ತಮಿಳುನಾಡಿಗೆ ವಿಜಯ್ ಹೊಸ ‘ಜನ’ನಾಯಕ; ದ್ರಾವಿಡ ನಾಡಿಗೆ ಸಿಎಂ ಆಗ್ತಾರಾ ದಳಪತಿ?

Published : May 05, 2026, 05:23 AM IST
Thalapathy Vijay

ಸಾರಾಂಶ

ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು 60 ವರ್ಷಗಳ ದ್ರಾವಿಡ ಪಕ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಸರ್ಕಾರ ರಚನೆಗೆ ವಿಜಯ್ ಮೈತ್ರಿ ಯತ್ನ ನಡೆಸಿದ್ದಾರೆ.

ಚೆನ್ನೈ: ಸತತ 60 ವರ್ಷಗಳಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ, ಅಣ್ಣಾಡಿಎಂಕೆ ಪಕ್ಷಗಳ ರಾಜಕೀಯದ ಅಂಗಣವಾಗಿದ್ದ ತಮಿಳುನಾಡಿನಲ್ಲಿ ಹೊಸ ನಾಯಕನ ಉದಯವಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರದ ಅಬ್ಬರ, ವಿಪಕ್ಷ ಅಣ್ಣಾಡಿಎಂಕೆ ಭಾರೀ ಪ್ರತಿಸ್ಪರ್ಧೆಯನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿರುವ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌, ತಮ್ಮ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿ ಅಧಿಕಾರದತ್ತ ಹೆಜ್ಜೆ ಹಾಕಿದ್ದಾರೆ.

ಆದರೆ 234 ಸ್ಥಾನಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳು ಯಾವುದೇ ಪಕ್ಷಕ್ಕೂ ಸಿಗದೇ ಇರುವ ಕಾರಣ ಅತಂತ್ರ ವಿಧಾನಸಭೆ ರಚನೆಯಾಗಿದೆ. ಆದಾಗ್ಯೂ ಕಾಂಗ್ರೆಸ್‌ ಹಾಗೂ ಸಣ್ಣಪುಟ್ಟ ಪಕ್ಷಗಳ ಜತೆ ಅವರು ಸಂಪರ್ಕದಲ್ಲಿದ್ದು, ಬಹುಮತಕ್ಕೆ ಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಯಾರ ಬೆಂಬಲ ಸಿಗುತ್ತೆ?

ಹಾಲಿ ಅಧಿಕಾರದಲ್ಲಿದ್ದ ಡಿಎಂಕೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಆದಿಯಾಗಿ ಹಲವು ಸಚಿವರು ಆಘಾತಕಾರಿ ಸೋಲು ಕಂಡಿದ್ದಾರೆ. ಪಕ್ಷ 2ನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಅಧಿಕಾರಕ್ಕೆ ಮರಳುವ ಆಶಯದಲ್ಲಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಮೂರನೇ ಸ್ಥಾನ ತಲುಪಿದೆ. ಸರ್ಕಾರ ರಚನೆಗಾಗಿ ವಿಜಯ್‌, ಚುನಾವಣೆ ವೇಳೆತ ತಾವು ಬಹುವಾಗಿ ಟೀಕಿಸಿದ್ದ ಡಿಎಂಕೆ ಬೆಂಬಲ ಪಡೆಯುತ್ತಾರೋ ಅಥವಾ ಸೈದ್ಧಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿರುವ ಬಿಜೆಪಿ ಜೊತೆ ನಂಟು ಹೊಂದಿರುವ ಅಣ್ಣಾಡಿಎಂಕೆ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಎಂಬ ಕುತೂಹಲ ಇದೆ.

