ಮುಂದಿನ 25 ವರ್ಷಗಳ ಕಾಲವು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಯುವಕರ ವೃತ್ತಿಜೀವನಕ್ಕೆ ನಿರ್ಣಾಯಕವಾಗಲಿದೆ. ಭವಿಷ್ಯದಲ್ಲಿ ಹೊಸ ಸಮಾಜ, ಅಭಿವೃದ್ಧಿ ಹೊಂದಿದ ಭಾರತ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನವದೆಹಲಿ (ಡಿಸೆಂಬರ್ 12, 2023): ‘ಪ್ರಸ್ತುತ ಅವಧಿಯಲ್ಲಿ ಭಾರತವು ಭಾರಿ ಪ್ರಮಾಣದ ಅಭಿವೃದ್ಧಿ ಕಾಣಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂದಿನ ಯುವ ಪೀಳಿಗೆಯು ದೇಶಕ್ಕೆ ನಾಯಕತ್ವ ಒದಗಿಸುವ ರೀತಿಯಲ್ಲಿ ಬೆಳವಣಿಗೆ ಕಾಣಬೇಕು ಹಾಗೂ ಇತರ ಎಲ್ಲ ವಿಷಯಗಳನ್ನು ಬದಿಗೊತ್ತಿ ರಾಷ್ಟ್ರ ಹಿತಕ್ಕೆ ಗಮನ ನೀಡಬೇಕು. ಇದಕ್ಕಾಗಿ ದಿನದ 24 ಗಂಟೆಯೂ ಕೆಲಸ ಮಾಡುವ ಅಗತ್ಯವಿದೆ’ ಎಂದು ಕರೆ ನೀಡಿದ್ದಾರೆ.
ಸೋಮವಾರ ‘ವಿಕಸಿತ ಭಾರತ@2047: ಯುವಜನರ ಧ್ವನಿ’ ಎಂಬ ಅಭಿಯಾನಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮೋದಿ ಮಾತನಾಡಿದರು. ಈ ಅಭಿಯಾನವು ‘ಭಾರತವನ್ನು ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆ ನಡೆಯುವ 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು. ಅದಕ್ಕಾಗಿ ಯುವಕರು ಉಪಯುಕ್ತ ಸಲಹೆ - ಸೂಚನೆಗಳನ್ನು ನೀಡಬೇಕು’ ಎಂಬ ಗುರಿ ಹೊಂದಿದೆ.
undefined
ಇದನ್ನು ಓದಿ: ವಿಕಸಿತ ಭಾರತ @2047: ಮೋದಿ ಮಹತ್ವಾಕಾಂಕ್ಷಿ ಅಭಿಯಾನ ಇಂದಿನಿಂದ
ತಮ್ಮ ಭಾಷಣ ಆಲಿಸಲು ದೇಶದ ವಿವಿಧ ರಾಜಭವನಗಳಲ್ಲಿ ನೆರೆದಿದ್ದ ಕಾಲೇಜು/ವಿವಿ ಸಿಬ್ಬಂದಿಗಳಿಗೆ ವಿಶಿಷ್ಟ ಸಂದೇಶವೊಂದನ್ನು ಈ ವೇಳೆ ನೀಡಿದ ಮೋದಿ, ‘ದೇಶದ ಪ್ರಜೆಗಳಾದ ನಮಗೆ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ. ದೇಶವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆಯಾಗಲು ಇನ್ನೂ 25 ಅಮೃತ ವರ್ಷಗಳು ಬಾಕಿ ಇವೆ. ಈ ಗುರಿ ಸಾಧಿಸಲು ನಾವು ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ಆ ರೀತಿಯಲ್ಲಿ ನಾವು ಯುವ ಪೀಳಿಗೆಯನ್ನು ಸಿದ್ಧಪಡಿಸಬೇಕು. ಇಂದಿನ ಯುವ ಪೀಳಿಗೆಯು ದೇಶಕ್ಕೆ ನಾಯಕತ್ವ ನೀಡುವಂತೆ ರೂಪುಗೊಳ್ಳಬೇಕು ಹಾಗೂ ಬೇರೆಲ್ಲದಕ್ಕಿಂತ ರಾಷ್ಟ್ರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಇದು ಸಾಕಾರಗೊಳ್ಳುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು’ ಎಂದು ಹೇಳಿದರು.
‘ಭಾರತದ ಯುವ ಶಕ್ತಿಯು ಬದಲಾವಣೆಯ ಏಜೆಂಟರಾಗಿದ್ದಾರೆ ಹಾಗೂ ಅದೇ ಬದಲಾವಣೆಯ ಫಲಾನುಭವಿ ಕೂಡ ಆಗಿದ್ದಾರೆ. ಈಗ ಅಮೃತ ಕಾಲದ ಸಮಯ ಬಂದಿದೆ. ಇದು ಅಭಿವೃದ್ಧಿಯು ಉಚ್ಛ್ರಾಯ ಸ್ಥಿತಿಗೆ ತಲುಪಲು ಸಕಾಲವಾಗಿದೆ. ಯುವಜನರು ಈ ‘ಅಮೃತ ಕಾಲ’ದ ಪ್ರತಿಯೊಂದು ಕ್ಷಣವನ್ನು ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ನೀವು ಟ್ರಾಕ್ಟರ್ ಮಾಲೀಕರು, ನನ್ನ ಬಳಿ ಸೈಕಲ್ ಕೂಡ ಇಲ್ಲ; ಮೋದಿ ಮಾತಿಗೆ ನಕ್ಕು ನೀರಾದ ಗ್ರಾ.ಪಂ ಅಧ್ಯಕ್ಷೆ!
