
ಪಶ್ಚಿಮ ಬಂಗಾಳ: ಮಹಿಳೆಯೊಬ್ಬರು ಆಸ್ಪತ್ರೆಯೊಂದರ ಟಾಯ್ಲೆಟ್‌ನಲ್ಲಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ್ದು, ಈ ಮಗುವನ್ನು ನಾಯಿಯೊಂದು ಕಚ್ಚಿ ಹೊತ್ತುಕೊಂಡು ಹೋದಂತಹ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಾಯಿ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಜನ ಆಘಾತ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೀದಿ ನಾಯಿ ಅವಧಿಪೂರ್ವ ಜನಿಸಿದ ಮಗುವನ್ನು ಎತ್ತಿಕೊಂಡು ಹೋಗಿದೆ ಎಂದು ಗರ್ಭಿಣಿ ಮಹಿಳೆಯ ಸಂಬಂಧಿಯೊಬ್ಬರು ದೂರಿದ್ದಾರೆ. ಈ ಘಟನೆ ರಾಜ್ಯ ಸರ್ಕಾರ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಭದ್ರತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
ಘಟನೆ ಬಗ್ಗೆ ಕೇಂದ್ರದ ಮಾಜಿ ಸಚಿವೆ ಬಿಜೆಪಿ ನಾಯಕಿ ಪ್ರತಿಮಾ ಬೌಮಿಕ್ ಅವರು ಪ್ರತಿಕ್ರಿಯಿಸಿದ್ದು, ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೊನಮುಖಿಯಿಂದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇದು ಮಮತಾ ಬ್ಯಾನರ್ಜಿ ಅವರ ಜಾಗತಿಕ ಮಟ್ಟದ ಆರೋಗ್ಯ ನಾಯಕತ್ವದ ಕರಾಳ ವಾಸ್ತವನ್ನು ಎತ್ತಿ ತೋರಿಸುತ್ತಿದೆ. ಗರ್ಭಿಣಿಯೊಬ್ಬರು ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಯಾವುದೇ ವೈದ್ಯಕೀಯ ಸಹಾಯವಿಲ್ಲದೇ ಮಗುವಿಗೆ ಜನ್ಮ ನೀಡಿದ್ದು, ಬೀದಿನಾಯಿ ಮಗುವನ್ನು ಎತ್ತಿಕೊಂಡು ಹೋಗಿದೆ ಎಂದು ಬರೆದುಕೊಂಡಿರುವ ಅವರು ಜೊತೆಗೆ ನಾಯಿ ಮಗುವನ್ನು ಕಚ್ಚಿಕೊಂಡು ಹೋಗುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವಿಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ತೀವ್ರವಾದ ಹೆರಿಗೆ ನೋವಿನ ನಂತರ ಸ್ಥಳೀಯ ಮಹಿಳೆಯೊಬ್ಬರು ಬಾಂಕುರದ ಸೊನಮುಖಿಯಲ್ಲಿರುವ ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನವಂಬರ್ 18ರಂದು ಇವರು ಆಸ್ಪತ್ರೆಗೆ ದಾಖಲಾಗಿದ್ದು, ಆರು ತಿಂಗಳಷ್ಟೇ ತುಂಬಿದ್ದ ಅವಧಿ ಪೂರ್ಣಗೊಳ್ಳದ ಮಗುವಿಗೆ ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಜನ್ಮ ನೀಡಿದ್ದರು. ಈ ವೇಳೆ ಆಸ್ಪತ್ರೆಯ ಮೈದಾನದಲ್ಲೇ ಓಡಾಡುತ್ತಿದ್ದ ನಾಯಿಯೊಂದು ಮಗುವನ್ನು ಎತ್ತಿಕೊಂಡು ಹೋಗಿದೆ.
ಘಟನೆಯ ನಂತರ ಗರ್ಭಿಣಿ ಮಹಿಳೆಯನ್ನು ಬಿಷ್ಣುಪುರದ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಹಾಯಕ್ಕಾಗಿ ಹಲವು ಬಾರಿ ಕರೆದರೂ ಯಾವುದೇ ಆಸ್ಪತ್ರೆಯ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ಹಾಗೂ ಭದ್ರತೆ ಒದಗಿಸಬೇಕು ಎಂದು ವೈದ್ಯರುಗಳು ನಿರಂತರ ಪ್ರತಿಭಟನೆ ಮಾಡುತ್ತಿರುವುದರ ಮಧ್ಯೆಯೇ ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ. ಇದನ್ನು ಮೊದಲು ಆಗಸ್ಟ್ 9ರಂದು ಟ್ರೈನಿ ಪಿಜಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರನ್ನು ಅಲ್ಲಿನ ಆರ್ ಜಿ ಕಾರ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