
ನವದೆಹಲಿ[ಡಿ.16]: ಬಾಲಾಕೋಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಮೇಲೆ ದಂಡೆತ್ತಿ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳೇನಾದರೂ ದಾಳಿ ನಡೆಸುವಲ್ಲಿ ಸಫಲವಾಗಿದ್ದರೆ, ತಕ್ಕ ತಿರುಗೇಟು ನೀಡಲು ಭಾರತೀಯ ವಾಯುಪಡೆ ಸಜ್ಜಾಗಿತ್ತು. ಪಾಕ್ ಸೇನಾ ನೆಲೆಗಳ ಮೇಲೆಯೇ ಮುಗಿಬೀಳುವ ಮೂಲಕ ಉಭಯ ದೇಶಗಳ ನಡುವಣ ತ್ವೇಷಮಯ ಪರಿಸ್ಥಿತಿಯನ್ನು ಇನ್ನಷ್ಟುತಾರಕಕ್ಕೇರಿಸಲು ಮುಂದಾಗಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಬಾಲಾಕೋಟ್ ದಾಳಿ ಸಂದರ್ಭದಲ್ಲಿ ವಾಯುಪಡೆ ಮುಖ್ಯಸ್ಥರಾಗಿದ್ದ, ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಿರುವ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಇದೇ ಮೊದಲ ಬಾರಿಗೆ ಈ ವಿಷಯ ತಿಳಿಸಿದ್ದಾರೆ.
ಚಂಡೀಗಢದಲ್ಲಿ ಆಯೋಜನೆಗೊಂಡಿದ್ದ ಮಿಲಿಟರಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಫೆ.27ರಂದು ಭಾರತದ ಮೇಲೆ ಪಾಕಿಸ್ತಾನ ದಂಡೆತ್ತಿ ಬಂದಿತ್ತು. ಒಂದು ವೇಳೆ ಆ ದೇಶದ ವಿಮಾನಗಳೇನಾದರೂ ನಿಗದಿತ ಗುರಿಗಳ ಮೇಲೆ ದಾಳಿ ನಡೆಸಿದ್ದರೆ, ವಾಯುಪಡೆ ಕೂಡ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿಗೆ ಸಜ್ಜಾಗಿತ್ತು ಎಂದು ಹೇಳಿದ್ದಾರೆ. ಹಾಗೇನಾದರೂ ಆಗಿದ್ದರೆ, ಅಣ್ವಸ್ತ್ರ ಹೊಂದಿರುವ ಉಭಯ ದೇಶಗಳ ನಡುವೆ ಬಹಿರಂಗ ಸಮರವೇ ಆರಂಭವಾಗುತ್ತಿತ್ತು.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಶಿಬಿರಗಳ ಮೇಲಷ್ಟೇ ವಾಯುಪಡೆ ದಾಳಿ ನಡೆಸಿತ್ತು. ಬೇರೆ ಉದ್ದೇಶವೇನಾದರೂ ಇದ್ದಿದ್ದರೆ, ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