ಪಶ್ಚಿಮ ಬಂಗಾಳ: ಚುನಾವಣಾ ಕರ್ತವ್ಯದಲ್ಲಿದ್ದ ಯೋಧ ಶೌಚಾಲಯದಲ್ಲಿ ಶವವಾಗಿ ಪತ್ತೆ

By Anusha KbFirst Published Apr 19, 2024, 3:22 PM IST
Highlights

ಚುನಾವಣಾ ಕರ್ತವ್ಯದಲ್ಲಿದ್ದ ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿಯೊಬ್ಬರು ಚುನಾವಣಾ ಕೇಂದ್ರದ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಮಥಭಂಗ ಚುನಾವಣಾ ಕೇಂದ್ರದಲ್ಲಿ ನಡೆದಿದೆ. 

ಕೂಚ್‌ಬೆಹರ್‌: ಚುನಾವಣಾ ಕರ್ತವ್ಯದಲ್ಲಿದ್ದ ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿಯೊಬ್ಬರು ಚುನಾವಣಾ ಕೇಂದ್ರದ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಮಥಭಂಗ ಚುನಾವಣಾ ಕೇಂದ್ರದಲ್ಲಿ ನಡೆದಿದೆ. ಶೌಚಾಲಯದಲ್ಲಿ ಕಾಲು ಜಾರಿ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಮಥಭಂಗ ಚುನಾವಣಾ ಕೇಂದ್ರದಲ್ಲಿ ಇಂದು ಮೊದಲ ಹಂತದಲ್ಲಿ ಚುನಾವಣೆ ನಿಗದಿಯಾಗಿತ್ತು. ಆದರೆ ಮತದಾನ ಆರಂಭವಾಗುವುದಕ್ಕೆ ಕೆಲವೇ ನಿಮಿಷಗಳಿರುವಾಗ ಸಿಆರ್‌ಪಿಎಫ್ ಸಿಬ್ಬಂದಿ ಉಸಿರು ಚೆಲ್ಲಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಣೆ ಮಾಡಿದ್ದಾರೆ. 

ವಾಶ್‌ರೂಮ್‌ನಲ್ಲಿ ಬಿದ್ದ ವೇಳೆ ಅವರ ತಲೆಗೆ ಗಾಯವಾಗಿತ್ತು ಎಂದು ಆಸ್ಪತ್ರೆಯ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಸಾವಿಗೆ ಯಾವುದೇ  ಅಪರಾಧದ ಆಯಾಮ ಇಲ್ಲ ಎಂದು ವರದಿಯಾಗಿದೆ. ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಂಶ ತಿಳಿದು ಬರಲಿದೆ. ಕೂಚ್‌ ಬೆಹರ್‌ನಲ್ಲಿ ಭಾರಿ ಬಿಗಿ ಭದ್ರತೆಯೊಂದಿಗೆ ಇಂದು ಚುನಾವಣೆ ನಡೆದಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಎಂಪಿ ನಿಶಿಕಾಂತ್ ಪ್ರಾಣಾನಿಕ್ ಅವರನ್ನು ಕಣಕ್ಕಿಳಿಸಿದರೆ ಟಿಎಂಸಿ ಜಗದೀಶ್ ಬಸುನಿಯಾ ಅವರನ್ನು ಕಣಕ್ಕಿಳಿಸಿದೆ.

West Bengal: ರಾಮನವಮಿ ಶೋಭಾಯಾತ್ರೆಯ ಮೇಲೆ ಕಲ್ಲುತೂರಾಟ, ನಂದಿಗ್ರಾಮದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ!

ಕೂಚ್‌ಬೆಹರ್ ಉತ್ತರ ಬಂಗಾಳದ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು 2021ರ ವಿಧಾನಸಭಾ ಚುನಾವಣೆಯ ವೇಳೆ ಇಲ್ಲಿ ಭಾರಿ ಗಲಾಟೆಗಳಾಗಿದ್ದವು, ಈ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಸೀತಾಲ್‌ಕುಚಿ ಚುನಾವಣಾ ಕೇಂದ್ರದ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಜನರ ನಡುವೆ ನಡೆದ ಕಲಹದಲ್ಲಿ ನಾಲ್ವರು ಸಾವಿಗೀಡಾಗಿದ್ದರು. ಇದಾದ ನಂತರ ಚುನಾವಣಾ ಆಯೋಗ ಇಲ್ಲಿ ಚುನಾವಣೆಯನ್ನೇ ನಿಲ್ಲಿಸಿತ್ತು. ಹಾಗೆಯೇ ಪಶ್ಚಿಮ ಬಂಗಾಳದ ಅಲಿಪುರದುರ್‌ ಹಾಗೂ ಜಲಪೈಗುರಿ ಕ್ಷೇತ್ರದಲ್ಲೂ ಇಂದು ಚುನಾವಣೆ ನಡೆಯುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ 2019ರಲ್ಲಿ ಬಿಜೆಪಿ ಗೆಲುವುದು ಸಾಧಿಸಿತ್ತು. ಹಾಗೂ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿ 22 ಸೀಟು ಗಳಿಸಿದ್ದಾರೆ ಬಿಜೆಪಿ 18 ಸೀಟುಗಳನ್ನು ಗಳಿಸಿತ್ತು.

ಲೋಕ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಲಿದೆ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

click me!