ಲ್ಯಾಂಡಿಂಗ್ ವೇಳೆ ವಿಮಾನ ಬಿದ್ದು ಎರಡು ತುಂಡು, 20 ಜನ ಸಾವು| ಕಲ್ಲಿಕೋಟೆಯಲ್ಲಿ ಏರ್ ಇಂಡಿಯಾ ವಿಮಾನ ದುರಂತ| ಅತ್ಯಂತ ಅನುಭವಿ ಪೈಲಟ್ ಇದ್ರೂ ಅಪಘಾತ ಸಂಭವಿಸಿದ್ದು ಹೇಗೆ? ಏನಿದು ಟೇಬಲ್‌ಟಾಪ್ ರನ್‌ವೇ?
ಕಲ್ಲಿಕೋಟೆ(ಆ.08): ದುಬೈನಿಂದ 191 ಜನರನ್ನು ಕರೆ ತರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೇರಿದ ವಿಮಾನವೊಂದು ಶುಕ್ರವಾರ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು, ಒಂದು ಮಗು ಸೇರಿ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 123 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 25 ಜನರ ಸ್ಥಿತಿ ಗಂಭೀರವಾಗಿದೆ. ಇನ್ನು ಅಪಘಾತಕ್ಕೀಡಾದ ರಭಸಕ್ಕೆ ವಿಮಾನ ಎರಡು ಭಾಗವಾಗಿದ್ದು, ಇದು ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ನೆನಪನ್ನು ಮರುಕಳಿಸುವಂತೆ ಮಾಡಿದೆ. ಅದೃಷ್ಟವಶಾತ್ ವಿಮಾನಕ್ಕೆ ಬೆಂಕಿ ತಗುಲದ ಪರಿಣಾಮ ಅನೇಕ ಮಂದಿಯ ಪ್ರಾಣ ಉಳಿದಿದೆ.
ವಿಮಾನ ದುರಂತ ಸಾವಿನ ಸಂಖ್ಯೆ 12ಕ್ಕೆ, ಪಿಣರಾಯಿ ಜತೆ ಮಾತನಾಡಿದ ಮೋದಿ
2010ರಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 158 ಮಂದಿ ಬಲಿ ಪಡೆದ ವಿಮಾನ ದುರಂತದ ಬಳಿಕ ಇಂಥ ಟೇಬಲ್‌ಟಾಪ್ ರನ್‌ವೇ ಬಗ್ಗೆ ತಜ್ಞರ ತಂಡವೊಂದು ವರದಿ ತಯಾರಿಸಿತ್ತು. ಅದರಲ್ಲಿ ಕೇರಳದ ಕಲ್ಲಿಕೋಟೆ, ಮಿಜೋರಾಂನ ಲೆಂಗ್‌ಪ್ಯು ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ವೇಳೆ ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯದ ಬಗ್ಗೆ ಅದು ಪ್ರತಿಪಾದಿಸಿತ್ತು.
ಏರ್‌ಪೋರ್ಟ್ ನಿರ್ವಹಣೆ ಬಗ್ಗೆ ಆಕ್ಷೇಪ
ಸುರಕ್ಷತಾ ಕ್ರಮಗಳನ್ನು ಅನುಸರಿಸುವಲ್ಲಿ ವಿಫಲವಾಗಿದ್ದ ಕೇರಳದ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, 2019ರ ವೇಳೆ ವಿಮಾನ ನಿಲ್ದಾಣಗಳ ಸುರಕ್ಷತೆಯ ಪರಿಶೀಲನೆ ಬಳಿಕ, ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸುವಲ್ಲಿ ವಿಫಲವಾಗಿದ್ದ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ಶೋಕಾಸ್ ನೋಟಿಸ್ ರವಾನಿಸಿತ್ತು.
ಲ್ಯಾಂಡಿಂಗ್‌ಗೂ ಮುನ್ನ 2 ಸುತ್ತು ಹೊಡೆದಿದ್ದ ವಿಮಾನ
ನವದೆಹಲಿ: ವಿಮಾನ ಲ್ಯಾಂಡಿಂಗ್ ಮಾಡುವುದಕ್ಕೂ ಮುನ್ನ ವಿಮಾನ ಆಕಾಶದಲ್ಲಿ ಎರಡು ಬಾರಿ ಸುತ್ತು ಹೊಡೆದಿತ್ತು ಎಂದು ವಿಮಾನಗಳ ಸಂಚಾರದ ಮೇಲೆ ಕಣ್ಗಾವಲು ಇಡುವ ಫ್ಲೈಟ್‌ರಾಡಾರ್ ಸಂಸ್ಥೆ ಮಾಹಿತಿ ನೀಡಿದೆ. ಇದು ವಿಮಾನ ಇಳಿಸಲು ಪೈಲಟ್ ತೊಂದರೆ ಎದುರಿಸಿದ್ದನ್ನು ತೋರಿಸುತ್ತದೆ ಎನ್ನಲಾಗಿದೆ.
