜಕಾರಣಿಗಳು, ಪ್ರಭಾವಿಗಳು, ಶ್ರೀಮಂತರು.  

2006ರಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರ ಮುಸ್ಲಿಮರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಲು ಜಸ್ಟೀಸ್‌ ಸಾಚಾರ್‌ ಅವರ ನೇತೃತ್ವದಲ್ಲಿ ಕಮಿಟಿ ಮಾಡಿತ್ತು. ದೇಶಾದ್ಯಂತ ಅಧ್ಯಯನ ಮಾಡಿ 2007ರಲ್ಲಿ ಸಾಚಾರ್‌ ಕಮಿಟಿ ವರದಿ ಕೊಟ್ಟಿತ್ತು. ದೇಶದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ದಲಿತರಿಗಿಂತಲೂ ಹೀನಾಯವಾಗಿದೆ ಅಂದಿತ್ತು ಆ ರಿಪೋರ್ಟ್.‌ ವಕ್ಫ್‌ ಬೋರ್ಡ್‌ಗಳ ಆಡಳಿತ ಸುಧಾರಣೆಯಾಗಬೇಕು, ವಕ್ಫ್‌ ಬೋರ್ಡ್‌ ಆಡಳಿತಕ್ಕೆ ಮುಸ್ಲಿಮೇತರ ಎಕ್ಸ್‌ಪರ್ಟ್‌ಗಳು ಬರಬೇಕು. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ವಕ್ಫ್‌ ಬೋರ್ಡ್‌ಗಳ ನಿರ್ವಹಣಾ ಅಧಿಕಾರ ನೀಡಬೇಕು. ವಕ್ಫ್‌ ಬೋರ್ಡ್‌ನ ಹಣಕಾಸು ವಿವರ ಪ್ರತಿವರ್ಷ ಆಡಿಟ್‌ ಆಗಬೇಕು. ವಕ್ಫ್‌ ಆಸ್ತಿ ವಿವಾದಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕು. ವಕ್ಫ್‌ ಆಸ್ತಿಗಳಿಂದ ಬರುವ ಆದಾಯದಿಂದ ಬಡ ಮುಸ್ಲಿಮರಿಗೆ ನೆರವು ಸಿಗಬೇಕು ಅಂತ ರಿಪೋರ್ಟ್‌ ಕೊಟ್ಟಿತ್ತು ಸಾಚಾರ್‌ ಕಮಿಟಿ.

ಈಗ ಕೇಂದ್ರ ಸರ್ಕಾರ ವಕ್ಫ್‌ ಕಾನೂನಿಗೆ 40ಕ್ಕೂ ಹೆಚ್ಚು ತಿದ್ದುಪಡಿ ಮಾಡಲು ಹೊರಟಿದೆ. ಆಸ್ತಿ ರಿಜಿಸ್ಟ್ರೇಷನ್‌ ಮಾಡಲು ವಕ್ಫ್ ಬೋರ್ಡ್‌ಗಳಿಗಿದ್ದ ಪರಮಾಧಿಕಾರ, ಯಾವುದೇ ಆಸ್ತಿಯನ್ನ ವಕ್ಫ್ ಎಂದು ಘೋಷಿಸುವ ಅಧಿಕಾರಕ್ಕೆ ಕತ್ತರಿ ಹಾಕಲಾಗುತ್ತಿದೆ. ಯಾವುದೇ ಆಸ್ತಿಯನ್ನ ವಕ್ಫ್ ಆಸ್ತಿ ಎಂದು ಹಕ್ಕು ಸಾಧಿಸಲು ಇನ್ನು ಮುಂದೆ ಸಾಧ್ಯವಿಲ್ಲ. ವಕ್ಫ್ ಆಸ್ತಿ, ನಿರ್ವಹಣೆ, ಆಡಳಿತಕ್ಕೆ ಸಂಬಂಧಿಸಿದಂತೆ ಕೆಲ ಸುಧಾರಣಾ ಕ್ರಮ ತರಲಾಗ್ತಿದೆ. ವಕ್ಫ್ ಆಸ್ತಿ ಮೌಲ್ಯಮಾಪನಕ್ಕೆ ತಿದ್ದುಪಡಿ ಕಾನೂನಿನಲ್ಲಿ ಅವಕಾಶ ನೀಡಲಾಗಿದ್ದು, ವಕ್ಫ್ ಆಸ್ತಿಗಳ ಬಗ್ಗೆ ಕಡ್ಡಾಯವಾಗಿ ಡಿಸಿ ಕಚೇರಿಗೆ ದಾಖಲೆ ಸಲ್ಲಿಸಬೇಕು. ವಕ್ಫ್ ಆಸ್ತಿ ವಿವಾದಗಳನ್ನ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಜತೆಗೆ ವಕ್ಫ್ ಆಡಳಿತ ಮಂಡಳಿಗಳಲ್ಲಿ ಮಹಿಳೆಯರಿಗೆ ಕಡ್ಡಾಯ ಪ್ರಾತಿನಿಧ್ಯ ನೀಡಬೇಕು ಅನ್ನುವ ಬದಲಾವಣೆ ಮಾಡಲು ಹೊರಟಿದೆ. 2007ರಲ್ಲಿ ಸಾಚಾರ್‌ ಕಮಿಟಿ ಕೊಟ್ಟ ವರದಿಯ ಬಹುತೇಕ ಅಂಶಗಳು ಈಗಿನ ತಿದ್ದುಪಡಿ ಕಾನೂನಿನಲ್ಲಿವೆ.