ಆಧಿಪತ್ಯ ಅಂತ್ಯ: ಕಾಂಗ್ರೆಸ್‌ ಸರ್ಕಾರ ಪತನಗೊಳಿಸಿ 1967ರಲ್ಲಿ ಸಿ.ಎನ್‌.ಅಣ್ಣಾದೊರೈ ನಾಯಕತ್ವದ ಡಿಎಂಕೆ ಅಧಿಕಾರಕ್ಕೆ ಬರುವುದರೊಂದಿಗೆ ತಮಿಳ್ನಾಡಲ್ಲಿ ಕೇವಲ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳದ್ದೇ ಆಧಿಪತ್ಯವಾಗಿತ್ತು. ಉಳಿದ ಪಕ್ಷಗಳಿಗೇನಿದ್ದರೂ ಮೈತ್ರಿಪಕ್ಷದ ಭಾಗ್ಯವಾಗಿತ್ತು. ಆದರೆ ತಮ್ಮನ್ನು ತಾವು ಮಾಡ್ರನ್‌ ದ್ರಾವಿಡ ನಾಯಕ ಎಂದು ಬಿಂಬಿಸಿಕೊಂಡು 2 ವರ್ಷಗಳ ಹಿಂದಷ್ಟೇ ರಾಜಕೀಯ ಪಕ್ಷ ಕಟ್ಟಿದ್ದ ವಿಜಯ್‌, ಯಾರೂ ಊಹಿಸದ ಸಾಧನೆ ಮಾಡಿ ಎಲ್ಲರನ್ನೂ ಅಚ್ಚರಿಗೆ ಗುರಿ ಮಾಡಿದ್ದಾರೆ.

ಇತರೆ ಪಕ್ಷಗಳಂತೆ ಹಲವು ಗ್ಯಾರಂಟಿಗಳು, ಮಹಿಳೆಯರು, ಯುವಸಮುದಾಯ ಗುರಿಯಾಗಿಸಿಕೊಂಡು ಘೋಷಿಸಿದ ಹಲವು ಚುನಾವಣಾ ಪ್ರಣಾಳಿಕೆಗಳ ಜೊತೆಗೆ, ಕ್ರೈಸ್ತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯ, ಮಹಿಳೆಯರು, ಯುವಸಮೂಹದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ವಿಜಯ್‌ಗೆ ಅಧಿಕಾರ ತಂದುಕೊಟ್ಟಿದೆ. ಇದರ ಜೊತೆಗೆ ಡಿಎಂಕೆ ಮತ್ತು ಅಣ್ಣಾಡಿಎಂಕೆ ಹೊರತಾದ, ಆದರೆ ಸ್ಥಳಿಯವಾದುದೇ ಆದಂತ ಪರ್ಯಾಯ ನಾಯಕತ್ವಕ್ಕೆ ಹುಡುಕಾಡುತ್ತಿದ್ದ ಜನರಿಗೆ ವಿಜಯ್‌ ಸೂಕ್ತವಾಗಿ ಕಂಡಿದ್ದು ಟಿವಿಕೆಗೆ ಗೆಲುವು ತಂದುಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.

ಇನ್ನೊಂದೆಡೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹೊಸತನವಿಲ್ಲದ ಆಡಳಿತ, ಆಡಳಿತವಿರೋಧಿ ಅಲೆಗೆ ಸಿಕ್ಕ ಡಿಎಂಕೆ ಆಘಾತಕಾರಿ ಸೋಲುಕಂಡಿದೆ. ಬಹುತೇಕ ಸಮೀಕ್ಷೆಗಳು ಮರಳಿ ಡಿಎಂಕೆ ಗೆಲುವಿನ ಸುಳಿವು ನೀಡಿದ್ದ ಕಾರಣ, ಪಕ್ಷ ಸಂಭ್ರಮಾಚರಣೆಗೂ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸೋಮವಾರ ಬೆಳಗ್ಗೆ ಕೆಲ ಹೊತ್ತು ಮತ ಎಣಿಕೆ ವೇಳೆ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಮತ್ತೆ ಕಂಡುಬಂದಿದ್ದು ವಿಜಯ್‌ ನಾಗಾಲೋಟ. ಅದನ್ನು ಕಟ್ಟಿಹಾಕಲು ಡಿಎಂಕೆ ಪೂರ್ಣ ವಿಫಲವಾಯ್ತು.

