ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ

Published : May 22, 2026, 08:59 AM IST
Madrasa

ಸಾರಾಂಶ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನರಹಿತ ಮದರಸಾಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಶಾಲಾ-ಕಾಲೇಜುಗಳ ನಂತರ ಇದೀಗ ಮದರಸಾಗಳಿಗೂ ಈ ನಿಯಮ ವಿಸ್ತರಿಸಿದೆ.

ಕೋಲ್ಕತಾ (ಮೇ.22): ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿದ್ದ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಎಲ್ಲಾ ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದೆ. ವಂದೇಮಾತರಂನಲ್ಲಿ ಹಿಂದೂ ದೇವತೆಯ ಗುಣಗಾನ ಮಾಡಲಾಗಿದೆ. ಇದು ಏಕದೇವೋಪಾಸನೆಯ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂಬುದು ಮುಸ್ಲಿಂ ಸಂಘಟನೆಗಳ ವಾದ. ಅದರ ನಡುವೆಯೇ ಮದರಸಾ ಶಿಕ್ಷಣ ನಿರ್ದೆಶಾನಲಯವು ಈ ಬಗ್ಗೆ ಆದೇಶ ಹೊರಡಿಸಿದ್ದು, ‘ಮದರಸಾ ತರಗತಿಗಳು ಪ್ರಾರಂಭವಾಗುವ ಮೊದಲು ಪ್ರಾರ್ಥನೆಯ ಸಮಯದಲ್ಲಿ ಎಲ್ಲರೂ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ತಕ್ಷಣದಿಂದಲೇ ಆದೇಶ ಜಾರಿಗೆ ಬರಲಿದೆ’ ಎಂದಿದೆ.

ಸರ್ಕಾರದ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಅನುಮೋದಿತ ಶಿಶು ಶಿಕ್ಷಾ ಕೇಂದ್ರ ಮತ್ತು ಮಾಧ್ಯಮಿಕ ಶಿಕ್ಷಾ ಕೇಂದ್ರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳಿಗೆ ಅನ್ವಯಿಸುತ್ತದೆ.

ಎಲ್ಲಾ ಆರು ಚರಣಗಳ ಗಾಯನ ಕಡ್ಡಾಯ

ಮದರಸಾ ನಿರ್ದೇಶನಾಲಯ (Directorate of Madrasa) ಹೊರಡಿಸಿರುವ ನೂತನ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಸರ್ಕಾರಿ ಅನುದಾನಿತ (Aided) ಹಾಗೂ ಅನುದಾನರಹಿತ (Unaided) ಮದರಸಾಗಳಲ್ಲಿ ದಿನನಿತ್ಯ ತರಗತಿಗಳು ಆರಂಭವಾಗುವ ಮುನ್ನ 'ವಂದೇ ಮಾತರಂ' ಗೀತೆಯನ್ನು ಹಾಡುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಅತ್ಯಂತ ಮಹತ್ವದ ತೀರ್ಮಾನ ಇದಾಗಿದೆ.

ಕಳೆದ ವಾರವಷ್ಟೇ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಪ್ರಾರ್ಥನಾ ಸಭೆಯಲ್ಲಿ 'ವಂದೇ ಮಾತರಂ' ಗೀತೆಯ ಎಲ್ಲಾ ಆರು ಚರಣಗಳನ್ನು (Stanzas) ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಲಾಗಿತ್ತು.

ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ಹಳೆಯ ಆದೇಶಗಳನ್ನು ರದ್ದುಗೊಳಿಸಿ, ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳಲ್ಲಿ ದೈನಂದಿನ ತರಗತಿಗಳು ಅಥವಾ ಪ್ರಾರ್ಥನಾ ಸಭೆ ಆರಂಭವಾಗುವ ಮುನ್ನ ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಅನ್ನು ಹಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ" ಎಂದು ತಿಳಿಸಿದ್ದರು. ಈಗ ಇದೇ ಆದೇಶವನ್ನು ಮದರಸಾಗಳಿಗೂ ವಿಸ್ತರಿಸಲಾಗಿದೆ.

