ಮೀಸಲಿಗೆ ಬೇಡಿಕೆ ಇಟ್ಟಿರುವ ಕ್ರೈಸ್ತ ಸಮುದಾಯದ ಚರ್ಚ್‌ಗಳ ಮುಖಂಡರು ಹಾಗೂ ಮೀಟಿಗಳ ವಿರುದ್ಧ ಸಿಡಿದೆದ್ದಿರುವ ಕುಕಿ ಸಮುದಾಯದ ಬುದ್ಧಿಜೀವಿಗಳ ಜತೆ ಮಾತುಕತೆ ನಡೆಸಿ, ಶಾಂತಿಗಾಗಿ ಅಮಿತ್ ಶಾ ಮನವಿ ಮಾಡಿದರು.
ಇಂಫಾಲ್ (ಮೇ 31, 2023): ಕಳೆದ 1 ತಿಂಗಳಿಂದ ಹಿಂಸೆಯ ದಳ್ಳುರಿಯಲ್ಲಿ ಬೇಯುತ್ತಿರುವ ಮಣಿಪುರದ ಕೆಲವು ಭಾಗಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನಿಡಿದ್ದಾರೆ. ಈ ವೇಳೆ ಅವರು ಕ್ರೈಸ್ತ ಸಮುದಾಯದ ಮುಖಂಡರು, ಉದ್ರಿಕ್ತ ಕುಕಿ ಸಮುದಾಯದ ನಾಯಕರು ಹಾಗೂ ನಾಗರಿಕ ಸಮಾಜದ ಗಣ್ಯರ ಜತೆ ಶಾಂತಿ ಮಾತುಕತೆ ನಡೆಸಿದ್ದಾರೆ.
ಜನಸಾಮಾನ್ಯರು ಕೂಡ ಶಾಂತಿಮಂತ್ರ ಪಠಣ ಮಾಡಿದ್ದು, ‘ಶಾಂತಿ ಸ್ಥಾಪನೆ ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದು ಅಮಿತ್ ಶಾ ಆಗಮನದ ವೇಳೆ ಘೋಷಣೆ ಕೂಗಿದ್ದಾರೆ.
ಅಮಿತ್ ಶಾ ಅವರು, ರಾಜ್ಯದಲ್ಲಿ ಹಿಂಸಾಚಾರದ ಕೇಂದ್ರ ಬಿಂದು ಆದ ಚುರಾಚಾಂದ್‌ಪುರಕ್ಕೆ ಮಂಗಳವಾರ ಭೇಟಿ ನೀಡಿದರು. ಈ ವೇಳೆ ಮೀಸಲಿಗೆ ಬೇಡಿಕೆ ಇಟ್ಟಿರುವ ಕ್ರೈಸ್ತ ಸಮುದಾಯದ ಚರ್ಚ್‌ಗಳ ಮುಖಂಡರು ಹಾಗೂ ಮೀಟಿಗಳ ವಿರುದ್ಧ ಸಿಡಿದೆದ್ದಿರುವ ಕುಕಿ ಸಮುದಾಯದ ಬುದ್ಧಿಜೀವಿಗಳ ಜತೆ ಮಾತುಕತೆ ನಡೆಸಿ, ಶಾಂತಿಗಾಗಿ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಮುಖಂಡರು, ಶಾಂತಿ ಸ್ಥಾಪನೆಗೆ ಶ್ರಮಿಸುವ ಭರವಸೆ ನೀಡಿದರು.
ಇದನ್ನು ಓದಿ: 4 ದಿನ ಮಣಿಪುರ ಪ್ರವಾಸದಲ್ಲಿ ಅಮಿತ್ ಶಾ: ಶಾಂತವಾಯ್ತು ಜನಾಂಗೀಯ ಸಂಘರ್ಷ
ಇದೇ ವೇಳೆ, 80ಕ್ಕೂ ಹೆಚ್ಚು ಜನರ ಬಲಿ ಪಡೆದ ಮಣಿಪುರ ಹಿಂಸಾಚಾರಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗದ ಘೋಷಣೆ ಮಾಡಿದೆ. ಈ ಹಣದಲ್ಲಿ ತಲಾ ಅರ್ಧ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸಲಿವೆ.
ಈ ನಡುವೆ, ವದಂತಿಗಳನ್ನು ತಪ್ಪಿಸುವ ಉದ್ದೇಶದಿಂದ ದೂರವಾಣಿ ಸಂಪರ್ಕ ಬಲಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ದುರ್ಗಮ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ಹಾಕಲು ನಿರ್ಧರಿಸಿದೆ. ಅಮಿತ್ ಶಾ ಬುಧವಾರ ಹಾಗೂ ಗುರುವಾರ ಕೂಡ ಮಣಿಪುರದಲ್ಲೇ ಇರಲಿದ್ದಾರೆ. ರಾಜ್ಯದಲ್ಲಿ ಮೀಟಿ ಸಮುದಾಯಕ್ಕೆ ಪರಿಶಿಷ್ಟ ವರ್ಗ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಕುಕಿ ಸಮುದಾಯ ನಡೆಸಿದ ಪ್ರತಿಭಟನೆ ವೇಳೆ ಹಿಂಸೆ ಏರ್ಪಟ್ಟಿತ್ತು.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!
ಇದನ್ನೂ ಓದಿ: Operation Weapon Recovery: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಂತಿ ಸ್ಥಾಪನೆಗೆ ಆಯುಧ ವಶಪಡಿಸಿಕೊಳ್ಳಲು ಮುಂದಾದ ಸೇನೆ