West Bengal Politics ಪಶ್ಚಿಮ ಬಂಗಾಳ... ರಾಜಕೀಯ ಎದುರಾಳಿಗಳನ್ನು ಸೋಲಿಸಬಾರದು, ಸಾಯಿಸಿಬಿಡಬೇಕು ಅನ್ನೋ ರಕ್ತಸಿಕ್ತ ರಾಜಕಾರಣದ ರಾಜ್ಯ. ಇಲ್ಲಿ ಪಕ್ಷಗಳು ಬದಲಾಗುತ್ತವೆ, ಸರ್ಕಾರಗಳು ಬದಲಾಗುತ್ತವೆ. ಆದ್ರೆ ಹಿಂಸೆಯ ರಾಜಕಾರಣ ಬದಲಾಗಲೇ ಇಲ್ಲ. ಬಂಗಾಳಿ ಅಸ್ಮಿತೆ, ವೈಭವದ ಇತಿಹಾಸ, ಶ್ರೀಮಂತ ಬೌದ್ಧಿಕ ಸಂಸ್ಕೃತಿ ಇವೆಲ್ಲವನ್ನೂ ಅಳಿಸಿ ಹಾಕಿದ್ದು 34 ವರ್ಷಗಳ ಕಮ್ಯುನಿಸ್ಟರ ರಕ್ತಸಿಕ್ತ ರಾಜಕಾರಣ. ಹಳ್ಳಿಯಿಂದ ಕೊಲ್ಕೊತ್ತಾ ಶಕ್ತಿ ಕೇಂದ್ರದವರೆಗೆ ಪಕ್ಷವೇ ಸರ್ಕಾರ, ಸರ್ಕಾರವೇ ಪಕ್ಷ ಅನ್ನೋ ಕೇಡರ್ ಸಂಸ್ಕೃತಿ ಹುಟ್ಟಿಕೊಂಡಾಗಲೇ ರಾಜಕೀಯ ದ್ವೇಷವೂ ಜತೆಯಲ್ಲೇ ಬಂತು. ಯಾರು ಯಾರಿಗೆ ಮತ ಹಾಕಬೇಕು ಅನ್ನೋದನ್ನ ಜನ ತೀರ್ಮಾನಿಸುವಂತಿರಲಿಲ್ಲ, ಪಕ್ಷ ತೀರ್ಮಾನಿಸುತ್ತಿತ್ತು. ಒಂದಿಡೀ ತಲೆಮಾರಿನಷ್ಟು ಅವಧಿ ಆಳಿದ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸೆಗೆ ಬುನಾದಿ ಹಾಕಿಬಿಟ್ಟವು.
ಹಳ್ಳಿಗಳಲ್ಲಿ ಅಕ್ಕ ಪಕ್ಕದ ಮನೆಗಳಿಂದ ಕೊಲ್ಕೊತ್ತಾದ ಬೀದಿಗಳವರೆಗೆ ರಾಜಕೀಯ ವಿರೋಧಿಗಳನ್ನ ಹಿಂಸಾತ್ಮಕವಾಗಿ ಹತ್ತಿಕ್ಕುವ ಸಂಸ್ಕೃತಿ. ಇದೆಲ್ಲವನ್ನೂ ಎಡಪಕ್ಷಗಳು ಮಾಡಿದ್ದು ನಿರಂತರವಾಗಿ ಅಧಿಕಾರದಲ್ಲೇ ಇರಬೇಕೆನ್ನುವ ಸರ್ವಾಧಿಕಾರಿ ಮನಸ್ಥಿತಿಯ ಕಾರಣದಿಂದ. 34 ವರ್ಷಗಳ ಕಮ್ಯುನಿಸ್ಟರ ಆಡಳಿತದಲ್ಲಿ 20 ಸಾವಿರಕ್ಕೂ ಮೀರಿದ ರಾಜಕೀಯ ಹತ್ಯೆಗಳು, ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ಅಂದ್ರೆ ಕರ್ನಾಟಕದಲ್ಲಿ ಕುಳಿತು ಅಲ್ಲಿ ನಡೆದ ದುರಾಡಳಿತವನ್ನು ಅಂದಾಜು ಮಾಡಲು ಸಾಧ್ಯವೇ ಇಲ್ಲ.