‘ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯು ಯುವಜನರಿಂದ ಸಬಲೀಕರಣಗೊಂಡಿದೆ. ಮುಂಬರುವ 25-30 ವರ್ಷಗಳಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆ (ಯುವಜನತೆ) ವಿಚಾರದಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿರಲಿದೆ ಮತ್ತು ಜಗತ್ತು ಇದನ್ನು ಗುರುತಿಸುತ್ತದೆ’ ಎಂದು ತಿಳಿಸಿದರು.
‘ಮುಂದಿನ 25 ವರ್ಷಗಳ ಕಾಲವು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಯುವಕರ ವೃತ್ತಿಜೀವನಕ್ಕೆ ನಿರ್ಣಾಯಕವಾಗಲಿದೆ. ಭವಿಷ್ಯದಲ್ಲಿ ಹೊಸ ಸಮಾಜ, ಅಭಿವೃದ್ಧಿ ಹೊಂದಿದ ಭಾರತ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿದೆ’ ಎಂದ ಅವರು, ‘ನಮ್ಮ ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತ ರೂಪಿಸಲು ಕ್ರಿಯಾ ಯೋಜನೆಯೊಂದಿಗೆ ದೇಶದ ಪ್ರತಿಯೊಬ್ಬ ಯುವಕರನ್ನು ಸಂಪರ್ಕಿಸಲು ಬಯಸುತ್ತದೆ’ ಎಂದರು.
‘ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ಎಂಬ ಮಂತ್ರವು ಹಲವು ವರ್ಷಗಳಿಂದ ಉತ್ತಮ ಕೆಲಸ ಮಾಡಿದೆ. ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ ಅಭಿಯಾನ, ಕರೋನ ವೈರಸ್ ಸಾಂಕ್ರಾಮಿಕ ನಿಯಂತ್ರಣ- ಹೀಗೆ ಹಲವು ಯಶಸ್ಸುಗಳ ಹಿಂದೆ ಎಲ್ಲರ ಪ್ರಯತ್ನವಿದೆ. ಹೀಗಾಗಿ ಈಗ ವಿಕಸಿತ ಭಾರತವು ಪ್ರತಿಯೊಬ್ಬರ ಶ್ರಮದಿಂದ ನಿರ್ಮಾಣವಾಗಬೇಕಿದೆ. ದೇಶದ ಭವಿಷ್ಯ ಬರೆಯುವ ಮಹತ್ತರ ಅಭಿಯಾನ ಇದಾಗಿದೆ’ ಎಂದರು.
‘ಭಾರತವನ್ನು ವೇಗವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಮತ್ತು ಸುಧಾರಣೆಗಾಗಿ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಬೇಕು. ಈ ಬಗ್ಗೆ ಶಿಕ್ಷಕರು, ವಿಶ್ವವಿದ್ಯಾನಿಲಯಗಳು, ಪ್ರತಿಯೊಂದು ಸಂಸ್ಥೆ, ಪ್ರತಿಯೊಬ್ಬ ವ್ಯಕ್ತಿಯೂ ಆಲೋಚಿಸಬೇಕು ಮತ್ತು ಸಂಕಲ್ಪ ಮಾಡಬೇಕು. ನಿಮ್ಮ ಗುರಿಗಳ ಗುರಿ, ನಿಮ್ಮ ಸಂಕಲ್ಪಗಳು ಒಂದೇ ಆಗಿರಬೇಕು. ಅದುವೇ ‘ಅಭಿವೃದ್ಧಿ ಹೊಂದಿದ ಭಾರತ’ ದ ಸಂಕಲ್ಪ’ ಎಂದರು.
‘ವಿಕಸಿತ ಭಾರತದ ವಿಶೇಷ ಅಭಿಯಾನ ದೇಶದ ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆಯಬೇಕು. ಇಂದು ಇಡೀ ಜಗತ್ತು ಭಾರತದ ಯುವಕರ ಮೇಲೆ ಕಣ್ಣಿಟ್ಟಿದೆ’ ಎಂದರು.
ವಿಕಸಿತ ಭಾರತಕ್ಕೆ ಐಡಿಯಾ ಕೊಡಲು ವೆಬ್‌ಸೈಟ್
‘ವಿಕಸಿತ ಭಾರತ’ಕ್ಕೆ ಸಲಹೆ ನೀಡಲು ‘ಐಡಿಯಾಸ್’ ಪೋರ್ಟಲ್ ಆರಂಭಿಸಲಾಗುವುದು. ಈ ಪೋರ್ಟಲ್‌ನಲ್ಲಿ 5 ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಜನರು ಸಲಹೆ ನೀಡಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘10 ಉತ್ತಮ ಸಲಹೆಗಳಿಗೆ ಬಹುಮಾನ ಸಹ ನೀಡಲಾಗುತ್ತದೆ. ನೀವು MyGov ಪೋರ್ಟಲ್‌ನಲ್ಲಿಯೂ ನಿಮ್ಮ ಸಲಹೆಗಳನ್ನು ನೀಡಬಹುದು," ಎಂದು ಅವರು ಹೇಳಿದರು,