ರಾಷ್ಟ್ರಗೀತೆಗೆ ಸಮಾನ ಗೌರವ; ಮತ್ತೆ ಮುಂಚೂಣಿಗೆ ಬಂದ 'ವಂದೇ ಮಾತರಂ'

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ 'ವಂದೇ ಮಾತರಂ' ಒಂದು ಶಕ್ತಿಯುತ ಸಂಕೇತವಾಗಿತ್ತು. ನಂತರದ ದಿನಗಳಲ್ಲಿ ಇದು ರಾಷ್ಟ್ರೀಯತಾವಾದಿ ಚಳವಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಷಯ ರಾಜಕೀಯ ಮುಂಚೂಣಿಗೆ ಬಂದಿತ್ತು. ಪ್ರಮುಖ ಬೆಳವಣಿಗೆಯೊಂದರಲ್ಲಿ, ಕಳೆದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರವು 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆ 'ಜನ ಗಣ ಮನ' ಕ್ಕೆ ಇರುವಷ್ಟೇ ಸಮಾನ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲಾ ಕಾರ್ಯಕ್ರಮಗಳಲ್ಲಿ ಈ ಗೀತೆಯ ಸಂಪೂರ್ಣ ಆರು ಚರಣಗಳನ್ನು ಹಾಡುವುದು ಕಡ್ಡಾಯವಾಗಿತ್ತು. ಇದು ದೇಶದ ವಿವಿಧ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ವಿವಿಧ ರಾಜ್ಯಗಳಲ್ಲಿ ರಾಜಕೀಯ ಜಟಾಪಟಿ

ಇತ್ತೀಚಿನ ತಿಂಗಳುಗಳಲ್ಲಿ ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣದ ರಾಜ್ಯಗಳ ಪ್ರಮಾಣವಚನ ಸ್ವೀಕಾರ ಸಮಾರಂಭಗಳಲ್ಲೂ 'ವಂದೇ ಮಾತರಂ' ವಿಷಯವಾಗಿ ಭಾರಿ ರಾಜಕೀಯ ವಿವಾದಗಳು ಸೃಷ್ಟಿಯಾಗಿದ್ದವು.

ತಮಿಳುನಾಡು: ಚೆನ್ನೈನಲ್ಲಿ ನಡೆದ ಅಧಿಕೃತ ಸರ್ಕಾರಿ ಸಮಾರಂಭವೊಂದರಲ್ಲಿ ರಾಷ್ಟ್ರಗೀತೆಗಿಂತ ಮುಂಚಿತವಾಗಿ 'ವಂದೇ ಮಾತರಂ' ಗೀತೆಯ ಸಂಪೂರ್ಣ ಆವೃತ್ತಿಯನ್ನು ಪ್ಲೇ ಮಾಡಿದ್ದಕ್ಕಾಗಿ ಡಿಎಂಕೆ (DMK) ಪಕ್ಷವು ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ (ನಟ ಥಲಪತಿ ವಿಜಯ್) ಅವರನ್ನು ತೀವ್ರವಾಗಿ ಟೀಕಿಸಿತ್ತು.

ಕೇರಳ: ಕೇರಳದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ನುಡಿಸಿದ್ದಕ್ಕೆ ಎಡಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ, ಈ ಕಾರ್ಯಕ್ರಮದ ರೂಪರೇಷೆಯನ್ನು ರಾಜಭವನ (ರಾಜ್ಯಪಾಲರು) ನಿರ್ಧರಿಸಿದೆ ಎಂದು ಆಡಳಿತಾರೂಢ ಮೈತ್ರಿಕೂಟ ಸ್ಪಷ್ಟನೆ ನೀಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳು ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳನ್ನು ವಿರೋಧಿಸುತ್ತಿವೆ ಎಂದು ಆರೋಪಿಸಿತ್ತು.

ಈಗ ಪಶ್ಚಿಮ ಬಂಗಾಳ ಸರ್ಕಾರವು ಶಾಲೆಗಳ ಜೊತೆಗೆ ಮದರಸಾಗಳಿಗೂ ಈ ನಿಯಮವನ್ನು ವಿಸ್ತರಿಸಿರುವುದರಿಂದ, ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ಈ ರಾಜಕೀಯ ಮತ್ತು ಸಾಮಾಜಿಕ ಚರ್ಚೆ ದೇಶಮಟ್ಟದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೋವಧೆ ಈದ್‌ ಆಚರಣೆ ಅಥವಾ ಇಸ್ಲಾಂನ ಭಾಗವಲ್ಲ: ಕಲ್ಕತ್ತಾ ಹೈಕೋರ್ಟ್‌ ಆದೇಶ
2034ರವರೆಗೆ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಲ್ಲ: ಸಮೀಕ್ಷಾ ತಜ್ಞ | 70ರ ದಶಕದ ಕಾಂಗ್ರೆಸ್‌ನ ವರ್ಚಸ್ಸು ಈಗ ಬಿಜೆಪಿಗೆ!