ಇಂಥಾ ರಕ್ತ ರಾಜಕಾರಣದ ಮಧ್ಯೆ ಹುಟ್ಟಿಕೊಂಡ ಭರವಸೆಯೇ ಮಮತಾ ಬ್ಯಾನರ್ಜಿ. ಎಡಪಕ್ಷಗಳ ಹಿಂಸೆ ರಾಜಕಾರಣವನ್ನು ಮೆಟ್ಟಿ ನಿಂತು ಅಧಿಕಾರಕ್ಕೆ ಬಂದ ಮಮತಾ, ತನ್ನ ಅಧಿಕಾರ ಉಳಿಸಿಕೊಳ್ಳಲು ಅದೇ ಹಿಂಸೆ ರಾಜಕಾರಣವನ್ನೇ ಅಪ್ಪಿಕೊಂಡರು. ಬಂಗಾಳದ ಟಿಎಂಸಿಯಲ್ಲಿ ಕಾರ್ಯಕರ್ತರ ಸಂಖ್ಯೆ ಎಷ್ಟಿತ್ತೋ ಗೊತ್ತಿಲ್ಲ, ಆದ್ರೆ ಗೂಂಡಾಗಳ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. 2018ರ ಪಂಚಾಯ್ತಿ ಚುನಾವಣಾ ಹಿಂಸಾಚಾರ, 2021ರ ಚುನಾವಣೋತ್ತರ ಹಿಂಸಾಚಾರ, 2023ರ ಪಂಚಾಯ್ತಿ ಚುನಾವಣೋತ್ತರ ಹಿಂಸಾಚಾರ. ವಿರೋದ ಪಕ್ಷಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು, ರಾಜಕೀಯ ವಿರೋಧಿಗಳ ಮನೆಗೆ ನುಗ್ಗಿ ಟಿಎಂಸಿಗೆ ಮತ ಹಾಕುವಂತೆ ಬೆದರಿಸುವುದು ಬಂಗಾಳದಲ್ಲಿ ಸರ್ವೇ ಸಾಮಾನ್ಯವಾಯ್ತು. ಹಳ್ಳಿಗಳಲ್ಲಿ ಟಿಎಂಸಿಯನ್ನು ರಾಜಕೀಯವಾಗಿ ವಿರೋಧಿಸುವವರು ಒಂದೋ ಊರು ಬಿಡಬೇಕು, ಇಲ್ಲವೇ ಟಿಎಂಸಿಗೆ ಮತ ಹಾಕಬೇಕು ಅನ್ನೋ ಅಪಾಯಕಾರಿ ಸ್ಥಿತಿ ನಿರ್ಮಿಸಲಾಯ್ತು. ಟಿಎಂಸಿಯನ್ನು ವಿರೋಧಿಸುವವರನ್ನ ಸಿಕ್ಕ ಸಿಕ್ಕಲ್ಲಿ ಬಡಿಯಲಾಯ್ತು, ಸುಳ್ಳು ಕೇಸ್ ಜಡಿದು ಜೈಲಿಗಟ್ಟಲಾಯ್ತು. ಪ್ರತಿರೋಧಿಸಿದವರನ್ನ ಮುಗಿಸೇ ಬಿಡುವುದು, ಆ ಮನೆಗಳ ಹೆಣ್ಣು ಮಕ್ಕಳನ್ನ ಹುರಿದು ಮುಕ್ಕಿ ಬಿಡುವುದು... ಮಮತಾ ವಿರೋಧಿಸಿ ಬರೆದ ಪತ್ರಕರ್ತರನ್ನು ಬಿಟ್ಟೂ ಬಿಡದೇ ಕಾಡಲಾಯ್ತು.