ವಕ್ಫ್​ಗೆ ಮೋದಿ ಮಾಸ್ಟರ್​ ಸ್ಟ್ರೋಕ್, ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಮೈತ್ರಿಯ ವಿರೋಧ!

ಇಂತದ್ದೊಂದು ಕಾನೂನು 29 ವರ್ಷಗಳಿಂದ ಭಾರತದಲ್ಲಿದೆ. ಅದು ಯಾವುದೇ ಕಾರಣಕ್ಕೂ ಬದಲಾಗಬಾರದು ಅಂತ ವಾದಿಸುತ್ತಿಚವೆ ಕಾಂಗ್ರೆಸ್‌ ಮತ್ತು I.N.D.I.A ಮೈತ್ರಿ ಪಕ್ಷಗಳು. ಸರ್ಕಾರ ಮಾಡಿದ ಒಂದು ಕಾನೂನನ್ನ ಈ ದೇಶದ ಯಾವುದೇ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಅನ್ನೋದೇ ಅಸಾಂವಿಧಾನಿಕ. 1991ರಲ್ಲಿ ಪೂಜಾಸ್ಥಳಗಳ ಕಾನೂನು ತಂದು ಧಾರ್ಮಿಕ ಸ್ಥಳಗಳಲ್ಲಿ 1947ಕ್ಕೂ ಮೊದಲು ಯಾವ ಆಚರಣೆಯಿತ್ತೋ ಅದೇ ಪೂಜಾಪದ್ದತಿ ಮುಂದುವರಿಯಬೇಕು ಅನ್ನೋ ಕಾನೂನು ತಂದಿತ್ತು ಕಾಂಗ್ರೆಸ್‌. 1995ರಲ್ಲಿ ಅದೇ ಕಾಂಗ್ರೆಸ್‌ ಸರ್ಕಾರ ವಕ್ಫ್‌ ಕಾನೂನಿನ ಮೂಲಕ ಯಾರದ್ದೇ ಆಸ್ತಿ ಆಗಿದ್ದರೂ ಪರವಾಗಿಲ್ಲ ಅದು ನಿಮ್ಮದು ಅಂತ ಅನ್ನಿಸಿದರೆ ದಾಖಲೆಗಳಿಲ್ಲದಿದ್ದರೂ ಪರವಾಗಿಲ್ಲ ಕಬಳಿಸಬಹುದು ಅಂದಿತ್ತು. ವಕ್ಫ್‌ ಕಾನೂನು ಸಂವಿಧಾನ ಬದ್ಧವಾಗಿದ್ದರೆ ಎಲ್ಲ ಧರ್ಮಗಳಿಗೂ ಇಂತದ್ದೇ ಅಧಿಕಾರ ಕೊಟ್ಟುಬಿಡಲಿ. ಓಲೈಕೆ ರಾಜಕಾರಣದ ಪರಾಕಾಷ್ಠೆಗೆ ಇದಕ್ಕಿಂತಲೂ ಮತ್ತೊಂದು ಉದಾಹರಣೆ ಬೇಕಾ..?

click me!