'ಮಹಿಳೆಯರೇ, ಅಯ್ಯಪ್ಪನ ದೇಗುಲಕ್ಕೆ ಹೋಗಬೇಡಿ, ಪುರುಷರ ಮನಸ್ಸು ವಿಚಲಿತವಾಗುತ್ತೆ'

By Suvarna NewsFirst Published Dec 16, 2019, 8:48 AM IST
Highlights

ಮಹಿಳೆಯರೇ, ಅಯ್ಯಪ್ಪನ ದೇಗುಲಕ್ಕೆ ಹೋಗಬೇಡಿ| 10ರಿಂದ 50 ವರ್ಷದ ಮಹಿಳೆಯರಿಗೆ ಗಾಯಕ ಯೇಸುದಾಸ್‌ ಮನವಿ|  ಈ ಭಕ್ತೆಯರನ್ನು ಅಯ್ಯಪ್ಪ ಕಣ್ತೆರೆದೂ ನೋಡುವುದಿಲ್ಲ| ಆದರೆ ಮಹಿಳಾ ಭಕ್ತರ ಭೇಟಿಯಿಂದ ಪುರುಷ ಭಕ್ತರ ಮನಸ್ಸು ವಿಚಲಿತ

ಶಬರಿಮಲೆ[ಡಿ.16]: ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಹೋಗಬಾರದು. ಇವರು ಇಲ್ಲಿಗೆ ಭೇಟಿ ನೀಡುವುದು ಪುರುಷ ಭಕ್ತರ ಮನಸ್ಸನ್ನು ವಿಚಲಿತಗೊಳಿಸುತ್ತದೆ ಎಂದು ಖ್ಯಾತ ಗಾಯಕ ಕೆ.ಜೆ. ಯೇಸುದಾಸ್‌ ಹೇಳಿದ್ದಾರೆ.

ಯೇಸುದಾಸ್‌ ಅವರು ಖುದ್ದು ಅಯ್ಯಪ್ಪ ಭಕ್ತರಾಗಿದ್ದು, ‘ಹರಿವರಾಸನಂ’ ಎಂಬ ಅಯ್ಯಪ್ಪನ ಹಾಡಿನ ಮೂಲಕ ಶಬರಿಮಲೆ ಭಕ್ತವರ್ಗಕ್ಕೆ ಅತ್ಯಂತ ಆಪ್ತರಾದವರು. ಅವರೇ ಈಗ ಮಹಿಳಾ ಪ್ರವೇಶ ವಿರೋಧಿಸಿರುವುದು ಇಲ್ಲಿ ಗಮನಾರ್ಹ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸುಂದರ ಹುಡುಗಿಯೊಬ್ಬಳು ಆಧುನಿಕ ಶೈಲಿಯ ಉಡುಪು ಧರಿಸಿ ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಿಸಿದರೆ, ಅಯ್ಯಪ್ಪನೇ ಕಣ್ತೆರೆದು ನೋಡುವುದಿಲ್ಲ. ಆದರೆ ಅಯ್ಯಪ್ಪನ ಭಕ್ತರು ಆಕೆಯನ್ನು ನೋಡುತ್ತಾರೆ. ಇದು ಒಳ್ಳೆಯದಲ್ಲ. ಭಕ್ತರ ಉದ್ದೇಶಗಳು ಬದಲಾಗುತ್ತವೆ. ಅದಕ್ಕೆಂದೇ ಮಹಿಳೆಯರು ಅಲ್ಲಿಗೆ ಹೋಗಬಾರದು ಎಂದು ನಾನು ಹೇಳುತ್ತಿದ್ದೇನೆ. ಇತರ ದೇವಾಲಯಗಳಿವೆ. ಅವರು (ಮಹಿಳೆಯರು) ಅಲ್ಲಿಗೆ ಹೋಗಬಹುದು’ ಎಂದು ಅಭಿಪ್ರಾಯಪಟ್ಟರು.

‘ದಶಕಗಳ ಹಿಂದೆ ಅಯ್ಯಪ್ಪನನ ಮಾಲಾಧಾರಿಗಳು ವ್ರತದ 48 ದಿನದ ಸಮಯದಲ್ಲಿ ಹೆಂಡತಿಯನ್ನೂ ಕಣ್ಣೆತ್ತಿ ನೋಡುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ಮಹಿಳೆಯರನ್ನು ಅಯ್ಯಪ್ಪನ ಭಕ್ತರನ್ನು ಕೆರಳಿಸಬಾರದು ಎಂದು ನಾನು ಕೋರುತ್ತಿದ್ದೇನೆ’ ಎಂದು ಯೇಸುದಾಸ್‌ ಮನವಿ ಮಾಡಿದರು.

ಅಯ್ಯಪ್ಪನ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಹೋಗಲು ಸುಪ್ರೀಂ ಕೋರ್ಟ್‌ ಕಳೆದ ವರ್ಷವೇ ಅನುಮತಿ ನೀಡಿದೆ. ಆದರೆ ಸಂಪ್ರದಾಯವಾದಿಗಳ ವಿರೋಧದ ಕಾರಣ ಈ ವರ್ಷ ಈ ವಯೋಮಾನದ ಯಾವ ಮಹಿಳೆಯೂ ಪ್ರವೇಶಿಸಲು ಸಾಧ್ಯವಾಗಿಲ್ಲ. ಕೆಲವು ಮಹಿಳೆಯರು ದರ್ಶನಕ್ಕೆ ಅನುವು ಮಾಡಿಕೊಡುವಂತೆ ಸುಪ್ರೀಂ ಕೋರ್ಟ್‌ ಮೊರೆಗೂ ಹೋಗಿದ್ದಾರೆ.

click me!