ಲ್ಯಾಂಡಿಂಗ್ ವೇಳೆ ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಕ್ರ್ಯಾಶ್!
ಏನಿದು ಟೇಬಲ್‌ಟಾಪ್ ರನ್‌ವೇ?
ಗುಡ್ಡ ಪ್ರದೇಶಗಳಲ್ಲಿ ಏರ್‌ಪೋರ್ಟ್ ಇದ್ದು, ಅದರ ರನ್‌ವೇನ ತುದಿಯಲ್ಲಿ ಕಂದಕ ಇದ್ದರೆ ಅಂಥ ರನ್‌ವೇಗಳನ್ನು ಟೇಬಲ್‌ಟಾಪ್ ಎನ್ನಲಾಗುತ್ತದೆ. ಇಲ್ಲಿ ವಿಮಾನ ಇಳಿಸುವುದು ಅತ್ಯಂತ ಸಾಹಸದ ಕೆಲಸ. ಸಣ್ಣ ಎಡವಟ್ಟು ಅಥವಾ ತಾಂತ್ರಿಕ ತೊಂದರೆಗಳು ಎದುರಾದಾಗ ಭಾರೀ ಅಪಾಯದ ಸಾಧ್ಯತೆ ಹೆಚ್ಚು.
ಮಂಗಳೂರು ರೀತಿ ದುರ್ಘಟನೆ
ಕಲ್ಲಿಕೋಟೆ ರನ್‌ವೇ ಕೂಡಾ ಮಂಗಳೂರಿನ ರೀತಿ ಟೇಬಲ್ ಟಾಪ್ ರನ್‌ವೇ ಹೊಂದಿದೆ. 2010ರಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್‌ವೇನಿಂದ ಜಾರಿ ಕಂದಕ್ಕೆ ಉರುಳಿ ಬಿದಿತ್ತು. ಆಗ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದ ಪರಿಣಾಮ 6 ವಿಮಾನ ಸಿಬ್ಬಂದಿ ಸೇರಿ 158 ಜನ ಸಾವನ್ನಪ್ಪಿದ್ದರು. 12 ಪ್ರಯಾಣಿಕರು ಮಾತ್ರವೇ ಬದುಕುಳಿದಿದ್ದರು. ಆದರೆ ಕಲ್ಲಿಕೋಟೆಯಲ್ಲಿ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳದ ಕಾರಣ ನೂರಾರು ಜನರ ಪ್ರಾಣ ಉಳಿದಿದೆ.
ವಿಮಾನಯಾನ ಕ್ಷೇತ್ರದಲ್ಲಿ 4 ಲಕ್ಷ ಜನರ ಉದ್ಯೋಗ ಡೋಲಾಯಮಾನ!
ಪೈಲಟ್ ವಸಂತ್ ಸಾಠೆ ಅತ್ಯಂತ ಅನುಭವಿ
ಅಪಘಾತಕ್ಕೊಳಗಾದ ವಿಮಾನವನ್ನು ಚಲಾಯಿಸುತ್ತಿದ್ದುದ್ದು ಭಾರತೀಯ ವಾಯುಪಡೆಯ ನಿವೃತ್ತ ಪೈಲಟ್ ದೀಪಕ್ ವಸಂತ್ ಸಾಠೆ. 1981ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಸಾಠೆ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2003ರಲ್ಲಿ ಸ್ವಾಡ್ರನ್ ಲೀಡರ್ ಆಗಿ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಬಳಿಕ ವಿಮಾನದ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ಸಾಠೆ 58ನೇ ರಾರಯಂಕ್ ಪಡೆದಿದ್ದರು. ಇವರು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಪೈಲಟ್ ತರಬೇತಿಯನ್ನೂ ನೀಡಿದ್ದರು. ದುರದೃಷ್ಟವಶಾತ್ ಅಪಘಾತದಲ್ಲಿ ದೀಪಕ್ ವಸಂತ್ ಕೂಡಾ ಸಾವನ್ನಪ್ಪಿದ್ದಾರೆ.