55 ವರ್ಷದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಯೋಧರೊಬ್ಬರು, ಮೈ ಕೊರೆಯುವಂತಹ ಮೈನಸ್ 30 ಡಿಗ್ರಿ ತಾಪಮಾನದಲ್ಲಿ ನಿರಂತರ 65 ಪುಶ್‌ಅಪ್‌ಗಳನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಹಿಮದ ಮೇಲೆ ಅವರು ಪುಶ್‌ಅಪ್ ಮಾಡುತ್ತಿರುವ ವಿಡಿಯೋವನ್ನು ಐಟಿಬಿಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಸೇನೆಯ ಯೋಧರೊಬ್ಬರು ಈಗ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಪುಶ್‌ಅಪ್ ಮಾಡಿದ್ದಾರೆ.
ಈ ಪುಶ್‌ಅಪ್ ಮಾಡುವ ವೇಳೆ ಅವರು ಸುಮಾರು 17,500 ಅಡಿ ಎತ್ತರದಲ್ಲಿದ್ದರು. 'ಹಿಮಾವೃತ ಎತ್ತರದಲ್ಲಿ ಪುಶ್‌ಅಪ್‌ಗಳು, ITBP ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ (ವಯಸ್ಸು- 55 ವರ್ಷಗಳು) ಅವರು ಲಡಾಖ್‌ನಲ್ಲಿ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿಗಳಷ್ಟು ಎತ್ತರದಲ್ಲಿ ನಿರಂತರ 60 ಕ್ಕೂ ಹೆಚ್ಚು ಪುಷ್-ಅಪ್‌ಗಳನ್ನು ಪೂರ್ಣಗೊಳಿಸಿದ್ದಾರೆ'ಎಂದು ಬರೆದು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ (Ratan Singh Sonal) ಅವರು ಲಡಾಖ್ ಪ್ರದೇಶದಲ್ಲಿ ತೀವ್ರವಾದ ಚಳಿಯ ಏರಿಳಿತಗಳ ನಡುವೆ ಈ ಸಾಹಸ ಮಾಡಿದರು.
ತಾಪಮಾನವು -30 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಾಗ ಅವರು ಕೇವಲ 1 ನಿಮಿಷ 12 ಸೆಕೆಂಡುಗಳಲ್ಲಿ 65 ಕ್ಲೀನ್ ಪುಷ್ಅಪ್‌ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, 55 ವರ್ಷದ ಕಮಾಂಡೆಂಟ್ ಇಂದು ಬೆಳಗ್ಗೆ ಈ ಸಾಧನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ, ಬಿಎಸ್‌ಎಫ್ ಜವಾನನೊಬ್ಬ ಹಿಮದ ಮೇಲೆ 40 ಕ್ಕೂ ಹೆಚ್ಚು ಪುಷ್-ಅಪ್‌ಗಳನ್ನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಎಸ್‌ಎಫ್ ಯೋಧ 40 ಸೆಕೆಂಡುಗಳಲ್ಲಿ 47 ಪುಶ್ಅಪ್ ಮಾಡುತ್ತಿರುವ ವಿಡಿಯೋಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಒಂದು ನಿಮಿಷದಲ್ಲಿ 109 ಫಿಂಗರ್ ಟಿಪ್ ಫುಶ್ ಅಪ್ಸ್... ಗಿನ್ನೆಸ್ ದಾಖಲೆ ಮುರಿದ ಮಣಿಪುರಿ ಹುಡ್ಗ
ಕೆಲ ದಿನಗಳ ಹಿಂದೆ ಮಣಿಪುರದ 24ರ ಹರೆಯದ ಹುಡುಗನೋರ್ವ ಒಂದು ನಿಮಿಷದಲ್ಲಿ 109 ಫಿಂಗರ್ ಫುಶ್ ಅಪ್ಸ್ ಮಾಡುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದಿದ್ದಾನೆ. ತೌನೊಜಮ್ ನಿರಂಜೋಯ್ ಸಿಂಗ್ ( Thounaojam Niranjoy Singh) ಎಂಬಾತನೇ ಈ ಸಾಧನೆ ಮಾಡಿದ ಹುಡುಗ. ಈತ ಕೇವಲ ಒಂದು ನಿಮಿಷದಲ್ಲಿ ಆತ ಅತಿ ಹೆಚ್ಚು ಪುಶ್-ಅಪ್ (ಫಿಂಗರ್ಸ್ ಟಿಪ್ಸ್ ಫುಶ್ ಅಪ್ಸ್) ಮಾಡಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. (Finger Tip Push-ups - ಇಡೀ ಅಂಗೈಯನ್ನು ಆಧಾರವಾಗಿಟ್ಟು ಮಾಡುವ ಬದಲು ಕೇವಲ ಬೆರಳುಗಳ ತುದಿಯನ್ನಷ್ಟೇ ದೇಹಕ್ಕೆ ಆಧಾರವಾಗಿರಿಸಿ ಮಾಡುವ ಫುಶ್‌ಅಪ್ಸ್)
ಮೈ ಕೊರೆಯುವ ಹಿಮದಲ್ಲಿ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ
ಈ ಹಿಂದೆಯೂ ನಿರಂಜೋಯ್ ಸಿಂಗ್ ಎರಡು ಬಾರಿ ಗಿನ್ನಿಸ್ ದಾಖಲೆ ಬರೆದಿದ್ದ. ಆದರೆ ಆ ಹಳೆಯ ದಾಖಲೆಯನ್ನು ಒಂದೇ ನಿಮಿಷದಲ್ಲಿ 109 ಪುಷ್-ಅಪ್‌ಗಳನ್ನು ಮಾಡುವ ಮೂಲಕ ಮುರಿದಿದ್ದಾರೆ. ಈ ಹಿಂದೆ ಅವರು ಒಂದೇ ನಿಮಿಷದಲ್ಲಿ 105 ಪುಶ್-ಅಪ್ ಮಾಡಿದ್ದರು. ನಿರಂಜೋಯ್ ಸಿಂಗ್ ಅವರ ಈ ಸಾಹಸವನ್ನು ದಾಖಲಿಸುವ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಯತ್ನವನ್ನು ಮಣಿಪುರ (Manipur)ದ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆಯೂ ಇಂಫಾಲ್‌ನ (Imphal) ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