
ಚೆನ್ನೈ (ನ.23): ತಮಿಳುನಾಡು ರಾಜಧಾನಿ ಚೆನ್ನೈ ತಾಪಮಾನ ಮತ್ತೆ ಸುದ್ದಿಯಲ್ಲಿದೆ. ಫಾರ್ ಎ ಚೇಂಜ್ ಈ ಬಾರಿ ಚೆನ್ನೈ ಬಿಸಿಲಿನ ಕಾರಣಕ್ಕೆ ಸುದ್ದಿಯಾಗುತ್ತಿಲ್ಲ. ಚೆನ್ನೈನಲ್ಲಿ ಅಪಾರವಾದ ಚಳಿಯಿದೆ. ಹಾಗಂತ ಚೆನ್ನೈ ತಾಪಮಾನವೇನೂ ಮೈನಸ್ ಡಿಗ್ರಿಗೆ ತಿರುಗಿಲ್ಲ. 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನಕ್ಕೆ ಇಳಿದಿರುವುದೇ ಚೆನ್ನೈ ಜನಕ್ಕೆ ತಡೆದುಕೊಳ್ಳಲು ಆಗುತ್ತಿಲ್ಲ. ಸಾಮಾನ್ಯವಾಗಿ ಚೆನ್ನೈ ಬಿಸಿಲಿಗೆ ಒಗ್ಗಿಕೊಂಡಿದ್ದ ಚೆನ್ನೈ ಜನರು, 22 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿದ ಬೆನ್ನಲ್ಲಿಯೇ ಚೆನ್ನೈನಲ್ಲಿ ಹಿಮಪಾತದ ಋತು ಆರಂಭವಾಗಿದೆ ಎಂದು ಟ್ರೋಲ್ ಮಾಡಲು ಆರಂಭ ಮಾಡಿದ್ದಾರೆ. ಸಾಮಾನ್ಯವಾಗಿ ಚೆನ್ನೈನಲ್ಲಿ ಬಿಸಿಲು ಇರುತ್ತದೆ. ತಾಪಮಾನ ಇಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿರುವುದನ್ನು, ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಎಂದು ಟ್ರೋಲ್ ಮಾಡಿದ್ದಾರೆ. ತಾಪಮಾನದ ಕಾರಣದಿಂದಾಗಿ ಚೆನ್ನೈ ವಿಚಾರ ಬುಧವಾರ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಟಾಪಿಕ್ ಎನಿಸಿತ್ತು. ಕರಾವಳಿಯ ಮಹಾನಗರದಲ್ಲಿ ತಾಪಮಾನ ಇಷ್ಟು ಕನಿಷ್ಠ ಪ್ರಮಾಣಕ್ಕೆ ಇಳಿಯುವುದು ಬಹಳ ಅಪರೂಪ ಎಂದು ಚರ್ಚೆ ಮಾಡುತ್ತಿದ್ದಾರೆ. ಬುಧವಾರ ಮಾತ್ರವಲ್ಲ, ಸೋಮವಾರ ಕೂಡ ಚೆನ್ನೈನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಚೆನ್ನೈನ ಅಚ್ಚರಿಯ ತಾಪಮಾನ ಟ್ವಿಟರ್‌ನಲ್ಲಿ ಸಾಕಷ್ಟು ಮೀಮ್ಸ್‌ಗಳಿಗೆ ಕಾರಣವಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಉತ್ತರ ತಮಿಳುನಾಡು ಕರಾವಳಿಯತ್ತ ನಿಧಾನವಾಗಿ ಚಲಿಸುತ್ತಿದ್ದು, ಮಂಗಳವಾರ ಮಧ್ಯಾಹ್ನ ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಎಸ್ ಬಾಲಚಂದ್ರನ್ ಹೇಳಿದ್ದಾರೆ. ಬಿಸಿ ಮತ್ತು ಆರ್ದ್ರ ವಾತಾವರಣಕ್ಕೆ ಚೆನ್ನೈ ಹೆಸರುವಾಸಿಯಾಗಿರುವುದರಿಂದ, ತಂಪಾದ ಹವಾಮಾನವು ಟ್ವಿಟರ್‌ನಲ್ಲಿ #ChennaiSnow ಟ್ರೆಂಡಿಗ್ ಆಗಲು ಕಾರಣವಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ಟ್ವಿಟರ್‌ನಲ್ಲಿ ಚೆನ್ನೈನ ಚಳಿ ಟ್ರೋಲ್ ಆಗುತ್ತಿದ್ದರೂ, ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು-ಪುದುಚೇರಿ, ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೈಕೊರೆಯುವ ಚಳಿ ಮಧ್ಯೆ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ..!
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಚೆನ್ನೈ ಸ್ನೋಗೆ ತನ್ನ ಮೀಮ್ಸ್‌ಗಳನ್ನುಮಾಡಿದೆ. ಯೆಲ್‌ಲವ್ ಮತ್ತು ವಿಶಲ್ ಪೋಡು ಹ್ಯಾಶ್‌ಟ್ಯಾಗ್ ಮೂಲಕ ಜನಪ್ರಿಯವಾಗಿರುವ ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈನಲ್ಲಿನ ನಕಲಿ ಸ್ನೋ ಫಾಲ್‌ನ ವಿಡಿಯೋ ಪ್ರಕಟಿಸಿ ಅದಕ್ಕೆ, ಚೆನ್ನೈ ಸ್ನೋ ಎನ್ನುವುದು ನಮ್ಮ ಹೊಸ ಫೇವರಿಟ್ ಆಕ್ಸಿಮಾರನ್ ಎಂದಿದ್ದಾರೆ.
ತಗ್ಗಿದ ಮಳೆ: ರಾಜ್ಯದಲ್ಲೀಗ ಮೈ ಕೊರೆಯುವಷ್ಟು ಚಳಿ!
ಸಾಮಾನ್ಯವಾಗಿ, ಚೆನ್ನೈ ಬಿಸಿಲಿನ ವಾತಾವರಣಕ್ಕೆ ಹೆಸರುವಾಸಿಯಾಗಿದೆ ಮತ್ತು ತಾಪಮಾನದಲ್ಲಿನ ಈ ಕುಸಿತವು ಸ್ಥಳೀಯ ಜನರ ಅಚ್ಚರಿಗೆ ಕಾರಣವಾಗಿದೆ. ಕೆಲವರು ತಂಪಾದ ಗಾಳಿಯನ್ನು ಆನಂದಿಸುತ್ತಿದ್ದಾರೆ ಮತ್ತು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಟ್ರೆಂಡ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