ಇನ್ನೊಂದೆಡೆ ಡಿಎಂಕೆಗೆ ಪರ್ಯಾಯವೆಂದೇ ಬಿಂಬಿತ ಅಣ್ಣಾಡಿಎಂಕೆ ತನ್ನ ಆಂತರಿಕ ಬಿಕ್ಕಟ್ಟು, ಪ್ರಭಾವಿ ನಾಯಕತ್ವದ ಕೊರತೆ ಮತ್ತು ವಿಜಯ್‌ರ ಅಲೆಯ ಅಬ್ಬರಕ್ಕೆ ಸಿಕ್ಕಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು.

ಮೂರೂ ಪಕ್ಷಗಳು ಭರ್ಜರಿ ಗ್ಯಾರಂಟಿ ಘೋಷಣೆ ಮೂಲಕ ಜನರ ಗಮನ ಸೆಳೆಯುವ ಯತ್ನ ಮಾಡಿದ್ದವಾದರೂ, ಪರ್ಯಾಯ, ಹೊಸತನ, ‘ಜನ’ ನಾಯಕತ್ವದ ಹುಡುಕಾಟ ವಿಜಯ್‌ ಅವರಿಗೆ ಜಯದ ಮಾಲೆ ಹಾಕಿದೆ.

ದಳಪತಿ ಸಿಎಂ ಆಗೋದು ಫಿಕ್ಸ್‌? 

ಸ್ಥಾಪನೆಯಾದ ಎರಡೇ ವರ್ಷಗಳಲ್ಲಿ ನಟ ವಿಜಯ್‌ ಅವರ ಟಿವಿಕೆ ಆಡಳಿತಾರೂಢ ಡಿಎಂಕೆಯನ್ನು ಧೂಳಿಪಟ ಮಾಡಿದೆ. ಈ ಮೂಲಕ ಚುನಾವಣೆಗೆ ಸ್ಪರ್ಧಿಸಿದ ಮೊದಲ ಬಾರಿಗೇ ವಿಜಯ್‌ ತಮಿಳುನಾಡಿದ ಮುಖ್ಯಮಂತ್ರಿಯಾಗುವತ್ತ ದಾಪುಗಾಲು ಇಟ್ಟಿದ್ದಾರೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 118 ಸ್ಥಾನಗಳು ಬೇಕು. ಟಿವಿಕೆ ಇದಕ್ಕೆ ಹತ್ತಿರದಲ್ಲಿದೆ. ಕಾಂಗ್ರೆಸ್‌ ಪಕ್ಷ ಹಾಗೂ ಇತರ ಸಣ್ಣಪುಟ್ಟ ಪಕ್ಷಗಳ ಜತೆ ಅವರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೂಕ್ತ ಮೈತ್ರಿಯೊಂದಿಗೆ ಸರ್ಕಾರ ರಚಿಸಿ, ವಿಜಯ್‌ ಸಿಎಂ ಕುರ್ಚಿಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಶಾ ಜೋಡಿ ಬಂಗಾಳ ಗೆದ್ದಿದ್ದು ಹೇಗೆ? ಜನಸಂಘದ ಸಂಸ್ಥಾಪಕರ ತವರಲ್ಲಿ ಕಡೆಗೂ ಅರಳಿತು ಕಮಲ
India Latest News: ತಮಿಳುನಾಡಿಗೆ ವಿಜಯ್ ಹೊಸ ‘ಜನ’ನಾಯಕ; ದ್ರಾವಿಡ ನಾಡಿಗೆ ಸಿಎಂ ಆಗ್ತಾರಾ ದಳಪತಿ?