ಮಮತಾ ಆಡಳಿತದಲ್ಲಿ 300ಕ್ಕೂ ಹೆಚ್ಚು ರಾಜಕೀಯ ಹತ್ಯೆಗಳು ನಡೆದ್ರೆ, ಲೆಕ್ಕಕ್ಕೆ ಸಿಗದಷ್ಟು ಅತ್ಯಾಚಾರಗಳಾದವು. ಎಷ್ಟೋ ಹೆಣ್ಣು ಮಕ್ಕಳು ಮರ್ಯಾದೆ ಹೋಗುತ್ತೆ ಅಂತ ಪೊಲೀಸ್ ಸ್ಟೇಷನ್ ಮೆಟ್ಟಿಲೂ ಹತ್ತಲಿಲ್ಲ. ದೂರು ಕೊಡಲು ಬಂದರೆ ಸುರಕ್ಷಿತವಾಗಿ ವಾಪಸ್ ಹೋಗ್ತೀವಿ ಅನ್ನೋ ನಂಬಿಕೆಯೂ ಅವರಿಗಿರಲಿಲ್ಲ.
2021ರವರೆಗಿನ ಟಿಎಂಸಿಯ ರಕ್ತ ರಾಜಕಾರಣ ಒಂದು ಹಂತದ್ದಾದ್ರೆ, ಆ ನಂತರದ್ದು ಇನ್ನೂ ಘೋರ. ಹಿಡಿ ಹಿಡಿಯಾಗಿ ಮತಗಳು ಸಿಗುತ್ತೆ ಅನ್ನುವ ಕಾರಣಕ್ಕೆ ನಡೆದ ಅತಿಯಾದ ಮುಸ್ಲಿಂ ಓಲೈಕೆ ರಾಜಕಾರಣ, ಅಕ್ರಮ ಬಾಂಗ್ಲಾ ವಲಸಿಗರಿಗೆ ರೆಡ್ ಕಾರ್ಪೆಟ್ ಸ್ವಾಗತ, ಬಿಜೆಪಿ ಬೆಂಬಲಿಸಿದರೂ ಅನ್ನೋ ಕಾರಣಕ್ಕೆ ನಡೆದ ಹಿಂದೂಗಳ ಟಾರ್ಗೆಟ್, ಟಿಎಂಸಿ ಗೂಂಡಾಗಳ ಮೂಲಕ ನಡೆದ ರೌಡಿ ರಾಜ್ಯ. ಬಂಗಾಳಿಗಳ ತಾಳ್ಮೆಯ ಕಟ್ಟೆ ಒಡೆಯಲು 15 ವರ್ಷ ಬೇಕಾಯ್ತು. ಅದರ ಪರಿಣಾಮ 2011ರಲ್ಲಿ ಒಂದೂ ಸ್ಥಾನ ಗೆಲ್ಲಲಾಗದ ಬಿಜೆಪಿ, 2016ರಲ್ಲಿ 3 ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ, ಇವತ್ತು 77 ರಿಂದ 206 ಸ್ಥಾನ ಗೆಲ್ಲುವ ಮಟ್ಟಕ್ಕೆ ಬಂದಿದೆ.
ಬಂಗಾಳದಲ್ಲಿ ಕಮ್ಯುನಿಸ್ಟರು ಆರಂಭಿಸಿದ, ಟಿಎಂಸಿ ಮುಂದುವರಿಸಿಕೊಂಡು ಬಂದ ರಕ್ತದ ರಾಜಕಾರಣವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗದಿರಲಿ. ಅದೇ ಬಿಜೆಪಿ ಬಂಗಾಳಕ್ಕೆ ಮಾಡೋ ಅತಿದೊಡ್ಡ ಒಳ್ಳೆ ಕೆಲಸ. ಯಾಕಂದ್ರೆ ಎಡಪಕ್ಷಗಳು, ಟಿಎಂಸಿ ಕ್ಯಾಡರ್ ನಲ್ಲಿದ್ದವರೇ ಇವತ್ತು ಬಿಜೆಪಿ ಬಾವುಟ ಹಾರಿಸುತ್ತಿದ್ದಾರೆ. ಪಕ್ಷಗಳು, ಸರ್ಕಾರಗಳು ಬದಲಾದ್ರೂ ಹಿಂಸೆ ಖಾಯಂ ಅನ್ನೋ ವಿಷದ ರಾಜಕೀಯ ಸಂಸ್ಕೃತಿ ಇಲ್ಲಿಗೇ ಕೊನೆಯಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