ಆಂಧ್ರದಲ್ಲಿ ಎಲ್ಲಾ ಶಾಲೆಗಳಲ್ಲಿ ತೆಲುಗು, ಉರ್ದು ಮಾಧ್ಯಮ ಬಂದ್!

By Suvarna News  |  First Published Dec 16, 2019, 9:04 AM IST

ಆಂಧ್ರದಲ್ಲಿ ಎಲ್ಲಾ ಶಾಲೆಗಳೂ ಆಂಗ್ಲ ಮಾಧ್ಯಮವಾಗಿ ಬದಲು| 1-6ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲೇ ಬೋಧನೆ| ತೆಲುಗು, ಉರ್ದು ಕಡ್ಡಾಯ ವಿಷಯವಾಗಿ ಬೋಧನೆ


ಅಮರಾವತಿ[ಡಿ.16]: ಅತ್ಯಾಚಾರಿಗಳಿಗೆ ಕೇವಲ 21 ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕ್ರಾಂತಿಕಾರಕ ನಿರ್ಧಾರ ಕೈಗೊಂಡ ಆಂಧ್ರಪ್ರದೇಶ, ಇದೀಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದ ಅನ್ವಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲೇ ಬೋಧಿಸುವುದು ಕಡ್ಡಾಯವಾಗಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಕಾನೂನಿನ ಬಲ ನೀಡಲು ನಿರ್ಧರಿಸಿದೆ.

ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಇಂಥ ನಿರ್ಧಾರ ಎಂದಿರುವ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ಆಂಧ್ರಪ್ರದೇಶ ಶಿಕ್ಷಣ ಕಾಯ್ದೆಯ 1982ಕ್ಕೆ ತಿದ್ದುಪಡಿ ತಂದು ಪ್ರಸಕ್ತ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಅಂಗೀಕಾರಕ್ಕೆ ನಿರ್ಧರಿಸಿದ್ದಾರೆ.

Latest Videos

undefined

ಹೊಸ ಶಿಕ್ಷಣ ನೀತಿ ಅನ್ವಯ, ಎಲ್ಲಾ ಶಾಲೆಗಳಲ್ಲಿ ತೆಲುಗು ಮತ್ತು ಉರ್ದು ಭಾಷೆಯಾಗಿ ಕಲಿಸುವುದು ಕಡ್ಡಾಯ. ಉಳಿದಂತೆ ಎಲ್ಲಾ ವಿಷಯಗಳನ್ನು ಆಂಗ್ಲ ಮಾಧ್ಯಮದಲ್ಲೇ ಕಲಿಸಬೇಕಾಗುತ್ತದೆ. ಸರ್ಕಾರದ ಈ ಪ್ರಸ್ತಾಪಕ್ಕೆ ಸಮಾಜದ ವಿವಿಧ ವಲಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಎಷ್ಟೇ ಪ್ರತಿರೋಧ ಬಂದರೂ, ಮಸೂದೆ ಅಂಗೀಕಾರ ಮಾಡಿಯೇ ಸಿದ್ಧ ಎಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 1-6ನೇ ತರಗತಿವರೆಗಿನ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನೂ 2020-21ರ ಸಾಲಿನಿಂದ ಆಂಗ್ಲ ಮಾಧ್ಯಮವಾಗಿ ಬದಲಾಯಿಸಲಾಗುವುದು. 2021--22ನೇ ಸಾಲಿನಿಂದ 7-10ನೇ ತರಗತಿಗಳನ್ನು ಆಂಗ್ಲ ಮಾಧ್ಯಮಕ್ಕೆ ಬದಲಾಯಿಸಲಾಗುವುದು. ಆಂಗ್ಲ ವಿಷಯದಲ್ಲಿ ಬೋಧನೆಗೆ ಅಗತ್ಯ ಪ್ರಮಾಣದ ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ತೆಲುಗು ಮಾಧ್ಯಮದ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.

ಈ ಬದಲಾವಣೆ ಏಕೆ?

ತಂತ್ರಜ್ಞಾನದಿಂದ ಮುನ್ನಡೆಸಲ್ಪಡುತ್ತಿರುವ ವಿಶ್ವದಲ್ಲಿ, ಬೇಡಿಕೆಗೆ ತಕ್ಕ ಯುವ ಸಮುದಾಯವನ್ನು ನಿರ್ಮಿಸಲು ಆಂಗ್ಲ ಮಾಧ್ಯಮದಲ್ಲಿ ಬೋಧನೆ ಅಗತ್ಯ. ಇಲ್ಲದೇ ಹೋದಲ್ಲಿ ನಾವು ಅವಕಾಶವನ್ನು ಕೈಚೆಲ್ಲಿದಂತೆ ಆಗುತ್ತದೆ ಎಂಬುದು ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ವಾದ.

click me!